ಸಾರಾಂಶ
50 ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಕನ್ನಡದ ಪ್ರತಿಜ್ಞೆ ಮೂಲಕ ದೀಕ್ಷೆ ಕೊಡುವ ಕೆಲಸ ಕರ್ನಾಟಕ ರಕ್ಷಣಾ ವೇದಿಕೆ ಮಾಡಲಿದೆ. ಬೆಳಗಾವಿಯಿಂದ ಆರಂಭವಾದ ದೀಕ್ಷಾ ಕಾರ್ಯಕ್ರಮ 31 ಜಿಲ್ಲೆಗಳಿಗೂ ಹರಡಲಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
50 ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಕನ್ನಡದ ಪ್ರತಿಜ್ಞೆ ಮೂಲಕ ದೀಕ್ಷೆ ಕೊಡುವ ಕೆಲಸ ಕರ್ನಾಟಕ ರಕ್ಷಣಾ ವೇದಿಕೆ ಮಾಡಲಿದೆ. ಬೆಳಗಾವಿಯಿಂದ ಆರಂಭವಾದ ದೀಕ್ಷಾ ಕಾರ್ಯಕ್ರಮ 31 ಜಿಲ್ಲೆಗಳಿಗೂ ಹರಡಲಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.ಕರವೇ ಕಾರ್ಯಕರ್ತರ ಬೃಹತ್ ಮೆರವಣಿಗೆಗೆ ಭಾನುವಾರ ಚಾಲನೆ ನೀಡಿ, ನಂತರ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ದೀಕ್ಷೆ ಪ್ರತಿಜ್ಞೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಬೆಳಗಾವಿ ಜಿಲ್ಲೆಯ 2500ಕ್ಕೂ ಹೆಚ್ಚು ಕಾರ್ಯಕರ್ತರು ಕನ್ನಡದ ದೀಕ್ಷಾ ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದು ಹೇಳಿದರು.
ಬೆಳಗಾವಿ ಬಳಿಕ ಬೀದರ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ನಾಡು, ನುಡಿ, ಗಡಿ ರಕ್ಷಣೆಗೆ ಕಂಕಣಬದ್ಧರಾಗಿರುವ 78 ಲಕ್ಷದಷ್ಟು ಕಾರ್ಯಕರ್ತರಿದ್ದಾರೆ. ಸಂಘಟನೆಗೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಮೇಲೆ ನಂಬಿಕೆ ಇದೆ. ಕನ್ನಡದ ನಾಡು ನುಡಿ ಜಲ ನೆಲದ ವಿಚಾರದಲ್ಲಿ ಧಕ್ಕೆಯಾದರೆ ಅದಕ್ಕೆ ಸರಿಯಾದ ಉತ್ತರ ಕೊಡುವವರು ಕರವೇ ಕಾರ್ಯಕರ್ತರು ಮಾತ್ರ. ಈ ಭಾವನೆ ನಾಡಿನ 7 ಕೋಟಿ ಕನ್ನಡಿಗರಲ್ಲಿದೆ. ನಾಡಿನ ಹೋರಾಟದಲ್ಲಿ ಈ ನೆಲದ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದಕ್ಕಾಗಿ ಈ ದೀಕ್ಷಾ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ ಎಂದರು.ಬೆಳಗಾವಿ ರಣರಂಗವಾಗುವುದು ಬೇಡ:
ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಖರು ಬೆಳಗಾವಿಯಲ್ಲಿದ್ದಾರೆ. ಎಂಇಎಸ್ ಜೀವ ಹಲ್ಲಿಲ್ಲದ ಹಾವು ಇದ್ದಂತೆ. ಅವರ ಬೇರು ಈಗಾಗಲೇ ಒಣಗಿದೆ. ಕರಾಳ ದಿನದ ಪುಂಡಾಟ ನಡೆಯುವುದಿಲ್ಲ. ಬೆಳಗಾವಿ ರಣರಂಗವಾಗುವುದು ಬೇಡ. ಎಂಇಎಸ್‌ಗೆ ಕರಾಳ ದಿನಾಚರಣೆಗೆ ಅವಕಾಶ ಮಾಡಕೂಡದು ಇಲ್ಲವಾದಲ್ಲಿ ಹೋರಾಟ ಯಾವ ಸ್ವರೂಪದಲ್ಲಿರಲಿದೆ ಎಂಬುವುದನ್ನು ಈಗಲೇ ಹೇಳಲಾಗದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.