ಕನ್ನಡ ಎಂಬುದು ಸಂಸ್ಕೃತಿ, ಬದುಕಿನ ಕ್ರಮ: ರಾಜಪ್ಪ ಮಾಸ್ತರ್

| Published : Feb 10 2024, 01:46 AM IST / Updated: Feb 10 2024, 04:46 PM IST

ಸಾರಾಂಶ

ಕನ್ನಡ ಭಾಷೆಯ ಎದುರು ಅನ್ಯರು ಬಿರುಗಾಳಿಯಂತೆ ಎದುರು ಬಂದರೂ ಬೆಚ್ಚಿ ಬೆದರದೇ ಅಚ್ಚ ಹಸಿರಾಗಿ ಉಳಿದಿರುವುದಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವೇ ಸಾಕ್ಷಿ ಎಂದು ಸಮಾಜ ಚಿಂತಕ, ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಟಿ. ರಾಜಪ್ಪ ಮಾಸ್ತರ್ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಕನ್ನಡ ಎನ್ನುವುದು ಬರಿಯ ಭಾಷೆಯಲ್ಲ. ಅದೊಂದು ಸಂಸ್ಕೃತಿ ಹಾಗೂ ಬದುಕಿನ ಕ್ರಮ, ವಿಶಾಲ ಜಗತ್ತು. ಕನ್ನಡ ಭಾಷೆಯ ಎದುರು ಅನ್ಯರು ಬಿರುಗಾಳಿಯಂತೆ ಎದುರು ಬಂದರೂ ಬೆಚ್ಚಿ ಬೆದರದೇ ಅಚ್ಚ ಹಸಿರಾಗಿ ಉಳಿದಿರುವುದಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವೇ ಸಾಕ್ಷಿ ಎಂದು ಸಮಾಜ ಚಿಂತಕ, ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಟಿ. ರಾಜಪ್ಪ ಮಾಸ್ತರ್ ಹೇಳಿದರು.

ಶುಕ್ರವಾರ ಪಟ್ಟಣದ ಡಾ. ರಾಜ್ ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸದುದ್ದಕ್ಕೂ ಕನ್ನಡ ಕಾಲದಿಂದ ಕಾಲಕ್ಕೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅಂದು ಸಂಸ್ಕೃತ ಭಾಷೆಯ ಕಾಲಕ್ಕೂ ಬೆದರದ ಕನ್ನಡ ಸಂಸ್ಕೃತದ ಪದಗಳನ್ನೇ ತನ್ನಲ್ಲಿ ಜೀರ್ಣಿಸಿಕೊಂಡು ಉಳಿದು, ಬೆಳೆದಿದೆ. ಪ್ರಸ್ತುತ ದಿನಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಂಥ ಬಲಿಷ್ಠ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡುತ್ತಿವೆ. ಆದರೆ, ನಾವು ಬುದ್ಧಿವಂತರಾದರೆ ಯಾವ ಭಾಷೆಗಳನ್ನೂ ವಿರೋಧಿಸದೇ ನಮ್ಮ ಭಾಷೆ ಉಳಿಸಿಕೊಳ್ಳುವ ದಿಟ್ಟ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕರ್ನಾಟಕದಲ್ಲಿ ಓದುವ ಎಲ್ಲ ಮಕ್ಕಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವಂತಾಗಬೇಕು. ಹಿಂದಿ ಅಥವಾ ಇಂಗ್ಲಿಷ್ ದ್ವಿತೀಯ ಭಾಷೆಯಾಗಿ ಓದುವ ಯೋಜನೆ ಜಾರಿಯಾಗಬೇಕು. 

ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಅಂದರೆ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದಲ್ಲಿ ಮೀಸಲು ಸಿಗುವಂತಾದಾಗ ಮಾತ್ರ ಕನ್ನಡಕ್ಕೆ ಆನೆ ಬಲ ಬರುತ್ತದೆ. ಅನ್ಯರ ಮನೆಮಾತು ಯಾವುದೇ ಆಗಿರಲಿ ಅವರು ಬೀದಿಗೆ ಬಂದಾಗ ನಾವೆಲ್ಲಾ ಕನ್ನಡಿಗರಾಗಬೇಕು. ಇದರಿಂದ ನಾಡಿನ ಭಾಷೆ ಎಲ್ಲರನ್ನೂ ಒಟ್ಟು ಗೂಡಿಸಬಲ್ಲದು ಎಂದರು.ಸೊರಬ ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು ಎನ್ನುವ ಹೆಗ್ಗಳಿಕೆ ಇದೆ. 

ಜತೆಗೆ ಸಮೃದ್ಧ ಜಾನಪದ ಪರಂಪರೆಯೂ ನಮ್ಮ ಬೆನ್ನಿಗಿದೆ. ಇಲ್ಲಿಯ ಕೆಲವು ಜಾನಪದ ಕಲಾವಿದರು ರಾಜ್ಯ ಮಟ್ಟದಲ್ಲಿ ಹೆಚ್ಚಿನ ಸಾಧನೆಗೈಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. 

ಆದರೆ, ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲೂಕೆಂದು ಗುರ್ತಿಸಿಕೊಂಡಿರುವುದು ನೋವಿನ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ಸಶಕ್ತ ತಾಲೂಕಾಗಿ ಬೆಳೆಯಲಿ ಎಂದು ಆಶಿಸಿದ ಅವರು, ನಾವೆಲ್ಲ ಅನ್ಯಭಾಷೆಗಳ ದ್ವೇಷಿಗಳಲ್ಲ. ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಎಲ್ಲರನ್ನೂ ಆದರಿಸುತ್ತೇವೆ. ಆದರೆ ನಮ್ಮ ಮೊದಲ ಆದ್ಯತೆ ಕನ್ನಡ. ಆದ್ದರಿಂದ ಕನ್ನಡವನ್ನು ರಚನಾತ್ಮಕವಾಗಿ ಕಟ್ಟಲು ಕನ್ನಡಿಗರಾದ ನಾವು ಕನ್ನಡದಲ್ಲಿಯೇ ಸಹಿ ಮಾಡೋಣ, ಕನ್ನಡದಲ್ಲಿಯೇ ವ್ಯವಹರಿಸೋಣ ಎಂದರು.

ಸಚಿವ ಮಧು ಬಂಗಾರಪ್ಪ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿಗಳು ಬಿಟ್ಟಿ ಯೋಜನೆಗಳಲ್ಲ. ಅವು ಜನೋಪಯೋಗಿ ಯೋಜನೆಗಳು ಎನ್ನುವುದನ್ನು ಅರಿಯಬೇಕು. ಇದನ್ನು ದ್ವೇಷ ಮಾಡುವವರೂ ಕೂಡ ಫಲಾನುಭವಿಗಳಾಗಿ ಸುಗಮ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು. 

ಸಮಾಜ ಸದೃಢ ಆಗಬೇಕಾದರೆ ಮಹಿಳೆಯರ ಕಣ್ಣೀರು ಒರೆಸುವ ಸರ್ಕಾರ ಬರಬೇಕು. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರವನ್ನು ಅವರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡುವ ಮೂಲಕ ನಿರ್ವಹಣೆಯಲ್ಲಿ ಕಠಿಣ ಸವಾಲು ಎದುರಿಸುತ್ತಿರುವ ಬಡಕುಟುಂಬದ ಸ್ತ್ರೀಯೊಂದಿಗೆ ಸರ್ಕಾರ ಕೈ ಜೋಡಿಸಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು.

ತಾಲೂಕಿನಲ್ಲಿನ ಬಗರ್‌ಹುಕುಂ ಸಮಸ್ಯೆ ಸೇರಿದಂತೆ ನಗರ, ಗ್ರಾಮಗಳಲ್ಲಿನ ಮೂಲಭೂತ ಸಮಸ್ಯೆಗಳ ನಿರ್ಮೂಲನೆಗೆ ಶ್ರಮಿಸಲಾಗುವುದು. ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಗುದ್ದಲಿಪೂಜೆ ನೆರವೇರಿಸಿ ಈಗ ಅರ್ಧದಷ್ಟು ಕಾಮಗಾರಿ ಆಗಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡವನ್ನು ಪೂರ್ಣಗೊಳಿಸಿ ತಾವೇ ಉದ್ಘಾಟಿಸುವುದಾಗಿ ತಿಳಿಸಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆಯ ಮೂಲಕ ಡಾ. ರಾಜ್ ರಂಗಮಂದಿರದ ವರೆಗೆ ತಾಯಿ ಭುವನೇಶ್ವರಿದೇವಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಡೆಯಿತು. 

ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ನುಡಿಗಳನ್ನಾಡಿದರು. ಉಪನ್ಯಾಸಕ ಎಸ್.ಎಂ. ನೀಲೇಶ್ ಸಮ್ಮೇಳನಾಧ್ಯಕ್ಷರು ಪರಿಚಯ ಮಾಡಿಕೊಟ್ಟರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಂ.ಕೆ.ಭಟ್, ಶೇಖರಮ್ಮ ರಾಜಪ್ಪ ಮಾಸ್ತರ್, ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ, ಕಾರ್ಯಾಧ್ಯಕ್ಷ ಎಚ್.ಗಣಪತಿ, 

ಸಾಹಿತಿ ರಾಜಶೇಖರ ಪಾಟೀಲ್ ನೆಗವಾಡಿ, ಶಿವಮೊಗ್ಗ ಡಯಟ್ ಪ್ರಾಚಾರ್ಯ ಬಸವರಾಜಪ್ಪ, ಬಿಇಒ ಸತ್ಯನಾರಾಯಣ, ವಿವಿಧ ಘಟಕಗಳ ಪದಾಧಿಕಾರಿಗಳಾದ ಕಾರ್ತಿಕ ಸಾಹುಕಾರ್, ಶಂಕರ ಶೇಟ್, ಶಿವಕುಮಾರ, ವಿನಾಯಕ ಕಾನಡೆ, ರಮೇಶ್ ಮೊದಲಾದವರು ಹಾಜರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಶಿವಾನಂದಪಾಣಿ ಸ್ವಾಗತಿಸಿ, ಎನ್. ಗಣಪತಿ ವಂದಿಸಿದರು. ಹಾಲೇಶ್ ನವುಲೆ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ರಂಗಮಂದಿರದ ಎದುರು ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಾಯಿತು. ಸಮ್ಮೇಳನ ಅಂಗವಾಗಿ ಹಮ್ಮಿಕೊಂಡಿದ್ದ ಖಾದಿ ಮತ್ತು ಪುಸ್ತಕ ಮಾರಾಟ ಮಳಿಗೆಯನ್ನು ಕಸಾಪ ಕಾರ್ಯಾಧ್ಯಕ್ಷ ಎಚ್.ಗಣಪತಿ ಉದ್ಘಾಟಿಸಿದರು. ಅನಂತರ 2 ವಿಚಾರಗೋಷ್ಠಿ ಮತ್ತು ಕವಿ ಸಮಯದಲ್ಲಿ ಕವಿಗೋಷ್ಠಿ ನಡೆಯಿತು. 

ಆಕಾಶವಾಣಿ ಕಲಾವಿದ ಎಚ್.ಗುರುಮೂರ್ತಿ, ಗಾಯಕ ವಿಜಯಕುಮಾರ್ ಬಾಂಬೋರೆ, ಪೂರ್ಣಿಮಾ ಭಾವೆ, ಲಕ್ಷ್ಮೀ ಮುರಳಿಧರ, ಭಾವನಾ ಪೇಟ್ಕರ್ ಅವರಿಂದ ಗೀತಗಾಯನ ಜರುಗಿತು. ಡಿಕೆಡಿ ಖ್ಯಾತಿಯ ಕು. ನಿವೇದಿತಾ ಎಸ್. ಯಾದವ್ ಅವರಿಂದ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನಿಕಟಪೂರ್ವ ಅಧ್ಯಕ್ಷ ಡಾ. ಎಂ.ಕೆ. ಭಟ್, ಪುರಸಭಾ ಸದಸ್ಯೆ ಶ್ರೀರಂಜಿನಿ, ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ, ಸಾಹಿತಿ ರಾಜಶೇಖರ ಪಾಟೀಲ್ ನೆಗವಾಡಿ, ಹಾಲೇಶ್ ನವುಲೆ ಎಸ್. ಕೃಷ್ಣಾನಂದ್, ದೀಪಕ್ ಧೋಂಗಡೆಕರ್, ಕಾರ್ತಿಕ್ ಸಾಹುಕಾರ್, ಗ್ರಂಥ ಪಾಲಕ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಮಾಧ್ಯಮಗಳ ಜವಾಬ್ದಾರಿ ಹಿರಿದು: ನಾಡು ನುಡಿ ಕಟ್ಟುವಲ್ಲಿ ಪತ್ರಿಕೆಗಳು ಹಾಗೂ ಮಾಧ್ಯಮಗಳ ಪಾತ್ರ ಹಿರಿದು. ವಸ್ತು ನಿಷ್ಟ ವರದಿಗಳು, ವಿಮರ್ಶೆಗಳು ಸಮಾಜದಲ್ಲಿನ ಅನೇಕ ಅಸಮಾನತೆಗಳು, ಕೋಮು ಭಾವನೆಗಳು, ದಬ್ಬಾಳಿಕೆ, ದೌರ್ಜನ್ಯಗಳ ಬಗ್ಗೆ ಸರ್ಕಾರಗಳ ಲೋಪದೋಷಗಳ ಬಗ್ಗೆ ಬೆಳಕು ಚೆಲ್ಲುತ್ತವೆ. 

ವ್ಯಕ್ತಿ ಪೂಜೆಯು ಸರ್ವಾಧಿಕಾರಕ್ಕೆ ನಾಂದಿಯಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂಬುದನ್ನು ಅರಿತು ಮಾಧ್ಯಮಗಳು ನಿಶ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವಿದೆ. ಇದರಿಂದ ನಾಡು ಶಾಂತಿಯ ತೋಟವಾಗಿರಲು ಸಹಾಯಕವಾಗುತ್ತದೆ. ಆದ್ದರಿಂದ ಮಾಧ್ಯಮಗಳ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ ಎಂದು ಸಮ್ಮೇಳನಾಧ್ಯಕ್ಷರು ಸಲಹೆ ನೀಡಿದರು.