ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕನ್ನಡ ಭಾಷೆಯನ್ನು ಎಲ್ಲರೂ ಹೆಚ್ಚು ಹೆಚ್ಚು ಬಳಸುವ ಮೂಲಕ ಬೆಳೆಸಬೇಕು. ಕನ್ನಡ ಭಾಷೆ ಅನ್ನ ಭಾಷೆಯಾದಾಗ ಮಾತ್ರ ಅದು ನಿರಾಂತಕವಾಗಿ ಬೆಳವಣಿಗೆ ಕಾಣುತ್ತದೆ ಎಂದು ಕಸಾಪ ಸದಸ್ಯ, ಪತ್ರಕರ್ತ ರಾಜು ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಾಲಾ-ಕಾಲೇಜುಗಳ ಅಂಗಳದಲ್ಲಿ ಸಾಹಿತ್ಯೋತ್ಸವ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಿಗರು ಅನ್ಯಭಾಷಿಕರೊಂದಿಗೆ ಕನ್ನಡದಲ್ಲೆ ಮಾತನಾಡುವುದನ್ನು ರೂಢಿಗತ ಮಾಡಿಕೊಳ್ಳಬೇಕು. ಅನ್ಯ ಭಾಷಿಕರು ಕೂಡ ಕರ್ನಾಟಕದಲ್ಲಿ ಬದುಕು ಕಟ್ಟಿಕೊಳ್ಳಲು ಅನಿವಾರ್ಯವಾಗಿ ಕನ್ನಡ ಭಾಷೆ ಕಲಿಯುವುವಂತಾಗಬೇಕು. ಆಗ ಮಾತ್ರ ಕನ್ನಡ ಭಾಷೆ ಹೆಚ್ಚು ಗಟ್ಟಿಯಾಗಿ ಬೆಳೆಯುತ್ತದೆ. ನಮ್ಮ ಮಾತೃ ಭಾಷೆಯನ್ನು ಪ್ರೀತಿಸುವ ಜತೆಗೆ ಅನ್ಯ ಭಾಷೆಗಳನ್ನು ಕೂಡ ನಾವು ಗೌರವಿಸಬೇಕು ಎಂದು ಹೇಳಿದರು

ನಮ್ಮ ಕನ್ನಡಿಗರೇ ಕೆಲವರು ಸ್ವಪ್ರತಿಷ್ಠೆಗಾಗಿ ಅನ್ಯ ಭಾಷಿಕರೊಂದಿಗೆ ಅವರ ಭಾಷೆಯಲ್ಲಿಯೇ ಮಾತನಾಡುತ್ತಾರೆ, ಇದು ಸಲ್ಲದು. ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಇತರರಿಗೆ ಮನದಟ್ಟು ಮಾಡಿಕೊಡಲು ತಪ್ಪದೇ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದರು.


ವಚನ ಸಾಹಿತ್ಯದಲ್ಲಿ ವೈಚಾರಿಕತೆ ಎನ್ನುವ ವಿಷಯವಾಗಿ ಕಾಲೇಜಿನ ಉಪನ್ಯಾಸಕ ಬಿ. ತಿಪ್ಪೇಶ್ ಉಪನ್ಯಾಸ ನೀಡಿದರು. ಪ್ರಭಾರ ಪ್ರಾಂಶುಪಾಲ ಎನ್.ಡಿ.ಧನಂಜಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಮುರಿಗಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಸಾಪದ ಕಾರ್ಯದರ್ಶಿ ಶೇಖರಪ್ಪ ಸ್ವಾಗತಿಸಿದರು. ಶಿಕ್ಷಕ ಎ.ಕೆ. ಚನ್ನೇಶ್ ಕಾರ್ಯಕ್ರಮ ನಿರೂಪಿಸಿದರು.

ಕಸಾಪದ ಈ ಹಿಂದಿನ ಅಧ್ಯಕ್ಷ ಎಂ.ಎಸ್. ರೇವಣಪ್ಪ, ಖಜಾಂಚಿ ಡಿ.ಎಂ.ನಿಜಲಿಂಗಪ್ಪ,ಮಂಜಪ್ಪ, ದತ್ತಿ ದಾನಿಗಳಾದ ಜಯಮ್ಮ, ಕೆ.ನಾಗರಾಜಪ್ಪ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು.