ಪಂಪನಿಂದ ಹಿಡಿದು 8 ಜ್ಞಾನಪೀಠ ಪಡೆದ ಸಾಹಿತಿಗಳನ್ನು ಒಳಗೊಂಡು ಸಾಹಿತ್ಯಿಕವಾಗಿ ಸಮೃದ್ಧಿ ಹೊಂದಿದೆ.

ಕೊಟ್ಟೂರು: ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಜಗತ್ತು ಅಕ್ಷರ ಜ್ಞಾನ ಅರಿಯುವ ಮುನ್ನವೇ ಕನ್ನಡ ಭಾಷೆ ಚಾಲ್ತಿಯಲ್ಲಿತ್ತು. ಇದೊಂದು ಶ್ರೀಮಂತ ಭಾಷೆಯಾಗಿದೆ ಎಂದು ಉಪನ್ಯಾಸಕ ಅರವಿಂದ್ ಬಸಾಪುರ ಹೇಳಿದರು.

ಪಟ್ಟಣದ ಕೊಟ್ಟೂರೇಶ್ವರ ದೇವಸ್ಥಾನದ ಮುಂಭಾಗ ತಾಲೂಕಾಡಳಿತ, ತಾಪಂ ಹಾಗೂ ಪಪಂ ಜಂಟಿಯಾಗಿ ಆಯೋಜಿಸಿದ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಪಂಪನಿಂದ ಹಿಡಿದು 8 ಜ್ಞಾನಪೀಠ ಪಡೆದ ಸಾಹಿತಿಗಳನ್ನು ಒಳಗೊಂಡು ಸಾಹಿತ್ಯಿಕವಾಗಿ ಸಮೃದ್ಧಿ ಹೊಂದಿದೆ. ಹಲ್ಮಿಡಿ ಶಾಸನ, ಬಾದಾಮಿ ಶಾಸನಗಳಿಂದ ಹಿಡಿದು ನಮ್ಮ ತಾಲೂಕಿನ ಕೋಗಳಿಯ ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯ ಮೂಲಕ ಕನ್ನಡದ ಸಾಹಿತ್ಯಿಕ ಶಕ್ತಿ ನೋಡಬಹುದಾಗಿದೆ ಎಂದು ಹೇಳಿದರು.

ಇಂತಹ ಕನ್ನಡ ನಾಡು, ಭಾಷಾವಾರು ಪ್ರಾಂತಗಳಾಗಿ ಹರಿದು ಹಂಚಿ ಹೋಗಿದ್ದ ನಾಡನ್ನು ಒಂದಾಗಿಸಲು ಅನೇಕ ಮಹನೀಯರು ಹೋರಾಡಿದ್ದಾರೆ. ಅವರ ಶ್ರಮ ಅರಿತು ಕನ್ನಡ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ ಅಮರೇಶ ಜಿ.ಕೆ.ಇತ್ತೀಚಿನ ದಿನಗಳಲ್ಲಿ ಕಾನ್ವೆಂಟ್‌ಗಳಲ್ಲಿ ಓದಿಸುವುದು ಹೆಚ್ಚಾಗಿದೆ. ದುಡಿಮೆಯ ಭಾಷೆ ಆಂಗ್ಲವಾದರೂ ಮಾತೃ ಭಾಷೆ ಕನ್ನಡ ಎಂಬ ಅರಿವನ್ನು ಮಕ್ಕಳಿಗೆ, ಪೋಷಕರು ಮೂಡಿಸುವಂತಾಗಬೇಕೆಂದು ತಿಳಿಸಿದರು.

ಕನ್ನಡ ನಾಡು ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಡಾ.ಎ.ಕೆ. ಬಸವರಾಜ ಮಾತನಾಡಿ, ಜಗತ್ತಿನ ಶ್ರೇಷ್ಟ ೩ ಭಾಷೆಗಳಲ್ಲಿ ಕನ್ನಡವೂ ಒಂದಾಗಿದ್ದು, ಕನ್ನಡ ಅಕ್ಷರ ಮಾಲೆ ವಿಶಿಷ್ಟವಾಗಿದ್ದು, ಯಾವುದೇ ಭಾಷೆಗೂ ಇರದ ವಿನ್ಯಾಸ ಹೊಂದಿದೆ, ಅನೇಕ ದಾಳಿಗಳು ಭಾರತದ ಮೇಲೆ ಆಗಿದೆ.ಆದಾಗ್ಯೂ ಕನ್ನಡ ಭಾಷೆಯು ಅಳಿಯದೇ ಉಳಿದು ಶ್ರೇಷ್ಟವಾಗಿದೆ. ಇಂತಹ ಹೆಮ್ಮೆಯ ನಮ್ಮ ಕನ್ನಡ ಭಾಷೆ, ನಾಡನ್ನು ರಕ್ಷಿಸಿಕೊಂಡು ಹೋಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಬಸವರಾಜೇಶ್ವರಿ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಅಲಬೂರು ಹಾಗೂ ಸಿಂಧು ಗಿರೀಶ ಕನ್ನಡ ಉಪನ್ಯಾಸಕರು ಸನ್ನಿಧಿ ಪಪೂ ಕಾಲೇಜ್‌ ಇವರನ್ನು ಸನ್ಮಾನಿಸಲಾಯಿತು.

ಪಟ್ಟಣದ ಮುಖ್ಯ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಯಲ್ಲಿ ವಿವಿಧ ಶಾಲಾ ಮಕ್ಕಳು ಛದ್ಮವೇಷ ಧರಿಸಿ ಭಾಗವಹಿಸಿದ್ದರು. ವಿವಿಧ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಡಾ.ಆನಂದಕುಮಾರ, ಪಪಂ ಮುಖ್ಯಾಧಿಕಾರಿ ಎ ನಸರುಲ್ಲಾ, ಪೊಲೀಸ್‌ಇನ್ಸ್ಪೆಕ್ಟರ್ ಕೆ.ದುರುಗಪ್ಪ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ದೇವರಮನಿ ಕೊಟ್ರೇಶ್, ತಾಪಂ ನರೇಗಾ ಎಡಿ ಎಚ್.ವಿಜಯಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಮಂಜುನಾಥ, ನೌಕರರ ಸಂಘದ ಅಧ್ಯಕ್ಷ ಯೋಗೀಶ್ವರ ದಿನ್ನೆ, ಛಲವಾದಿ ಸಂಘದ ಅಧ್ಯಕ್ಷ ಮಂಜುನಾಥ, ಎಪಿಎಂಸಿ ಕಾರ್ಯದರ್ಶಿ ಎ.ಕೆ.ವೀರಣ್ಣ, ಶಿಕ್ಷಣ ಇಲಾಖೆಯ ಇಸಿಒ ಸಿ.ನಿಂಗಪ್ಪ, ರವಿಕುಮಾರ್ ಮುಂತಾದವರು ಇದ್ದರು.