-ಯಾದಗಿರಿ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಭಾಷಾ ಬಾಂಧ್ಯವ ಕುರಿತು ಒಂದು ದಿನದ ವಿಚಾರ ಸಂಕಿರಣ

--

ಕನ್ನಡಪ್ರಭ ವಾರ್ತೆ ಯಾದಗಿರಿ

ಗ್ರಾಮೀಣ ಜನರ ಬದುಕಿನ ಹಾಸುಹೊಕ್ಕಾಗಿರುವ ಕನ್ನಡ ಭಾಷೆ, ನಗರ ಪ್ರದೇಶಗಳಲ್ಲಿನ ಇಂಗ್ಲಿಷ್‌ ಸೇರಿದಂತೆಯೇ ಇತರೆ ಭಾಷೆಗಳ ಪ್ರಾಬಲ್ಯಕ್ಕೆ ಅಲ್ಪ ಮರೆಯಾದಂತೇ ಕಂಡರೂ ಇದು ಸಾವಿಲ್ಲದ ಅಮರ ಭಾಷೆ ಎಂದು ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಸುರಪುರ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸುರಪುರಿನ ಸಗರನಾಡು ಸೇವಾ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಸಹಯೋಗದಲ್ಲಿ ಇಲ್ಲಿನ‌ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಭಾಷಾ ಬಾಂಧವ್ಯ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಕನ್ನಡ ಭಾಷೆಯನ್ನು ಈ ನೆಲದ ಪ್ರತಿ ಮಗು ತನ್ನ ಅಕ್ಷರದ ಭಾಷೆಯನ್ನಾಗಿ ಸ್ವೀಕರಿಸಿದಾಗ ತಳದಿಂದ ಗಟ್ಟಿಯಾಗಿಯೇ ಉಳಿಯುತ್ತದೆ. ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದು. ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಭಾಷೆ ಸರ್ವ ಜನಾಂಗದ ಶಾಂತಿತೋಟದಂತೆಯೇ ಎಂದು ವ್ಯಾಖ್ಯಾನಿಸಿದರು.

ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಆಶಯ ನುಡಿಗಳನ್ನಾಡಿ, ಕನ್ನಡದ ಭಾಷೆಗೆ ಇರುವ ತಾಕತ್ತು, ಗಟ್ಟಿ ಧ್ವನಿ ಬೇರೆ ಭಾಷೆಯಲ್ಲಿ ಕಾಣಸಿಗುವುದಿಲ್ಲ ಎಂದರು.

ರಾಯಚೂರು ವಿವಿ ವಿದ್ಯಾವಿಷಯಕ ಪರಿಷತ್ತಿನ ಸದಸ್ಯ ಶೇಖರ ರಾಖಾ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕಾರ, ಕನ್ನಡ ಭಾಷೆಯ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದರು. ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿದರು.

ಸಾಹಿತಿ ಗುರುಪ್ರಸಾದ ವೈದ್ಯ ನಿರೂಪಿಸಿದರು. ದುರ್ಗಪ್ಪ ಪೂಜಾರಿ ಸ್ವಾಗತಿಸಿದರು, ರಾಘವೇಂದ್ರ ಭಕ್ರಿ ವಂದಿಸಿದರು.

.......ಬಾಕ್ಸ್‌:1......

* ಭಾಷೆಗೆ ಬಾಂಧವ್ಯ ಗಟ್ಟಿಗೊಳಿಸುವ ಶಕ್ತಿ ಇದೆ

ಕನ್ನಡ ಭಾಷೆಗೆ ಹಿರಿದಾದ ಪರಂಪರೆ ಇದೆ, ಕನ್ನಡ ಸಾಹಿತ್ಯ ಅನೇಕ ಭಾಷೆಗಳಿಗೆ ತರ್ಜುಮೆಗೊಂಡಿದೆ, ಭಾಷೆ- ಭಾಷೆಗಳ ಮಧ್ಯೆ ಅನುಸಂಧಾನ ಬೆಳೆದಾಗ ಮಾತ್ರ ಭಾಷಾ ಸಂಸ್ಕೃತಿ ಬೆಳೆಯಲು ಸಾಧ್ಯ. ಈ ಭಾಷೆ ಹಲವು ಭಾಷೆಗಳ ಉಗಮಕ್ಕೆ ಕಾರಣವಾಗಿದೆ. ಕನ್ನಡ ಭಾಷಾ ಸಂಸ್ಕೃತಿ ಜಗತ್ತಿನ ಎಲ್ಲ ಸಂಸ್ಕೃತಿಗಳಿಗೆ ಮೇರು ಮತ್ತು ಮಾದರಿಯಾಗಿದೆ. ಗಿರಿಜಿಲ್ಲೆ ಗಡಿ ಭಾಗದಲ್ಲಿದ್ದು, ಇಲ್ಲಿ ಭಾಷಾ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಕನ್ನಡ ಭಾಷಾ ಬಾಂಧ್ಯವ ಕುರಿತು ಡಾ.ಜಯದೇವಿ ಗಾಯಕವಾಡ ಹೇಳಿದರು.

.......ಬಾಕ್ಸ್:2.....

ಗಡಿಭಾಗದ ಭಾಷಾ ಸಮಸ್ಯೆಗೆ ಪರಿಹಾರ ಬೇಕು

ಗಡಿ ಜಿಲ್ಲೆಗಳಲ್ಲಿ ಭಾಷೆ ಸಮಸ್ಯೆಗೆ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಗಡಿಭಾಗದ ಶಾಲಾ ಮಕ್ಕಳ, ಶಿಕ್ಷಕರ ಅನುಭವಿಸುವ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕಾಗಿದೆ. ಗಡಿಭಾಗದಲ್ಲಿ ಕನ್ನಡ ಭಾಷೆ ಅಭಿವೃದ್ಧಿ ಕುರಿತ ಚಟುವಟಿಕೆ ನಿರಂತರ ನಡೆಯಬೇಕು ಎಂದು ಗಡಿಜಿಲ್ಲೆಗಳಲ್ಲಿನ ಭಾಷಾ ಸಮಸ್ಯೆ ಕುರಿತು ಸಾಹಿತಿ ಡಾ.ಗಾಳೆಪ್ಪ ಪೂಜಾರಿ ಹೇಳಿದರು. ಅಂಜುಂ ಪರ್ವೀನ್‌ ಸ್ವಾಗತಿಸಿ, ದೇವರಾಜ್ ವರ್ಕನಳ್ಳಿ ವಂದಿಸಿದರು

.....ಬಾಕ್ಸ್:3......

ಹಳ್ಳಿಗರ ಹಾಡುಗಳೇ ಕನ್ನಡ ಪರಂಪರೆ

ಉಪನ್ಯಾಸಕ ಡಾ. ಭೀಮರಾಯ ಲಿಂಗೇರಿ, ನಮ್ಮ ಪೂರ್ವಜರು ಆಡು ಭಾಷೆಯಲ್ಲಿಯೇ ಜನಪದ ಹಾಡುಗಳನ್ನು ಕಟ್ಟಿ ಹಾಡಿ ಭಾಷೆ ಗಟ್ಟಿಗೊಳಿಸಿದರು. ಅಕ್ಷರ ಜ್ಞಾನವಿಲ್ಲದಿದ್ದರೂ ಕಣ್ಣಮುಂದೆ ನಡೆದ ಪ್ರಸಂಗಗಳೇ ಮಾತಾಗಿ, ಹಾಡುಗಳಾಗಿ ಸಾಹಿತ್ಯ ಹುಟ್ಟಿಸಿ ಪರಂಪರೆಗೆ ನಾಂದಿಯಾದರೆಂದರು.

ಉಪನ್ಯಾಸಕ ಡಾ. ಎಸ್. ಎಸ್ ನಾಯಕ್, ತೊಗರಿ, ಜೋಳದ ಕಣಜವಾಗಿರುವ ಈ ನೆಲದಲ್ಲಿ ತನ್ನದೇ ಆದ ವಿಶೇಷ ಸಾಂಸ್ಕ್ರತಿಕ ಶ್ರೀಮಂತಿಕೆ ಇದೆ. ಭೀಮೆ, ಕೃಷ್ಣೆಯರ ಸಂಗಮದ ಈ ಕಪ್ಪು ನೆಲದಲ್ಲಿ ಸರ್ವ ಸಾಂಸ್ಕ್ರತಿಕ ಪ್ರತಿಭೆಗಳು ಇದ್ದು, ನಾಡಿಗೆ ಅಮೋಘ ಕೊಡುಗೆ ನೀಡಿದ್ದಾರೆಂದರು. ಗೋಷ್ಠಿ ಅಧ್ಯಕ್ಷತೆ ವಹಿಸಿ ತಾಲೂಕು ಕಸಾಪ ಅಧ್ಯಕ್ಷ ವೆಂಕಟೇಶ ಕಲಂಕಬ ವಹಿಸಿದ್ದರು. ಮಾಳಪ್ಪ ಯಾದವ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ.ಮರಿಯಪ್ಪ ನಾಟೇಕರ ಮಾತನಾಡಿ, ಕನ್ನಡ ಭಾಷೆಗೆ ದೊಡ್ಡ ಶಕ್ತಿ ಇದೆ. 723 ಭಾಷೆಗಳಲ್ಲಿ ನಮ್ಮ ಕನ್ನಡಕ್ಕಡ ಅಗ್ರ ಸ್ಥಾನವಿದೆ ಎಂದರು.

ಕನ್ನಡ ಉಪನ್ಯಾಸಕ ನರಸಪ್ಪ ಎಂ.ಚಿತ್ತಾಪುರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಎಲ್ ಕೆಇಟಿ ಎಸ್ ಕಾಲೇಜಿನ ಪ್ರಾಚಾರ್ಯ ಗುರಪ್ಪಚಾರ್ಯ ವಿಶ್ವಕರ್ಮ ಭಾಗವಹಿಸಿದ್ದರು. ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಾಳಪ್ಪ ಯಾದವ ನಿರೂಪಿಸಿದರು.

ಶಿವಶರಣಪ್ಪ ಹೆಡಗಿನಾಳ, ಆರ್. ಮಹದೇವಪ್ಪ ತುಮಕೂರ, ನಾಗೇಂದ್ರ ಜಾಜಿ, ನೊರಂದಪ್ಪ ಲೇವಡಿ, ಚೆನ್ನಪ್ಪ ಠಾಣಗುಂದಿ, ಬಸವಂತರಾಯ ಗೌಡ ಮಾಲಿಪಾಟೀಲ್, ಸುರೇಶ ತಡಿಬಿಡಿ ಅಯ್ಯನಗೌಡ ಕಾಶಪ್ಪನಳ್ಳಿ, ಸೂರ್ಯಕಾಂತ ಕರದಳ್ಳಿ, ದೇವೇಂದ್ರ ದೋತ್ರೆ, ಸೋಮಶೇಖರ ಮಣ್ಣೂರ ಸಂಗಣ್ಣ ಗುಳಗಿ, ಆನಂದ ರಾಠೋಡ ಮತ್ತು ಸರ್ಕಾರಿ ಪದವಿ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಇದ್ದರು.

-

5ವೈಡಿಆರ್1 : ಯಾದಗಿರಿ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಕನ್ನಡ ಭಾಷಾ ಬಾಂಧವ್ಯ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಸುರಪುರ ಉದ್ಘಾಟಿಸಿ, ಮಾತನಾಡಿದರು.

-

5ವೈಡಿಆರ್2 : ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸುರಪುರಿನ ಸಗರನಾಡು ಸೇವಾ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಸಹಯೋಗದಲ್ಲಿ ಇಲ್ಲಿನ‌ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಕನ್ನಡ ಭಾಷಾ ಬಾಂಧವ್ಯ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.