ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರಲ್ಲಿಯೂ ಕನ್ನಡ ಮಾತೃಭಾಷೆ ಕುರಿತು ಆತ್ಮಾಭಿಮಾನ ಮೂಡಲಿ ಎಂದು ನಿವೃತ್ತ ಡಿಡಿಪಿಐ ಪ್ರಕಾಶ ಮನ್ನಂಗಿ ಅಭಿಪ್ರಾಯಪಟ್ಟರು.

ಬ್ಯಾಡಗಿ: ಕನ್ನಡ ಕೇವಲ ಭಾಷೆಯಲ್ಲ ಅದೊಂದು ಸಂಸ್ಕೃತಿ, ಕನ್ನಡಿಗರ ಆತ್ಮವಿದ್ದಂತೆ. ಕನ್ನಡ ಭಾಷೆ ಉಳಿದರೆ ರಾಜ್ಯ ಉಳಿಯಲು ಸಾಧ್ಯ. ಹೀಗಾಗಿ, ಇಲ್ಲಿ ನೆಲೆಸಿರುವ ಪ್ರತಿಯೊಬ್ಬರಲ್ಲಿಯೂ ಕನ್ನಡ ಮಾತೃಭಾಷೆ ಕುರಿತು ಆತ್ಮಾಭಿಮಾನ ಮೂಡಲಿ ಎಂದು ನಿವೃತ್ತ ಡಿಡಿಪಿಐ ಪ್ರಕಾಶ ಮನ್ನಂಗಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಮೌಲಾನಾ ಅಝಾದ ಸರ್ಕಾರಿ ಮಾದರಿ ಶಾಲೆ ಸಹಯೋಗದಲ್ಲಿ ದಿ. ಶಿವನಾಗಪ್ಪ ಕೊಟ್ರಪ್ಪ ಮೇಲ್ಮುರಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಕದಂಬ, ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಕಾಲದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಪ್ರಚಲಿತದಲ್ಲಿತ್ತು ಎನ್ನುವುದಕ್ಕೆ ಅಲ್ಲಿ ದೊರೆತಿರುವ ಶಾಸನಗಳು ಸಾಕ್ಷಿಯಾಗಿವೆ. ಕನ್ನಡ ರಾಜ್ಯದ ಅಧಿಕೃತ ಹಾಗೂ ಜನಮನದ ಭಾಷೆಯಾಗಿದ್ದು, ರಾಜ್ಯದ ಸಂಸ್ಕೃತಿಯೂ ಹೌದು. ಪ್ರತಿಯೊಬ್ಬ ಕನ್ನಡಿಗರ ಹೃದಯವಾಗಿದೆ ಎಂದರು.ಸಾಂಸ್ಕೃತಿಕ ಹಾಗೂ ಸಾಹಿತ್ಯದ ವೈಭವ

ಜನಪದ ಗೀತೆಗಳು, ಯಕ್ಷಗಾನ, ನಾಟಕ, ಹರಿದಾಸ ಸಾಹಿತ್ಯ ಮತ್ತು ಹಬ್ಬಗಳು ಕನ್ನಡ ಸಂಸ್ಕೃತಿಯನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತಿವೆ. ಪಂಪ, ರನ್ನ, ಜನ್ನರಿಂದ ಹಿಡಿದು ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತರವರೆಗೆ ಅನೇಕ ಮಹಾನ್ ಸಾಹಿತಿಗಳು ಕನ್ನಡ ಸಾಹಿತ್ಯ ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕನ್ನಡ ಶಿಕ್ಷಣದ ಮಾಧ್ಯಮವಾಗಿದ್ದು, ಶಿಕ್ಷಣ ಮತ್ತು ಜ್ಞಾನ ಗ್ರಾಮೀಣ ಹಾಗೂ ನಗರ ಜನತೆಗೆ ಜ್ಞಾನ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಪರಿಷತ್‌ನಿಂದ ಕನ್ನಡದ ಕಾಳಜಿ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಏಕತೆ ಮತ್ತು ಭಾವೈಕ್ಯತೆ ತೋರುತ್ತಿರುವ ಕನ್ನಡ ಭಾಷೆ ರಾಜ್ಯದ ವಿಭಿನ್ನ ಜಿಲ್ಲೆಗಳ ಜಾತಿ–ಮತಗಳ ಜನರನ್ನು ಒಂದಾಗಿ ಕಟ್ಟಿ ಹಿಡಿಯುತ್ತಿರುವ ಸೇತುವೆಯಾಗಿದೆ. ಸರ್ಕಾರದ ಆಡಳಿತ, ಕಾನೂನು, ನ್ಯಾಯಾಲಯ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕನ್ನಡ ಕಡ್ಡಾಯ ಬಳಕೆ ಮಾಡುವ ಮೂಲಕ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಕನ್ನಡದ ಕಾಳಜಿಯನ್ನು ತೋರುತ್ತಿದೆ ಎಂದರು.

ಕಸಾಸ ತಾಲೂಕಾಧ್ಯಕ್ಷ ಬಿ.ಎಂ. ಜಗಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಾದಿ ಶರಣರ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಈರಮ್ಮ ಅರಳೀಕಟ್ಟಿ ಪ್ರಥಮ, ಬೀಬಿ ಹಾಜಿರಾ ಮಾಸಣಗಿ ದ್ವಿತೀಯ, ಎಸ್.ಪಿ. ಪೂರ್ವಿಕಾ, ಎಸ್.ಎನ್. ಸಿಂಚನಾ, ಆರ್.ಡಿ. ಪವಿತ್ರಾ, ಕೆ.ಎಚ್. ಆರಾಧ್ಯ, ಐ.ಎನ್. ಉಮ್ಮಿ ಹನ್ನಿ ತೃತಿಯ ಸ್ಥಾನ ಪಡೆದರು. ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಈ ವೇಳೆ ಮಾಗನೂರ ಬಸಪ್ಪ ಬಿ.ಎಡ್. ಕಾಲೇಜು ಪ್ರಾಚಾರ್ಯ ಶಾಂತರಾಜ, ಮುಖ್ಯ ಶಿಕ್ಷಕ ಕೆ.ವಿ. ಶಿವರಾಜ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಂ.ಎಂ. ಪಾಟೀಲ, ಎಂ.ಎ. ಪಠಾಣ, ಮಾಜಿ ಸೈನಿಕ ರಾಜಶೇಖರ ಹೊಸಳ್ಳಿ ದತ್ತಿ ದಾನಿ ಬಸವರಾಜ ಮೇಲ್ಮುರಿ, ಪ್ರಭುಗೌಡ ಪಾಟೀಲ, ಶಿಕ್ಷಕ ಕಾಂತೇಶ ಕುಮ್ಮೂರ, ಆರ್.ಜಿ. ಬಸವರಾಜ ಎಚ್.ಕೆ. ಸಂಜನಾ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.