ಕನ್ನಡ ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ: ಸಿದ್ರಾಮಣ್ಣ

| Published : Feb 08 2024, 01:37 AM IST

ಸಾರಾಂಶ

ಕನ್ನಡ ಒಂದು ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ. ಅನೇಕ ವರ್ಷಗಳ ವಿಕಾಸವಾದ ಇದರಲ್ಲಿದೆ. ಬಳಕೆ ಮಾಡಿದ್ದು ಮಾತ್ರ ಉಳಿಯುತ್ತದೆ. ಬಳಕೆ ಮಾಡದಿದ್ದರೆ ಉಳಿಯುವುದಿಲ್ಲ. ಅದೇ ರೀತಿ ಕನ್ನಡವನ್ನು ಎಲ್ಲೆಲ್ಲಿ ಬಳಕೆ ಮಾಡಲು ಅವಕಾಶವಿದೆ ಎಂಬುದನ್ನು ತಿಳಿದು ಬಳಸಬೇಕು. ಕನ್ನಡ ಬಳಕೆಗೆ ಅವಕಾಶ ಇರುವುದು‌ ಕರ್ನಾಟಕದಲ್ಲಿ. ಇದನ್ನು ಅರಿತು ಕನ್ನಡ ಬಳಸಬೇಕಿದೆ ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಆರ್.ಕೆ. ಸಿದ್ರಾಮಣ್ಣ ಶಿವಮೊಗ್ಗದಲ್ಲಿ ಹೇಳಿದ್ಧಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡ ಒಂದು ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ. ಅನೇಕ ವರ್ಷಗಳ ವಿಕಾಸವಾದ ಇದರಲ್ಲಿದೆ ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಆರ್.ಕೆ. ಸಿದ್ರಾಮಣ್ಣ ಹೇಳಿದರು.

ಜಿಲ್ಲಾ ಕನ್ನಡ‌ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ಕನ್ನಡ ಬೇಗುದಿಗಳು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳಕೆ ಮಾಡಿದ್ದು ಮಾತ್ರ ಉಳಿಯುತ್ತದೆ. ಬಳಕೆ ಮಾಡದಿದ್ದರೆ ಉಳಿಯುವುದಿಲ್ಲ. ಅದೇ ರೀತಿ ಕನ್ನಡವನ್ನು ಎಲ್ಲೆಲ್ಲಿ ಬಳಕೆ ಮಾಡಲು ಅವಕಾಶವಿದೆ ಎಂಬುದನ್ನು ತಿಳಿದು ಬಳಸಬೇಕು. ಕನ್ನಡ ಬಳಕೆಗೆ ಅವಕಾಶ ಇರುವುದು‌ ಕರ್ನಾಟಕದಲ್ಲಿ. ಇದನ್ನು ಅರಿತು ಕನ್ನಡ ಬಳಸಬೇಕಿದೆ ಎಂದರು.

ಪುಸ್ತಕದಲ್ಲಿರುವ ಮಾಹಿತಿ ಶಿಕ್ಷಣವಲ್ಲ. ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ಜ್ಞಾನ ಬೇಕಿದೆ. ಜ್ಞಾನ, ವಿಜ್ಞಾನ ಹೋಗಿ ತಂತ್ರಜ್ಞಾನ ಬಂದಿದೆ. ಇದು ಹೋಗಿ ಈಗ ಕೃತಕ ಬುದ್ಧಿಮತ್ತೆ ಬಂದಿದೆ. ಇವೆಲ್ಲವೂ ಮಾನವ ಕುಲ ಉದ್ಧಾರಕ್ಕೆ ಇರೋದು. ಹೀಗಾಗಿ, ಈಗ ಜಾಗತಿಕ ಗ್ರಾಮದ ಕಲ್ಪನೆಯಲ್ಲಿದ್ದೇವೆ ಎಂದರು.

ವಿಶ್ರಾಂತ ಪ್ರಾಂಶುಪಾಲ ಡಾ. ಎಚ್.ಟಿ. ಕೃಷ್ಣಮೂರ್ತಿ "ಒಕ್ಕೂಟ ಸರ್ಕಾರದಲ್ಲಿ ಕನ್ನಡ ಸ್ಥಾನಮಾನ‌ " ವಿಷಯ ಕುರಿತು ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಬಲಿಷ್ಠವಾದರೆ ಒಕ್ಕೂಟ ಬಲಿಷ್ಠವಾಗಲಿದೆ.‌‌ ಸಂಕುಚಿತವಾದ ರಾಷ್ಟ್ರೀಯತೆಯ ಭಾವನೆಯ‌ ಭ್ರಮೆಯಲ್ಲಿದ್ದೇವೆ.‌‌ ಭ್ರಮಾಲೋಕದಿಂದ ಹೊರಬಂದು ವಾಸ್ತವವಾಗಿ ಯೋಚಿಸಬೇಕಿದೆ ಎಂದರು.

ರಾಜ್ಯಪಾಲರ ಹುದ್ದೆ ಸಾಂವಿಧಾನಿಕವಲ್ಲ.‌ ಅದೊಂದು‌ ಅಲಂಕಾರಿಕ‌ ಖುರ್ಚಿ. ನಾಮಫಲಕಗಳಲ್ಲಿ ಶೇ.60 ಕನ್ನಡ ಇರಬೇಕೆಂದರೆ ರಾಜ್ಯಪಾಲರೊಂದಿಗೆ‌ ಚರ್ಚಿಸಿ ಎಂದು ಬರೆಯಲಾಗುತ್ತಿದೆ. ಇದು ಸರಿಯಲ್ಲ. ನಮ್ಮ ಎಂಪಿ, ಎಂಎಲ್‌ಎಗಳಿಗೆ ಮೊದಲು‌ ಕನ್ನಡದ‌ ಚುಚ್ಚುಮದ್ದು ನೀಡಬೇಕಿದೆ. ₹4,500 ಕೋಟಿ ತೆರಿಗೆ ಕರ್ನಾಟಕದಿಂದ ಹೋಗುತ್ತಿದೆ. ಆದರೆ, ಕೇಂದ್ರ ಕೊಡುತ್ತಿರುವುದು ತೀರಾ ಕಡಿಮೆ. ಕರ್ನಾಟಕಕ್ಕೆ ಸಾಂಸ್ಕೃತಿಕ ನೀತಿ ಇಲ್ಲ. ತಾಲೂಕುಮಟ್ಟದ ನ್ಯಾಯಾಲಯಗಳಲ್ಲಿಯೂ ಕನ್ನಡ ಇಲ್ಲ ಎಂದು ತಿಳಿಸಿದರು.

ಶಿಕ್ಷಣದಲ್ಲಿ ಕನ್ನಡ ಕುರಿತು ಮಾತನಾಡಿದ ಪ್ರಾಧ್ಯಾಪಕಿ ಡಾ. ಪಿ.ಭಾರತೀದೇವಿ, ಕನ್ನಡ ಮಾತೃಭಾಷೆಯಲ್ಲಿ‌ ಶಿಕ್ಷಣ ನೀಡುವುದರ ಜತೆಗೆ ಇತರೆ ಸಮುದಾಯದವರ ಮಾತೃಭಾಷೆ ಬಗ್ಗೆಯೂ ಚಿಂತಿಸಬೇಕಿದೆ ಎಂದರು.

ಖಾಸಗಿ ಶಾಲೆಗಳು ನಮ್ಮ ಸಮಾಜದಲ್ಲಿನ‌ ಶ್ರೇಣೀಕರಣವನ್ನು ಮುಂದುವರಿಸಿಕೊಂಡು‌ ಹೋಗುತ್ತಿವೆ ಎಂಬುದನ್ನು ಸಮಾಜಶಾಸ್ತ್ರೀಯ ಅಧ್ಯಯನಗಳು ಹೇಳುತ್ತಿವೆ. ಇಂದು‌ ಒಳ್ಳೆಯ ಕೆಲಸ ಪಡೆಯುವುದೇ ಯಶಸ್ಸು ಎಂದು ಭಾವಿಸಿ, ಇಂಗ್ಲಿಷ್ ಶಿಕ್ಷಣದ ಕಡೆ ನೋಡಲಾಗುತ್ತಿದೆ. ಇದು ಮಕ್ಕಳ ಮನಸ್ಸು ಮುದುಡಿಸುತ್ತದೆ ಎಂದು ಹೇಳಿದರು.

ವ್ಯವಹಾರದಲ್ಲಿ ಕನ್ನಡ ಕುರಿತು ಮಾತನಾಡಿದ ಕನ್ನಡ ಪರ‌ಹೋರಾಟಗಾರ ಗೋ.ರಮೇಶ್ ಗೌಡ, ದೈನಂದಿನ‌ ವ್ಯವಹಾರದಲ್ಲಿ ಗಣಕ‌ ಯಂತ್ರದ ಬಳಕೆ ಹೆಚ್ಚಾದಂತೆ ಕನ್ನಡ ಬಳಕೆ ಕ್ಷೀಣಿಸುತ್ತಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ‌ ಜತೆಗೆ ದೈನಂದಿನ‌ ವ್ಯವಹಾರಗಳು ಕನ್ನಡ ಬಳಕೆ ಹೆಚ್ಚಾಗಬೇಕಿದೆ ಎಂದರು.

ವಿಮಾ‌ ಕ್ಷೇತ್ರದಲ್ಲಿ, ಮಾಲ್‌ಗಳಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕಿದೆ. ಕನ್ನಡ ಸಂಘಗಳು ಹೆಚ್ಚುತ್ತಿವೆಯಾದರೂ ಕನ್ನಡ ಬಳಕೆ ಕಡಿಮೆಯಾಗಿದೆ. ಇದಕ್ಕೆ ಮಕ್ಕಳ ನ್ನು ಆಂಗ್ಲ ಮಾಧ್ಯಮ‌ ಶಾಲೆಗಳಿಗೆ ಕಳಿಸುತ್ತಿರುವುದಾಗಿದೆ ಎಂದರು.

ವೇದಿಕೆಯಲ್ಲಿ ಸಮ್ಮೇಳನದ‌ ಸರ್ವಾಧ್ಯಕ್ಷ ಪ್ರೊ. ಎಸ್.ಪಿ. ಪದ್ಮಪ್ರಸಾದ್ ಇದ್ದರು.

- - -

-2ಎಸ್‌ಎಂಜಿಕೆಪಿ03:

"ಕನ್ನಡ ಬೇಗುದಿಗಳು " ಗೋಷ್ಠಿಯಲ್ಲಿ ವಿಶ್ರಾಂತ ಪ್ರಾಂಶುಪಾಲ ಡಾ. ಎಚ್.ಟಿ. ಕೃಷ್ಣಮೂರ್ತಿ ಮಾತನಾಡಿದರು.