ಕನ್ನಡ ಕನ್ನಡಿಗರ ಪಾಲಿಗೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಅಸ್ಮಿತೆಯ ತಳಹದಿಯಾಗಿದೆ.

ಲಕ್ಷ್ಮೇಶ್ವರ: ಕನ್ನಡ ಕೇವಲ ಒಂದು ಭಾಷೆಯಲ್ಲ. ಕನ್ನಡಿಗರ ಅಸ್ಮಿತೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗರಿಂದಲೂ ಆಗಬೇಕು ಎಂದು ಡಾ. ಪಿ.ಡಿ. ತೋಟದ ತಿಳಿಸಿದರು.

ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಿ ಯುನಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಪನ್ಯಾಸಕ ರವಿ ನೀರಲಗಿ ಮಾತನಾಡಿ, ಕನ್ನಡ ಕನ್ನಡಿಗರ ಪಾಲಿಗೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಅಸ್ಮಿತೆಯ ತಳಹದಿಯಾಗಿದೆ. ಸುದೀರ್ಘ, ಶ್ರೀಮಂತ ಇತಿಹಾಸ ಹೊಂದಿರುವ ಕನ್ನಡವು ಕನ್ನಡಿಗರನ್ನು ಭಾವನಾತ್ಮಕವಾಗಿ ಒಂದುಗೂಡಿಸುವ ಮಹತ್ವದ ಶಕ್ತಿಯಾಗಿದೆ ಎಂದರು.

ಶಿಕ್ಷಕ ಸಾಹಿತಿ ಆರ್.ಎಸ್. ಪಾಟೀಲ ಮಾತನಾಡಿ, ನಮ್ಮ ಆಚಾರ- ವಿಚಾರ, ಹಬ್ಬ- ಹರಿದಿನ ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ಜಾನಪದ ಸಾಹಿತ್ಯ ಕಲಿಸುತ್ತದೆ. ಜನಪದ ಪರಂಪರೆ ಮತ್ತು ಸಂಸ್ಕೃತಿಯ ಮಾರ್ಗವಾಗಿದೆ ಎಂದರು.

ಮುಖ್ಯೋಪಾಧ್ಯಾಯ ಅರವಿಂದ ದೇಶಪಾಂಡೆ ಮಾತನಾಡಿ, ವ್ಯವಹಾರಿಕವಾಗಿ ಬೇರೆ ಭಾಷೆ ಬಳಸಿದರೂ ಅಂತರಂಗದ ಭಾಷೆಯಾಗಿ ಕನ್ನಡ ಬೇಕು ಎಂದರು.

ಚೇತನಾ ಕೋಳಿವಾಡ ಮಾತನಾಡಿ, ಸಮಕಾಲೀನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟೇ ಮುಂದುವರಿದಿದ್ದರೂ ಕನ್ನಡ ಭಾಷೆ ನಮ್ಮ ಅಸ್ತಿತ್ವವನ್ನು ಪ್ರತಿನಿಧಿಸುತ್ತದೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಅವರು, ತಾಲೂಕು ಘಟಕ ನಡೆದು ಬಂದ ಹಾದಿ ಹಾಗೂ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ಸಾಹಿತಿ ಸುರೇಶ ತಂಗೋಡ ಜನಪದ ಸಾಹಿತ್ಯದ ಕುರಿತು ಮಾತನಾಡಿದರು.

ದತ್ತಿದಾನಿಗಳು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಕಸಾಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಸಲಹಾ ಸಮಿತಿಯ ಈರಣ್ಣ ಗಾಣಿಗೇರ ನಿರೂಪಿಸಿದರು. ಗೌರವ ಕಾರ್ಯದರ್ಶಿ ವೀರಣ್ಣ ಅಕ್ಕೂರ ವಂದಿಸಿದರು. ಸಲಹಾ ಸಮಿತಿಯ ಎಸ್.ಬಿ. ಅಣ್ಣಿಗೇರಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಶಶಿಕಾಂತ ಕುಂಬಾರ, ಸಿ.ಎಫ್. ಪಾಟೀಲ, ಎಲ್.ಆರ್. ಮಲಸಮುದ್ರ, ಪ್ರವೀಣ ಕುಂಬಾರ ಇದ್ದರು.