ಭಾಷೆ ಎಂಬುದು ಜನಸಮುದಾಯದ ಆತ್ಮಶ್ರೀಯಾಗಿದ್ದು, ಬದುಕಿನ ಸಕಲ ವಿವರಗಳು, ಸಂಸ್ಕೃತಿ, ಆಚರಣೆಗಳು ಹಾಗೂ ಜೀವನಾನುಭವಗಳು ಅಂತರ್ಗಾಮಿಯಾಗಿ ಹರಿಯುತ್ತಿರುತ್ತವೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭಾಷೆ ಎಂಬುದು ಜನಸಮುದಾಯದ ಆತ್ಮಶ್ರೀಯಾಗಿದ್ದು, ಬದುಕಿನ ಸಕಲ ವಿವರಗಳು, ಸಂಸ್ಕೃತಿ, ಆಚರಣೆಗಳು ಹಾಗೂ ಜೀವನಾನುಭವಗಳು ಅಂತರ್ಗಾಮಿಯಾಗಿ ಹರಿಯುತ್ತಿರುತ್ತವೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಹೇಳಿದರು.ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡವೆಂದರೆ ನಮ್ಮ ತಾಯಿಯ ಮೊದಲ ತೊದಲು ನುಡಿ, ಹಳ್ಳಿಯ ಮಣ್ಣಿನ ಘಮಲು, ಬದುಕಿನ ನೋವು ನಲಿವುಗಳಿಗೆ ಅಭಿವ್ಯಕ್ತಿ ನೀಡಿದ ಆತ್ಮೀಯ ಭಾಷೆ. ಕವಿರಾಜಮಾರ್ಗದಲ್ಲಿ ಕನ್ನಡಿಗರ ಸ್ವಭಾವವನ್ನು ವರ್ಣಿಸುವಾಗ ಔಪಚಾರಿಕವಾಗಿ ಹೆಚ್ಚಿನ ಅಧ್ಯಯನ ಮಾಡದಿದ್ದರೂ ಕಾವ್ಯವನ್ನು ಅರ್ಥೈಸುವ, ಸಾಹಿತ್ಯವನ್ನು ಆಸ್ವಾದಿಸುವ, ಸಾಂಸ್ಕೃತಿಕ ಪ್ರಜ್ಞೆಯನ್ನು ಹೊಂದಿರುವ ಜನರು ಕನ್ನಡಿಗರು, ಎಂಬ ಅಭಿಮಾನದ ಚಿತ್ರಣವನ್ನು ನೀಡಿದ್ದಾರೆ ಎಂದರು.ಕನ್ನಡವೆಂದರೆ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಸಂಸ್ಕೃತಿ ಮತ್ತು ಸಾವಿರಾರು ವರ್ಷಗಳ ನಾಗರಿಕತೆಯ ಪ್ರತಿಬಿಂಬ. ಪಂಪ, ರನ್ನ, ಪೊನ್ನರ ಕಾವ್ಯ ಪರಂಪರೆ, ಶರಣರ ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡದ ವೈಚಾರಿಕ ಹಾಗೂ ಆಧ್ಯಾತ್ಮಿಕ ನೆಲೆಗಳನ್ನು ಗಟ್ಟಿಗೊಳಿಸಿವೆ. ನವೋದಯ ಕಾಲಘಟ್ಟದಲ್ಲಿ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ತಿಳಿಸಿದರು.
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಜಗತ್ತಿನ ಹಲವು ಭಾಷೆಗಳನ್ನು ಕಲಿಯುವುದು ಅನಿವಾರ್ಯವೂ, ಅಗತ್ಯವೂ ಆಗಿದೆ. ಆದರೆ ಜಾಗತಿಕ ಭಾಷೆಗಳೊಂದಿಗೆ ಸಂಪರ್ಕ ಬೆಳೆಸುವ ಭರದಲ್ಲಿ ನಮ್ಮ ಭಾಷೆಯ ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದು. ನಾವು ಕನ್ನಡದಲ್ಲಿ ಮಾತನಾಡಿದಾಗ, ವ್ಯವಹರಿಸಿದಾಗ, ಓದಿದಾಗ, ಬರೆದಾಗ ಮತ್ತು ಬದುಕಿದಾಗ ಕನ್ನಡದ ಭೂತಕಾಲದ ಅನುಭವಗಳು, ವರ್ತಮಾನದ ಚಿಂತನೆಗಳು ಹಾಗೂ ಭವಿಷ್ಯದ ಸಾಧ್ಯತೆಗಳು ಜೀವಂತವಾಗಿರುತ್ತವೆ ಎಂದರು.ಕನ್ನಡವನ್ನು ಶಿಕ್ಷಣ, ವಿಜ್ಞಾನ, ಸಂಶೋಧನೆ ಮತ್ತು ತಂತ್ರಜ್ಞಾನದ ಭಾಷೆಯಾಗಿ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಹಿರಿಯರು ಕಟ್ಟಿಕೊಟ್ಟ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪದೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆಯೋಣ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ಆದರೆ ಮಕ್ಕಳ ನಾಟಕಗಳ ರಚನೆ, ಪ್ರಯೋಗ ಮತ್ತು ಪ್ರಕಟಣೆಯ ಕ್ಷೇತ್ರದಲ್ಲಿ ಇನ್ನಷ್ಟು ಗಂಭೀರ ಪ್ರಯತ್ನಗಳು ನಡೆಯಬೇಕಿದೆ. ಮಕ್ಕಳ ಮನೋಲೋಕ, ಕಲ್ಪನಾಶಕ್ತಿ, ಸೃಜನಶೀಲತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವಂತಹ ಹೆಚ್ಚು ಮಕ್ಕಳ ನಾಟಕಗಳು ಕನ್ನಡದಲ್ಲಿ ರಚನೆಯಾಗಬೇಕು. ಒಂದು ಭಾಷೆಯನ್ನು ಉಳಿಸುವುದೆಂದರೆ ಅದರ ಪದಗಳನ್ನು ಉಳಿಸುವುದಷ್ಟೇ ಅಲ್ಲ, ಆ ಭಾಷೆಯ ಮೂಲಕ ತಲೆಮಾರುಗಳಿಂದ ಹರಿದುಬಂದಿರುವ ಸಾಂಸ್ಕೃತಿಕ ಮೌಲ್ಯ ಮತ್ತು ಜೀವನದರ್ಶನವನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವುದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಪ್ರಕಾಶ್, ಸಹಾಯಕ ಪ್ರಾಧ್ಯಾಪಕರಾದ ಡಾ.ಶರಣ್, ಡಾ.ಮಂಜು.ಎನ್.ಡಿ, ಲಾವಣ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.