ಗ್ರಾಮೀಣ ಪ್ರದೇಶದ ನಮ್ಮ ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ. ಅಂತಹ ಕೆಲಸವನ್ನು ಯುವ ಪೀಳಿಗೆ ಮಾಡಬೇಕು ಎಂದು ಕನ್ನಡ ಜಾನಪದ ಪರಿಷತ್ತಿನ ಹಾವೇರಿ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಶಾಂತಗಿರಿ ಹೇಳಿದರು.
ಶಿಗ್ಗಾಂವಿ: ಗ್ರಾಮೀಣ ಪ್ರದೇಶದ ನಮ್ಮ ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ. ಅಂತಹ ಕೆಲಸವನ್ನು ಯುವ ಪೀಳಿಗೆ ಮಾಡಬೇಕು ಎಂದು ಕನ್ನಡ ಜಾನಪದ ಪರಿಷತ್ತಿನ ಹಾವೇರಿ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಶಾಂತಗಿರಿ ಹೇಳಿದರು.ಶಿಗ್ಗಾಂವಿಯ ಚನ್ನಪ್ಪ ಕುನ್ನೂರ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಶಿಗ್ಗಾಂವಿ ತಾಲೂಕು ಅಧ್ಯಕ್ಷರ ಆಯ್ಕೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇವತ್ತಿನ ನಮ್ಮ ಆಧುನಿಕ ದೃಶ್ಯ ಮಾಧ್ಯಮಗಳಿಂದ ನಮ್ಮ ಮೂಲ ಜಾನಪದ ಪರಂಪರೆಗೆ ಧಕ್ಕೆ ಬರುತ್ತಿದೆ. ಇಂದಿನ ಜನತೆ ಕಲಾವಿದರೂ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ನಮ್ಮ ಮುಂದಿನ ಯುವ ಜನಾಂಗಕ್ಕೆ ವರ್ಗಾವಣೆ ಮಾಡುವತ್ತ ಹಾಗೂ ಜಾನಪದದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.ಆ ಹಿನ್ನೆಲೆಯಲ್ಲಿ ಕನ್ನಡ ಜಾನಪದ ಪರಿಷತ್ ಇಡೀ ನಾಡಿನಾದ್ಯಂತ ಕೆಲಸ ಮಾಡುತ್ತಿದ್ದು, ಹಾವೇರಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಇದು ಕನ್ನಡ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದ್ದು ಶಿಗ್ಗಾಂವಿ ತಾಲೂಕಿನಲ್ಲಿ ಹಿರಿಯರ ಸಲಹೆಯತೆ ಕ್ರಿಯಾಶೀಲ ವ್ಯಕ್ತಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಅವರನ್ನು ಆಯ್ಕೆ ಮಾಡಿರುವದು ಸಂತೋಷವಾಗಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ನಮ್ಮ ನಾಡಿನ ಮೂಲ ಜನಪದ ಕಲೆ ಸಾಹಿತ್ಯದ ಪ್ರಕಾರಗಳನ್ನು ದಾಖಲೀಕರಣ ಮಾಡುವ ಮೂಲಕ ಇವತ್ತಿನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವಂತಹ ಯುವ ವಿದ್ಯಾರ್ಥಿ ಸಮುದಾಯಕ್ಕೆ ಜನಪದ ಸಂಸ್ಕೃತಿಯ ಬಗ್ಗೆ ಪರಿಚಯಿಸಿ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದ್ದು, ಅಂತಹ ಕೆಲಸವನ್ನು ಕನ್ನಡ ಜಾನಪದ ಪರಿಷತ್ತು ಮಾಡುತ್ತಿದೆ. ನಮ್ಮ ಶಿಗ್ಗಾಂವಿ ತಾಲೂಕಿನ ಜಾನಪದ ಪರಂಪರೆಯನ್ನು ನೂತನ ತಾಲೂಕು ಅಧ್ಯಕ್ಷರಾದ ಡಾ. ಚಂದ್ರಪ್ಪ ಸೊಬಟಿ ಅವರು ಇನ್ನೂ ಹೆಚ್ಚು ಪ್ರಚಾರಗೊಳಿಸುವ ಕೆಲಸ ಮಾಡಲಿ ಎಂದರು.ಕನ್ನಡ ಜಾನಪದ ಪರಿಷತ್ತಿನ ಶಿಗ್ಗಾಂವಿ ತಾಲೂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಚಂದ್ರಪ್ಪ ಸೊಬಟಿ ಅವರು ಮಾತನಾಡಿ, ಹಾವೇರಿ ಜಿಲ್ಲೆ ಸಾಂಸ್ಕೃತಿಕವಾಗಿ ತನ್ನದೇ ಆದ ಇತಿಹಾಸ ಮತ್ತು ವೈಶಿಷ್ಟ್ಯತೆಯನ್ನು ಹೊಂದಿದ್ದು, ಅದರ ಜೊತೆಗೆ ವಿಶಿಷ್ಟ ಬಗೆಯ ಜನಪದ ಕಲೆಗಳು, ಜನಪದ ಸಾಹಿತ್ಯವನ್ನು ಹೊಂದಿದೆ. ಅಂತಹ ಮೂಲ ಜನಪದ ಕಲೆ ಸಂಸ್ಕೃತಿಯನ್ನು ದಾಖಲಿಸುವ, ಸಂಗ್ರಹಿಸುವ ಕೆಲಸವನ್ನು ಈಗಾಗಲೇ ಮಾಡುತ್ತಿದ್ದು, ಅದರ ಜೊತೆಗೆ ಅಧ್ಯಕ್ಷನಾಗಿ ಇನ್ನೂ ಹೆಚ್ಚಿನ ಕೆಲಸ ಮಾಡಲು ತಮ್ಮೆಲ್ಲರ ಸಹಕಾರ ಅಗತ್ಯ ಎಂದರು. ನಂತರ ಡಾ. ಚಂದ್ರಪ್ಪ ಸೊಬಟಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರುಣ ಹುಡೇದಗೌಡ್ರ, ನಿವೃತ್ತ ಪ್ರಾಚಾರ್ಯ ಜಿ.ಎನ್. ಎಲಿಗಾರ್, ಡಾ. ಎಸ್. ಜಿ. ಬಸವರಾಜ, ಡಾ.ಎಚ್. ಮಂಜು, ಡಾ. ಶರೀಫ ಮಾಕಪ್ಪನವರ, ಎಂ. ಬಿ. ಹಳೇಮನಿ ಬಸವರಾಜ ಜವಳಗಟ್ಟಿ, ಗುಡ್ಡಪ್ಪ ನಿಂಬಣ್ಣವರ, ಕಲಾವಿದ ಅಶೋಕ್ ಕುರುಬರ, ಅರುಂಧತಿ ಆರ್ಯರ ಹಾಜರಿದ್ದರು.