ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲೆಯವರಾದ ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರು ಹಲವು ದಶಕಗಳ ಕಾಲ ಕನ್ನಡಮ್ಮನ ಸೇವೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂದು ಸಾಹಿತಿ, ಉಪನ್ಯಾಸಕ ಬಲ್ಲೇನಹಳ್ಳಿ ಮಂಜುನಾಥ್ ತಿಳಿಸಿದರು.ನಗರದ ಬಂದೀಗೌಡ ಬಡಾವಣೆಯ ಬ್ರಾಹ್ಮಣ ಸಭಾ ಸಮುದಾಯ ಭವನದಲ್ಲಿ ನಡೆದ ಕನ್ನಡದ ಕಣ್ವ ಬಿಎಂಶ್ರೀ ಅವರ ದಿನಾಚರಣೆಯಲ್ಲಿ ಮಾತನಾಡಿ, ಬಿ.ಎಂ.ಶ್ರೀಕಂಠಯ್ಯ ಅವರು ನಾಗಮಂಗಲದ ಬೇಲೂರಿನವರು ಎಂದು ಹೇಳಿಕೊಳ್ಳುವುದು ಹೆಮ್ಮೆಯ ವಿಚಾರ. ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಪ್ರಾಬಲ್ಯದ ನಡುವೆ ಕನ್ನಡ ಭಾಷೆಯ ಅಸ್ಮಿತೆಯನ್ನು ಎತ್ತಿಹಿಡಿದವರು ಎಂದರು.
ತಮ್ಮ ಸಾಂಸಾರಿಕ ಬದುಕಿನ ಸಂಕಷ್ಟದ ನಡುವೆಯೂ ಕನ್ನಡಮ್ಮನ ಸೇವೆಗಾಗಿ ಇಡೀ ಜೀವನವನ್ನು ಅರ್ಪಿಸಿಕೊಂಡು ಆಂಗ್ಲ ಭಾಷೆ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದರೂ ಕನ್ನಡ ಭಾಷೆಯನ್ನು ಬೋಧಿಸುವ ಕೆಲಸ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಭಾಷೆ ಬೆಳವಣಿಗೆ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ದುಡಿದು ನಿಜವಾದ ಕನ್ನಡ ಕಟ್ಟಾಳು ಆದರು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಬಿಎಂಶ್ರೀ ಅವರು ಕನ್ನಡ ನಾಡು ಮತ್ತು ನುಡಿಯ ರಾಯಭಾರಿಯಂತೆ ಕೆಲಸ ಮಾಡಿ ಕನ್ನಡನಾಡನ್ನು ಒಂದು ಗೂಡಿಸುವಲ್ಲಿ, ಕನ್ನಡ ಭಾಷೆ ಮಹತ್ವವನ್ನು ಹೆಚ್ಚಿಸುವಲ್ಲಿ ತಮ್ಮ ಬದುಕನ್ನು ಅರ್ಪಿಸಿಕೊಂಡವರು. ಮಂಡ್ಯ ಜಿಲ್ಲೆಯವರಾಗಿ ಕನ್ನಡ ಭಾಷೆಗೆ ನೀಡಿದ ಅವರ ಕೊಡುಗೆ ಮಹತ್ತರವಾಗಿದೆ ಎಂದರು.
ಇದೇ ವೇಳೆ ಜಿಲ್ಲಾ ಬ್ರಾಹ್ಮಣ ಸಭಾ ಜಿಲ್ಲಾಧ್ಯಕ್ಷ ಪ್ರೊ.ಎಚ್.ಎಸ್. ನರಸಿಂಹಮೂರ್ತಿ ಪ್ರತಿಭಾವಂತ ವಿದ್ಯಾರ್ಥಿಗಳು, ಸಮಾಜದ ಗಣ್ಯರನ್ನು ಅಭಿನಂದಿಸಿದರು. ಈ ವೇಳೆ ನಿವೃತ್ತ ತಹಸೀಲ್ದಾರ್ (ಚುನಾವಣೆ) ಆರ್.ಸೋಮಶೇಖರ್, ನಿವೃತ್ತ ಉಪನ್ಯಾಸಕರಾದ ಆರ್.ಶಿವರಾಮು, ಸೇವಾಬಳಗದ ಅಧ್ಯಕ್ಷ ಎಸ್.ರಮೇಶ್, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ನರಸಿಂಹಮೀರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಮಂಡ್ಯ ಜಿಲ್ಲಾ ಬಬ್ಬೂಕಮ್ಮೆ ಸೇವಾ ಬಳಗದ ಜಿಲ್ಲಾಧ್ಯಕ್ಷ ಎನ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗೌರವಾಧ್ಯಕ್ಷ ಬೆಳ್ಳೂರು ಶಿವರಾಮು, ಕಾರ್ಯದರ್ಶಿ ಸೂರ್ಯ ಪ್ರಕಾಶ್, ಬಾಲಣ್ಣ ಸೇರಿದಂತೆ ಹಲವರು ಇದ್ದರು.