7 ರಂದು ನಟನದಲ್ಲಿ ಸುಬ್ಬಣ್ಣ ಸ್ಮರಣೆಗೆ ಕನ್ನಡ ಕಾವ್ಯಕಣಜ

| Published : Jul 05 2024, 12:46 AM IST

7 ರಂದು ನಟನದಲ್ಲಿ ಸುಬ್ಬಣ್ಣ ಸ್ಮರಣೆಗೆ ಕನ್ನಡ ಕಾವ್ಯಕಣಜ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನರಂಗಶಾಲೆಯಲ್ಲಿ ಕನ್ನಡ ಕಾವ್ಯ ಕಣಜ ನಾಟಕವು ಪ್ರದರ್ಶನಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಟನರಂಗ ಶಾಲೆಯು ತನ್ನಚಟುವಟಿಕೆಯ ಭಾಗವಾಗಿ, ಆಧುನಿಕ ಕನ್ನಡರಂಗಭೂಮಿಗೆ ಅಪಾರಕೊಡುಗೆ ಕೊಟ್ಟಂತಹ, ಕರ್ನಾಟಕದ ಹಳ್ಳಿ ಹಳ್ಳಿಗೂ ನಾಟಕ ತಲುಪುವಂತೆ ಮಾಡಿ, ಮೂಲೆ ಮೂಲೆಯಲ್ಲಿಯೂ ರಂಗ ಚಟುವಟಿಕೆಗಳು ಚಿಗುರಲು ಮೂಲ ಕಾರಣರಾದ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ನಾಟಕಕಾರ, ಚಿಂತಕ, ರಂಗ ಸಂಘಟಕ, ನೀನಾಸಂ ನ ನಿರ್ಮಾತೃ ಕೆ.ವಿ. ಸುಬ್ಬಣ್ಣ ಅವರ ನೆನಪಿನಲ್ಲಿ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಇದರ ಅಂಗವಾಗಿ ಜು. 7 ರಂದು ಸಂಜೆ 6.30ಕ್ಕೆ ಸರಿಯಾಗಿ ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನರಂಗಶಾಲೆಯಲ್ಲಿ ಕನ್ನಡ ಕಾವ್ಯ ಕಣಜ ನಾಟಕವು ಪ್ರದರ್ಶನಗೊಳ್ಳಲಿದೆ. ನಾಟಕದ ರಂಗಪಠ್ಯ, ಸಂಗೀತ, ನಿರ್ದೇಶನ ನಾಡಿನ ಹೆಸರಾಂತ ರಂಗ ಕರ್ಮಿ ಡಾ. ಶ್ರೀಪಾದ ಭಟ್‌ ಅವರದ್ದು.

ಕನ್ನಡ ಕಾವ್ಯ ಕಣಜ ನಾಟಕದ ಕುರಿತು: ಇದೊಂದು ಕಾವ್ಯ ಪ್ರಯೋಗ. ಕಾವ್ಯ ಪ್ರಸ್ತುತಿ. ಕನ್ನಡ ನಾಡುನುಡಿ ಇದುವರೆಗೂ ಬೆಳೆಸಿಕೊಂಡು ಬಂದ ಸಂಬಂಧದ ವಿವಿಧ ವಿನ್ಯಾಸಗಳನ್ನು ಕವಿ ಪದಗಳ ಮೂಲಕ ಕಾಣಲಾಗಿದೆ.

ಇಲ್ಲಿ ಶಾಸನಗಳಿವೆ, ಕವನಗಳಿವೆ, ಹಾಡಿದೆ, ವಚನವಿದೆ, ಕತೆಗಳಿವೆ, ಕಾದಂಬರಿಯ ಭಾಗಗಳಿವೆ. ಇವೆಲ್ಲವೂ ನಟರ ಶರೀರ ಮತ್ತು ಶಾರೀರಗಳನ್ನು ಆಧರಿಸಿ ಅಭಿನೀತಗೊಳ್ಳಲಿದೆ. ಕನ್ನಡ ಕಾವ್ಯ ಕಣಜ, ಕನ್ನಡ ಕಾವ್ಯಗಳ ರಂಗಪ್ರಸ್ತುತಿ. ಶಾಸನ ಪದಗಳಿಂದ ಆರಂಭಿಸಿ ಈ ಹೊತ್ತಿನವರೆಗಿನ ಸಾಹಿತ್ಯ ಚರಿತ್ರೆಯನ್ನು ಅನುಲಕ್ಷಿಸಿ ಅವುಗಳಲ್ಲಿ ಕೆಲವು ಪಠ್ಯಗಳನ್ನು ಆಯ್ದು ಪ್ರಸ್ತುತ ಪಡಿಸಲಾಗುತ್ತಿದೆ.

ಇಲ್ಲಿ ಆದರ್ಶ ಮನುಷ್ಯರ ಹುಡುಕಾಟವಿದೆ; ಸಂಬಂಧಗಳ ವಿವಿಧ ಸ್ವರೂಪಗಳ ಅನ್ವೇಷಣೆಯಿದೆ; ವರ್ಣ, ವರ್ಗ, ಲಿಂಗ ತಾರತಮ್ಯಗಳ ಸ್ವರೂಪ ಕಾರಣಗಳ ಹುಡುಕಾಟದ ಪ್ರಯತ್ನವೂಇಲ್ಲಿದೆ.ಕಾವ್ಯಗಳನ್ನು ರಂಗದ ಮೇಲೆ ಪ್ರಯೋಗಿಸಬಹುದಾದ ಹಲವು ಮಾದರಿಗಳ ಪ್ರಸ್ತುತಿಯೂಇಲ್ಲಿದೆ.

ಮಾಹಿತಿಗಾಗಿ ಮೊ. 7259537777, 9480468327, 9845595505 ಸಂಪರ್ಕಿಸಬಹುದು.