ಸರ್ಕಾರಿ ಶಾಲೆಗಳು ಸಬಲೀಕರಣವಾದಾಗ ಕನ್ನಡ ಭಾಷಾ ಬೆಳವಣಿಗೆ

| Published : Nov 23 2025, 01:45 AM IST

ಸರ್ಕಾರಿ ಶಾಲೆಗಳು ಸಬಲೀಕರಣವಾದಾಗ ಕನ್ನಡ ಭಾಷಾ ಬೆಳವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಆಲೂರು ತಾಲೂಕು ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವ ನಿಮಿತ್ತ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಜನ್ಮದಿನ, ಮದುವೆ ದಿನಗಳಂತಹ ವಿಶೇಷ ಘಳಿಗೆಗಳನ್ನು ಯಾವುದಾದರೂ ಒಂದು ಶಾಲಾ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿ, ಮಕ್ಕಳಲ್ಲಿ ಉಂಟಾಗುವ ಸಂತಸವನ್ನು ಸಂಭ್ರಮಿಸುವ ತೃಪ್ತಿ ಬೇರೆಲ್ಲೂ ಸಿಗಲಾರದು. ಮಕ್ಕಳು ಉತ್ತಮವಾಗಿ ವಿದ್ಯಭ್ಯಾಸ ಮಾಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಶೋಷಿತ ಹಾಗೂ ತಳ ಸಮುದಾಯದ ಮಕ್ಕಳು ಶಿಕ್ಷಿತರಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ತಳ ಸಮುದಾಯದ ಮಕ್ಕಳಿಂದಲೇ ಇಂದು ಸರ್ಕಾರಿ ಶಾಲೆಗಳು ಮುನ್ನಡೆಯುತ್ತಿರುವುದು. ಸರ್ಕಾರಿ ಶಾಲೆಗಳು ಸಬಲೀಕರಣವಾದಾಗ ಮಾತ್ರ ಕನ್ನಡ ಭಾಷಾ ಬೆಳವಣಿಗೆ ಸಾಧ್ಯ ಎಂದು ಸಮಾಜ ಸೇವಕಿ ಎ.ಬಿ. ನಾಗಲಕ್ಷ್ಮೀ ಬಾಲಾಜಿಯವರು ಅಭಿಪ್ರಾಯಪಟ್ಟರು.

ಅವರು ಆಲೂರು ತಾಲೂಕು ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವ ನಿಮಿತ್ತ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಜನ್ಮದಿನ, ಮದುವೆ ದಿನಗಳಂತಹ ವಿಶೇಷ ಘಳಿಗೆಗಳನ್ನು ಯಾವುದಾದರೂ ಒಂದು ಶಾಲಾ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿ, ಮಕ್ಕಳಲ್ಲಿ ಉಂಟಾಗುವ ಸಂತಸವನ್ನು ಸಂಭ್ರಮಿಸುವ ತೃಪ್ತಿ ಬೇರೆಲ್ಲೂ ಸಿಗಲಾರದು. ಮಕ್ಕಳು ಉತ್ತಮವಾಗಿ ವಿದ್ಯಭ್ಯಾಸ ಮಾಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.

ಕವಯಿತ್ರಿ ವಾಣಿ ಮಹೇಶ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ ಸಮಾಜಕ್ಕಾಗಿ ನಾವೇನು ಕೊಟ್ಟಿದ್ದೇವೆ ಎನ್ನುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ನಾಗಲಕ್ಷ್ಮೀ ತಮ್ಮ ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವ ನಿಮಿತ್ತ ಪ್ರತಿವರ್ಷ ಜಿಲ್ಲೆಯ ನೂರಾರು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳು, ಲೇಖನ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಹಾಸನದಿಂದ ಆಲೂರು ತಾಲೂಕಿನ ತಾಳೂರಿಗೆ ಬಂದು ಇಲ್ಲಿಯ ಮಕ್ಕಳ ಅಭ್ಯುದಯಕ್ಕಾಗಿ, ಅವರ ಕಲಿಕೆಗೆ ಉತ್ತೇಜನ ನೀಡುವ ಮೂಲಕ ನಾಗಲಕ್ಷ್ಮೀಯವರು ಮಾದರಿ ಕಾರ್ಯ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಪ್ರಜೆಯೂ ಈ ರೀತಿ ಯೋಚಿಸಿದಾಗ ಸರ್ಕಾರಿ ಶಾಲೆಗಳು ಬೇಗ ಸಬಲೀಕರಣವಾಗುತ್ತವೆ. ಸರಕಾರಿ ಶಾಲೆಯ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೇವಲ ಶಿಕ್ಷಕ, ಪೋಷಕರಿಂದ ಮಾತ್ರವಲ್ಲದೇ ಸಮುದಾಯದಿಂದ ಪ್ರೋತ್ಸಾಹ ಸಿಕ್ಕಾಗ ಸಾಧಿತವಾಗುತ್ತದೆ ಎಂದರು.

ಆಲೂರು ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು ಮಾತನಾಡಿ ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಅದು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಸಾಧ್ಯ. ಸರಕಾರಿ ಕನ್ನಡ ಶಾಲೆಗಳನ್ನು ಉನ್ನತೀಕರಿಸುವುದು, ಕಲಿಕೆಯ ಗುಣಾತ್ಮಕತೆಯನ್ನು ಹೆಚ್ಚಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಸಹಕಾರ ಅತ್ಯಗತ್ಯವಾಗಿದೆ. ಹಾಸನದಿಂದ ಗ್ರಾಮಾಂತರ ಪ್ರದೇಶದಲ್ಲಿರುವ ತಾಳೂರು ಶಾಲೆಗೆ ಬಂದು ನಮ್ಮ ಮಕ್ಕಳಿಕೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಕ್ಕಳೊಂದಿಗೆ ಸಂಭ್ರಮಿಸುವ ನಾಗಲಕ್ಷ್ಮೀಯವರ ಆಸಕ್ತಿ, ಸಾಮಾಜಿಕ ಕಳಕಳಿ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್‌, ಆಲೂರು ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು, ಸಮಾಜಸೇವಕಿ ಎ.ಬಿ.ನಾಗಲಕ್ಷ್ಮೀ ಬಾಲಾಜಿ, ಕವಯಿತ್ರಿ ವಾಣಿ ಮಹೇಶ್ ಉಪಸ್ಥಿತರಿದ್ದರು.