ಸಾರಾಂಶ
ದೊಡ್ಡಬಳ್ಳಾಪುರ: ಕನ್ನಡಿಗರ ಕನ್ನಡ ಅಭಿಮಾನ ಭಾಷಣಗಳಿಗೆ ಮಾತ್ರ ಸೀಮಿತ ಆಗಬಾರದು. ಕನ್ನಡ ಭಾಷೆಯನ್ನು ಎಲ್ಲೆಡೆ ಬಳಸಿದಾಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಜಿ.ಎಸ್.ಸ್ಮಿತಾ ತಿಳಿಸಿದರು.ಅವರು ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಶ್ರೀಮಂತ ಪರಂಪರೆ ಇದೆ. ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಕೃತಿಗಳು ಬಂದಿದೆ. ಎಂದಿಗೂ ಕನ್ನಡ ಸಾಹಿತ್ಯದ ಓದುಗರು ಕಡಿಮೆಯಾಗಬಾರದು. ಕನ್ನಡ ನಾಡು ಮೊದಲಿನಿಂದಲೂ ಸರ್ವಜನಾಂಗದ ತೋಟ ಎಂಬ ಕೀರ್ತಿಗೆ ಪಾತ್ರವಾಗಿದೆ. ಬೆಂಗಳೂರು ಇಂದು ದೇಶದ ರಾಜಧಾನಿಯಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿರುವ ಕನ್ನಡಿಗರು ಕನ್ನಡ ಭಾಷೆಯಲ್ಲೇ ಮಾತನಾಡಿದರೆ ಇತರರು ಕನ್ನಡ ಕಲಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳು ಈಗ ಕನ್ನಡದಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ. ಕನ್ನಡದಲ್ಲಿ ವ್ಯಾಸಂಗ ಮಾಡಿದವರು ಸಹ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಸೂಕ್ತ ಸಿದ್ದತೆ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯ. ಮಾಹಿತಿಗಳು ಈಗ ಕನ್ನಡ ಜಾಲತಾಣಗಳಲ್ಲೂ ದೊರೆಯುತ್ತವೆ. ಇವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಕನ್ನಡಿಗರು ಸ್ಥಳೀಯ ಉದ್ಯೋಗಗಳನ್ನು ಪಡೆಯಲು ಕೌಶಲ್ಯ ಜ್ಞಾನ ಅರಿಯಬೇಕೆಂದರು.ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ಕನ್ನಡ ಭಾಷೆ ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ಭಾಷೆಯಾಗಿದೆ. ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಕರೆಯಲಾಗಿದೆ. ಕನ್ನಡ ಭಾಷೆಯ ಅನನ್ಯತೆಯನ್ನು ಕನ್ನಡ ಕವಿಗಳು ಹಾಡಿ ಹೊಗಳಿದ್ದಾರೆ. ಹಚ್ಚೇವು ಕನ್ನಡದ ದೀಪ’ ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ. ಕನ್ನಡ ನೆಲದಲ್ಲಿ ಕನ್ನಡತನ ಎಂದಿಗೂ ಮರೆಯಾಗಬಾರದು. ಕನ್ನಡತನವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕನ್ನಡ ಭಾಷೆಯನ್ನು ಎಲ್ಲಾ ರಂಗದಲ್ಲೂ ಸಶಕ್ತ ಭಾಷೆಯಾಗಿ ಬಳಸಬೇಕಾಗಿದೆ. ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣವನ್ನು ಕನ್ನಡ ಭಾಷಾ ಮಾಧ್ಯಮದಲ್ಲಿ ಕಲಿಯುವ ವಾತಾವರಣ ನಿರ್ಮಾಣ ಆಗಬೇಕಾಗಿದೆ. ಇದಕ್ಕಾಗಿ ಕನ್ನಡ ಪದಕೋಶವನ್ನು ಕನ್ನಡ ಭಾಷಾ ತಜ್ಞರು ಸಿದ್ದಗೊಳಿಸಬೇಕು. ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯಲ್ಲಿ ಎಲ್ಲಾ ವ್ಯವಹಾರಗಳು ನಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅನಿತಾದೇವಿ ನಾಯಕ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಆಯುಕ್ತ ವೆಂಕಟರಾಜು, ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮಮತಾ, ನಿಲಯದ ಪಾಲಕರಾದ ಚಂದ್ರಶೇಖರ್, ವೆಂಕಟೇಶ್ ಮತ್ತು ವಿದ್ಯಾರ್ಥಿನಿಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.17ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕು ಕಸಾಪ ನೇತೃತ್ವದಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಉಪನ್ಯಾಸ ನಡೆಯಿತು.