ಕನ್ನಡ ಭಾಷೆ ಎಂಬುದು ಎಲ್ಲರ ಆಂತರ್ಯ: ಪ್ರೊ.ಕಾಳೇಗೌಡ ನಾಗವಾರ

| Published : Mar 24 2024, 01:30 AM IST

ಸಾರಾಂಶ

ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ೨೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಾನಪದ ತಜ್ಞ ಪ್ರೊ.ಕಾಳೇಗೌಡ ನಾಗವಾರ ಉದ್ಘಾಟಿಸಿದರು.

ಜಾನಪದ ತಜ್ಞ ಅಭಿಮತ । ಹೆತ್ತೂರಿನಲ್ಲಿ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಸಕಲೇಶಪುರ

ಭಾಷೆಯ ಹಬ್ಬವನ್ನು ರಾಜ್ಯದ ಬೇರೆಡೆ ಆಚರಿಸುವುದು ತೀರ ಅಪರೂಪ. ಈ ಬಗ್ಗೆ ಇತರೆ ರಾಜ್ಯದ ಜನರಲ್ಲಿ ಭಾರಿ ಪ್ರಮಾಣದ ಅಭಿಮಾನವಿದೆ. ಕನ್ನಡ ಎಂಬುದು ಭಾಷೆಯಲ್ಲ ಎಲ್ಲರ ಅಂತರ್‍ಯ. ಎಲ್ಲರು ಸಂತಸದಿಂದ ಬಾಳಬೇಕು ಎಂಬುದು ಕನ್ನಡ ಸಾಹಿತ್ಯದ ಆಶಯ. ಕನ್ನಡಕ್ಕಾಗಿ ಕೆಲಸ ಮಾಡುವುದು ಸಂತಸದ ಕೆಲಸ ಎಂದು ಜಾನಪದ ತಜ್ಞ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.

ತಾಲೂಕಿನ ಹೆತ್ತೂರಿನಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ೨೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಪ್ರಪಂಚದ ಅತ್ಯಂತ ಸಮೃದ್ಧ ಭಾಷೆ ಕನ್ನಡ. ಉತ್ತಮ ಸಾಹಿತ್ಯದಿಂದ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ. ನಮ್ಮ ಬಾಷೆಯಿಂದಾಗಿ ಕರ್ನಾಟಕದ ಜನತೆ ಸಹೃದಯಿಗಳೆಂದು ಕರೆಸಿಕೊಳ್ಳಲು ಕಾರಣವಾಗಿದೆ ಎಂದು ಹೇಳಿದರು.

ಜಗತ್ತಿನ ಅತ್ಯಂತ ಸುಂದರ ಪ್ರದೇಶವಾದ ಪಶ್ಚಿಮಘಟ್ಟವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ತಿಳಿಸಿದರು.

ಹೈಕೋರ್ಟ್‌ನ ನ್ಯಾಯಾದೀಶ ಎಚ್.ಪಿ.ಸಂದೇಶ್ ಮಾತನಾಡಿ, ಕನ್ನಡದ ಶಬ್ಧ ಸಂಪತ್ತಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಪಡೆಯಬೇಕು. ಅಕ್ಷರ ಜಾತ್ರೆ ಹೊಸಪದಗಳ ಅನ್ವೇಷಣೆಗೆ ದಾರಿಯಾಗಬೇಕಿದೆ ಎಂದು ತಿಳಿಸಿದರು.

ಕನ್ನಡ ಶಾಸ್ತ್ರಿಯ ಭಾಷೆ ಎಂದು ಘೋಷಿಸಿ ದಶಕಗಳೇ ಕಳೆಯುತ್ತ ಬಂದರೂ ತಮಿಳು ನಾಡಿನಂತೆ ನಮ್ಮಲ್ಲಿ ಶಾಸ್ತ್ರಿಯ ಭಾಷೆಯ ಸಂಶೋದನೆಗಾಗಿ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆದಿಚುಂಚುನಗಿರಿ ಶಾಖಾಮಠದ ಶಂಭುನಾಥ ಸ್ವಾಮಿಜಿ ಮಾತನಾಡಿ, ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಸಾಹಿತಿಗಳು ತಲೆಮಾರಿನಿಂದ ತಲೆಮಾರಿಗೆ ಸಂಸ್ಕೃತಿಯನ್ನು ಕೊಂಡೊಯ್ಯುವ ರೂವಾರಿಗಳು. ಕನ್ನಡ ಎಂಬುದು ಮಣ್ಣಿನ ಸೊಗಡಾಗಿದೆ. ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಇಷ್ಟು ಪುರಾತನ ಭಾಷೆಯ ಅಳಿವು ಅಸಾಧ್ಯ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ, ಇಂದು ನಗರಗಳ ಸಮ್ಮೇಳನ ಆಯೋಜಿಸಿ ಜನರನ್ನು ಸೇರಿಸುವುದು ಸಾಹಸದ ಕೆಲಸ. ಗ್ರಾಮೀಣ ಭಾಗಗಳಲ್ಲಿ ಅಲ್ಪಸ್ಪಲ್ಪ ಸಾಹಿತ್ಯದ ಬಗ್ಗೆ ಅಭಿಮಾನಿಗಳಿರುವ ಕಾರಣ ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ನಾಡ ಧ್ವಜಾರೋಹಣವನ್ನು ತಹಸೀಲ್ದಾರ್ ಮೇಘನಾ ಹಾಗೂ ಸಾಹಿತ್ಯ ಪರಿಷತ್ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ ನೇರವರಿಸಿದರು.

ಮೆರವಣಿಗೆ:

ಧ್ವಜಾರೋಹಣ ನೆರವೇರಿಸಿದ ನಂತರ ಹೆತ್ತೂರು ಗ್ರಾಮ ದೇವತೆ ಸತ್ಯಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಜಿಲ್ಲಾಧ್ಯಕ್ಷ ಪ್ರೊ. ಮಲ್ಲೇಶ್‌ಗೌಡ, ಸಮ್ಮೇಳನಾಧ್ಯಕ್ಷೆ ಶೈಲಾಜಾ ಹಾಸನ್, ಸಕಲೇಶಪುರ ತಾಲೂಕು ಅಧ್ಯಕ್ಷೆ ಶಾರದ ಗುರುಮೂರ್ತಿ, ಹೆತ್ತೂರು ಘಟಕದ ಅಧ್ಯಕ್ಷ ರವಿಕುಮಾರ್‌ ಹೆತ್ತೂರು ದೇವರಿಗೆ ಪೂಜೆ ಸಲ್ಲಿಸಿದ ನಂತರ ಸಮ್ಮೇಳನಾಧ್ಯಕ್ಷರನ್ನು ರಥದಲ್ಲಿ ಅಸೀನಗೊಳಿಸಲಾಯಿತು. ಮಲೆನಾಡು ಸುಗ್ಗಿಕುಣಿತ,ವಾಧ್ಯ ಹಾಗೂ ಹಾಸನದ ಸುಗ್ಗಿಬುಗ್ಗಿ ತಂಡದಿಂದ ವೀರಗಾಸೆ ಕುಣಿತದೊಂದಿಗೆ ಸಮ್ಮೇಳನಾಧ್ಯಕ್ಷರನ್ನು ದೇವಸ್ಥಾನದಿಂದ ಗ್ರಾಮದ ಮುಖ್ಯಬೀಧಿಯಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು.

ಸಮ್ಮೇಳನದ ಆವರಣದಲ್ಲಿ ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ವತಿಯಿಂದ ವ್ಯಂಗ್ಯ ಚಿತ್ರ ಪ್ರದರ್ಶನ ಏರ್ಪಡಿಸಲಾಯಿತು. ಬಟ್ಟೆ, ಪುಸ್ತಕ, ಹಣ್ಣು ಹಂಪಲಗಳ ಮಳಿಗೆಗಳು ಸಾಹಿತ್ಯಾಭಿಮಾನಿಗಳ ಗಮನ ಸೆಳೆದವು.

ಉಪವಿಭಾಗಾಧಿಕಾರಿ ಡಾ. ಎಂ.ಕೆ ಶೃತಿ, ಹೆತ್ತೂರು ಗ್ರಾ.ಪಂ ಅಧ್ಯಕ್ಷ ನಾಗರಾಜ್, ಹೆತ್ತೂರು ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ರವಿಹೆತ್ತೂರು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಪ್ರಗತಿಪರ ಕೃಷಿಕ ದೊಡ್ಡಮಗ್ಗೆ ರಂಗಸ್ವಾಮಿ, ಹೆಮ್ಮಿಗೆ ಮೋಹನ್ ಇದ್ದರು.ಹೆತ್ತೂರಿನಲ್ಲಿ ೨೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಜಾನಪದ ತಜ್ಞ ಕಾಳೇಗೌಡ ನಾಗವಾರ. ಜಿಲ್ಲಾಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ, ನ್ಯಾಯದೀಶ ಎಚ್.ಪಿ ಸಂದೇಶ್ ಇದ್ದರು.