ಕನ್ನಡ ಭಾಷಾ ಕಲಿಕೆ ಸಂಸ್ಕೃತಿ ಭಾಗ: ಪ್ರೊ.ಪದ್ಮನಾಭ

| Published : Nov 29 2023, 01:15 AM IST

ಕನ್ನಡ ಭಾಷಾ ಕಲಿಕೆ ಸಂಸ್ಕೃತಿ ಭಾಗ: ಪ್ರೊ.ಪದ್ಮನಾಭ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಬಿ.ಎಂ. ಜಯಶೀಲ ಮಾತನಾಡಿ, ಕನ್ನಡ ಭಾಷೆ ನಮ್ಮ ಬದುಕಿನ ಭಾಗವಾಗಬೇಕು‌. ಸದಾಕಾಲ ಸಾಹಿತ್ಯ, ಸಂಸ್ಕೃತಿ, ಹಾಡು ಯಾವುದರ ಸಂಪರ್ಕವಿಲ್ಲದೇ ಇದ್ದರೆ ಬದುಕು ಏನಾಗುತ್ತದೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಕಷ್ಟವನ್ನು ಮರೆಯಲು ಸಾಹಿತ್ಯ ಸಂಸ್ಕೃತಿಯ ಸಂಪರ್ಕಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮ್ಮ ಸಂಸ್ಕೃತಿಯ ಭಾಗವಾದ ಕನ್ನಡ ಭಾಷೆಯ ಕಲಿಕೆಯಿಂದ ಮಾತ್ರ ನಿಜವಾದ ನಮ್ಮ ಬದುಕಿನ ಬೆಳವಣಿಗೆ ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಜೆ. ಎಲ್. ಪದ್ಮನಾಭ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ತೀರ್ಥಹಳ್ಳಿ ತಾಲೂಕು ಮುಡುಬಾದ ಜೇಡ್‌ ವ್ಯಾಲಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ 219 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಂಡಗದ್ದೆ ಹೋಬಳಿ ಸಮಿತಿ ಕಾರ್ಯಚಟುವಟಿಕೆಗಳ ಉದ್ಘಾಟನೆ, ಗುರುನಾನಕ್ ಮತ್ತು ಕನಕ ಜಯಂತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಾವು ಬೆಳೆಯುವುದಾದರೆ ಅದು ಕನ್ನಡ ಭಾಷೆಯಿಂದ ಮಾತ್ರ. ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕಿದೆ. ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಬೇಕು ಎನ್ನುವ ಅಂಧತ್ವದಿಂದ ಹೊರಬರಬೇಕು. ಇತರೇ ಭಾಷೆಗಳನ್ನು ಸಮರ್ಥವಾಗಿ ಕಲಿಯಿರಿ. ಆದರೆ ಕನ್ನಡ ಭಾಷೆಯನ್ನು ಎಂದಿಗೂ ಮರೆಯದಿರಿ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಬಿ.ಎಂ. ಜಯಶೀಲ ಮಾತನಾಡಿ, ಕನ್ನಡ ಭಾಷೆ ನಮ್ಮ ಬದುಕಿನ ಭಾಗವಾಗಬೇಕು‌. ಸದಾಕಾಲ ಸಾಹಿತ್ಯ, ಸಂಸ್ಕೃತಿ, ಹಾಡು ಯಾವುದರ ಸಂಪರ್ಕವಿಲ್ಲದೇ ಇದ್ದರೆ ಬದುಕು ಏನಾಗುತ್ತದೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಕಷ್ಟವನ್ನು ಮರೆಯಲು ಸಾಹಿತ್ಯ ಸಂಸ್ಕೃತಿಯ ಸಂಪರ್ಕಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಮಲೆನಾಡಿನ ವಿಶಿಷ್ಟ ಜಾನಪದ ಕಲೆಯಾದ ಅಂಟಿಗೆ ಪಂಟಿಗೆ ಮೂಲಕ ಜ್ಯೋತಿ ತಂದ ಕಲಾವಿದರು ಗೌರವ ಸಮರ್ಪಿಸಿದರು. ಜನಪದ ವೈದ್ಯ ಲಕ್ಷ್ನಣನಾಯ್ಕ, ಈಶ್ವರ ನಾಯ್ಕ ಅವರನ್ನು ಅಭಿನಂದಿಸಲಾಯಿತು. ನೂತನ ಕಸಾಪ ಮಂಡಗದ್ದೆ ಹೋಬಳಿ ಸಮಿತಿ ಪದಾಧಿಕಾರಿಗಳಾದ ಬಿ. ಬಿ. ಮಂಜಪ್ಪ, ಅಶೋಕ ಡಿ., ನೇಮಿರಾಜ್ ಮಂಡಗದ್ದೆ ಸೇರಿದಂತೆ ಹಲವರಿಗೆ ಕಂಕಣ ಕಟ್ಟಿ ಕನ್ನಡ ಶಾಲು ತೊಡಿಸಿ ಗೌರವಿಸಲಾಯಿತು.

ಮಂಡಗದ್ದೆಯ ಗಾಯಕರಾದ ಭವ್ಯ, ಗಣೇಶ್, ಅಶ್ವಿನಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಭದ್ರಾವತಿ ಜಾನಪದ ಕಲಾ ತಂಡ ಚೌಡಿಕೆ ಕಲಾವಿದರಾದ ಲಕ್ಷ್ಮಣರಾವ್ ಸಂಗಡಿಗರು ಕಲಾ ಪ್ರದರ್ಶನ ನಡೆಸಿದರು. ಸಾಹಿತಿಗಳಾದ ಡಾ‌.ಶ್ರೀಪತಿ ಹಳಗುಂದ, ರಂಗಕರ್ಮಿ ಡಾ. ಜಿ. ಆರ್. ಲವ ಕಥೆ ಹೇಳಿದರು. ಕವಿಗಳಾದ ಕೆ. ಎಸ್. ಮಂಜಪ್ಪ, ಡಿ. ಗಣೇಶ್, ಬಿ. ಟಿ. ಅಂಬಿಕಾ, ವಿಜಯ ಜೋಲಿ ಕವನ ವಾಚಿಸಿದರು. ಹಾಸ್ಯ ಕಲಾವಿದರಾದ ಉಮೇಶ್ ಗೌಡರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷರಾದ ಲೀಲಾವತಿ ಜಯಶೀಲ, ಮಂಡಗದ್ದೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಜ್ಯೋತಿ, ಸಂಪನ್ಮೂಲ ಶಿಕ್ಷಣಾಧಿಕಾರಿ ಜ್ಯೋತಿ, ಲೋಟಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಭಾಸ್ಕರ್ ಪಾಲ್ ಉಪಸ್ಥಿತರಿದ್ದರು. ಕಸಾಪ ಹೋಬಳಿ ಸಮಿತಿ ಅಧ್ಯಕ್ಷರಾದ ಬಿ.ಬಿ. ಮಂಜಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಡಿ. ಅಶೋಕ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಡಿ. ಗಣೇಶ್, ಎಂ. ಎಂ‌ ಸ್ವಾಮಿ ನಿರ್ವಹಿಸಿದರು.

- - - ಕೋಟ್‌ ಭಾಷೆಯ ಮಹತ್ವವನ್ನು ನಾವು ತಿಳಿಯುವುದರ ಜೊತೆಗೆ ಭಾಷಾವಾರು ಪ್ರಾಂತ್ಯ ರಚನೆಯಾದ ಉದ್ದೇಶವನ್ನು ಅರಿತು ನಾವೆಲ್ಲ ಜಾಗೃತರಾಗಬೇಕಿದೆ

- ಡಿ.ಮಂಜುನಾಥ, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ

- - -

-ಫೋಟೋ:

ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಪ್ರೊ. ಜೆ.ಎಲ್. ಪದ್ಮನಾಭ ಉದ್ಘಾಟಿಸಿದರು.