ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯವಿರಲಿ: ಹೆಬ್ರಿ

| Published : Oct 06 2025, 01:00 AM IST

ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯವಿರಲಿ: ಹೆಬ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾತೃಭಾಷೆ ನಂತರವಷ್ಟೇ ಇಂಗ್ಲಿಷ್‌, ಹಿಂದಿ ಭಾಷೆಗಳಿಗೆ ಆದ್ಯತೆ ನೀಡಬೇಕು. ಕರ್ನಾಟಕದ ಜನರು ಹೊರ ರಾಜ್ಯಗಳಿಗೆ ಹೋದಾಗ ಅನಿವಾರ್ಯವಾಗಿ ಅಲ್ಲಿನ ಸ್ಥಳೀಯ ಭಾಷೆ ಮಾತನಾಡುವುದು ಅನಿವಾರ್ಯ. ಅದೇ ರೀತಿ ಕರ್ನಾಟಕಕ್ಕೆ ಬರುವ ಹೊರ ರಾಜ್ಯಗಳ ಜನತೆರೂ ಕನ್ನಡ ಭಾಷೆಯನ್ನು ಕಲಿಯಬೇಕು. ಇದು ಅನಿವಾರ್ಯವೂ ಹೌದು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೇ ಮೊದಲ ಪ್ರಾಶಸ್ತ್ಯ ನೀಡಬೇಕು. ನಂತರ ಇಂಗ್ಲಿಷ್‌, ಹಿಂದಿ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಸಾಹಿತಿ ಪ್ರದೀಪ್‌ಕುಮಾರ್‌ ಹೆಬ್ರಿ ಹೇಳಿದರು.

ನಗರದ ಅಶೋಕ ನಗರದಲ್ಲಿರುವ ಜೈ ಕರ್ನಾಟಕ ಪರಿಷತ್ತು ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ- ಮಾತೃಭಾಷೆ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿ, ರಾಜ್ಯದಲ್ಲಿರುವವರು ಯಾರೇ ಆಗಿರಲಿ ಮಾತನಾಡುವ ಭಾಷೆ ಕನ್ನಡ ಆಗಿರಬೇಕು. ಹೊರ ರಾಜ್ಯಗಳಿಂದ ಬಂದಿರುವವರು ತಮ್ಮ ಮನೆಯ ಹೊಸ್ತಿಲಿನ ಒಳಗೆ ಅವರ ಭಾಷೆ ಬಳಸಬೇಕು. ವ್ಯವಹಾರಿಕವಾಗಿ ಕನ್ನಡವನ್ನೇ ಬಳಸುವಂತೆ ಖಡಕ್ಕಾಗಿ ಹೇಳಿದರು.

ಮಾತೃಭಾಷೆ ನಂತರವಷ್ಟೇ ಇಂಗ್ಲಿಷ್‌, ಹಿಂದಿ ಭಾಷೆಗಳಿಗೆ ಆದ್ಯತೆ ನೀಡಬೇಕು. ಕರ್ನಾಟಕದ ಜನರು ಹೊರ ರಾಜ್ಯಗಳಿಗೆ ಹೋದಾಗ ಅನಿವಾರ್ಯವಾಗಿ ಅಲ್ಲಿನ ಸ್ಥಳೀಯ ಭಾಷೆ ಮಾತನಾಡುವುದು ಅನಿವಾರ್ಯ. ಅದೇ ರೀತಿ ಕರ್ನಾಟಕಕ್ಕೆ ಬರುವ ಹೊರ ರಾಜ್ಯಗಳ ಜನತೆರೂ ಕನ್ನಡ ಭಾಷೆಯನ್ನು ಕಲಿಯಬೇಕು. ಇದು ಅನಿವಾರ್ಯವೂ ಹೌದು ಎಂದರು.

ಪ್ರತಿಯೊಬ್ಬರೂ ಕನ್ನಡ ಭಾಷೆ, ಸಾಹಿತ್ಯ ಉಳಿಸಲು ಕಾರ್ಯೋನ್ಮುಖರಾಗಬೇಕು. ಇದು ಕನ್ನಡಿಗರ ಕರ್ತವ್ಯ. ನಮ್ಮ ಅಂತರಾಳ ಕೇಳುವುದಾದರೆ ನಾವು ಕನ್ನಡವನ್ನು ಅನಧಿಕೃತವಾಗಿ ಕೊಲೆ ಮಾಡಿಕೊಂಡು ಬಂದಿದ್ದೇವೆ. ಏಕೆಂದರೆ ಕನ್ನಡ ಶಾಲೆಯಲ್ಲಿ ಓದಿದ ನಾವು ನಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸುತ್ತಿದ್ದೇವೆ. ಕನ್ನಡದ ಬಗ್ಗೆ ಮಾತನಾಡುವ ನಾವು ಕನ್ನಡದ ಕೆಲಸಗಳಿಗೆ ತೊಡಗಿಸಿಕೊಳ್ಳುವುದಿಲ್ಲ. ಈ ಬಗ್ಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಎಲ್ಲರ ಬಳಿಯೂ ಮೊಬೈಲ್, ಮನೆಗಳಲ್ಲಿ ಟಿವಿ ನಮ್ಮ ಮುಂದೆ ಇರುತ್ತದೆ. ಆದರೆ ಎಷ್ಟು ಜನರ ಕೈಯಲ್ಲಿ ಕನ್ನಡ ಪುಸ್ತಕ ಇರುತ್ತದೆ ಎಂಬುದು ಪ್ರಶ್ನೆಯಾಗಿದ್ದು, ಪ್ರತಿನಿತ್ಯ ಕನಿಷ್ಠ ೮ ಪುಟಗಳಾದರೂ ಓದಬೇಕು. ಕನ್ನಡ ಭಾಷೆ, ಸಂಸ್ಕೃತಿ ವಿಷಯವನ್ನು ತಿಳಿದುಕೊಳ್ಳಬೇಕು ಎಂದರು.

ಜೈ ಕರ್ನಾಟಕ ಪರಿಷತ್ತು ರಾಜ್ಯಾಧ್ಯಕ್ಷ ಎಸ್.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ೩೨ನೇ ವಾರ್ಡ್ ಶಾಖೆ ಮಹಿಳಾಧ್ಯಕ್ಷರಾಗಿ ಬಿ.ವಿ.ವರಲಕ್ಷ್ಮಿ, ೩೪ನೇ ವಾರ್ಡ್ ಮಹಿಳಾ ಶಾಖಾಧ್ಯಕ್ಷರನ್ನಾಗಿ ನಾಗಮ್ಮ ಅವರನ್ನು ನೇಮಕ ಮಾಡಲಾಯಿತು. ಜಿ.ವಿ.ನಾಗಾರಾಜು ನೇಮಕಾತಿ ಪತ್ರ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕೆ.ಬಿ.ಕೆಂಪೇಗೌಡ, ಬಿ.ಪುಟಸ್ವಾಮಿ, ಸುಶೀಲಮ್ಮ, ತನುಜಾ ಕೆಂಪೇಗೌಡ, ಮಂಜುಳ ದೇವರಾಜ್, ರೇಖಾ, ಎಂ.ಪುಟ್ಟಸ್ವಾಮಿ, ಯುವಕರಾಧ ಗೆಲುವಂತ್, ನಿಶ್ಚಿತ್, ಯಶಸ್ಸು, ಅಮೋಘ ಇತರರು ಭಾಗವಹಿಸಿದ್ದರು.