ಅಂತರ್ಜಾಲ ತಾಣದ ಬಳಕೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಆದರೆ, ನಮ್ಮ ಹಿರಿಯರು ಭಾಷೆಯ ಅದ್ಭುತ ಲೋಕವನ್ನೇ ಕಟ್ಟಿಕೊಟ್ಟಿದ್ದಾರೆ. ನಿತ್ಯ ಬಳಸಿದರೆ ಸಾಕು, ಕನ್ನಡದ ಸೊಬಗು ಇಮ್ಮಡಿಸುತ್ತದೆ. ಪಂಪನಿಂದ ಆರಂಭವಾಗಿ ಶಿವಶರಣರು, ಹರಿದಾಸರಿಂದ ಮುಂದುವರಿದ ಕನ್ನಡವು ವಿಶಿಷ್ಟ ಧಾರಣ ಶಕ್ತಿಯನ್ನು ಪಡೆದಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ದೇಶದೊಳಗೆ ಮತ್ತು ಹೊರಗೆ ಕನ್ನಡದ ಸ್ಮರಣೆ ಆಚರಣೆಯು ಭಾಷೆಯ ಅಸ್ಮಿತೆಗೆ ಸಾಕ್ಷಿಯಾಗಿದೆ. ಭಾವನಾತ್ಮಕ ಸ್ಪರ್ಶವಿರುವ ಕನ್ನಡ ಭಾಷೆಯನ್ನು ವರ್ಷಪೂರ್ತಿ ಕ್ರಿಯಾತ್ಮಕವಾಗಿ ಬಳಸಿ ನಿತ್ಯೋತ್ಸವವಾಗಿಸಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ವತಿಯಿಂದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಅನುಕೂಲಕ್ಕೆ ಯಾವ ಭಾಷೆಗಳನ್ನಾದರೂ ಕಲಿಯಿರಿ. ಆದರೆ, ಅನವಶ್ಯಕವಾಗಿ ಇಂಗ್ಲಿಷ್ ಬಳಕೆ ಬೇಡ. ಮಾತೃಭಾಷೆಗೆ ಹೆಚ್ಚು ಆದ್ಯತೆ ಕೊಟ್ಟು ಕನ್ನಡವನ್ನು ಬಳಸಿ ಬೆಳೆಸಿದರೆ ಕನ್ನಡದ ಪರಂಪರೆಯನ್ನು ಅರಿತ ಕಲೆ, ಸಾಹಿತ್ಯ, ಶಿಕ್ಷಣದ ಒಡನಾಟದಿಂದ ಸಂಬಂಧಗಳ ವಿಶ್ವರೂಪವೇ ಅನಾವರಣವಾಗುತ್ತದೆ ಎಂದರು.
ಅಂತರ್ಜಾಲ ತಾಣದ ಬಳಕೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಆದರೆ, ನಮ್ಮ ಹಿರಿಯರು ಭಾಷೆಯ ಅದ್ಭುತ ಲೋಕವನ್ನೇ ಕಟ್ಟಿಕೊಟ್ಟಿದ್ದಾರೆ. ನಿತ್ಯ ಬಳಸಿದರೆ ಸಾಕು, ಕನ್ನಡದ ಸೊಬಗು ಇಮ್ಮಡಿಸುತ್ತದೆ. ಪಂಪನಿಂದ ಆರಂಭವಾಗಿ ಶಿವಶರಣರು, ಹರಿದಾಸರಿಂದ ಮುಂದುವರಿದ ಕನ್ನಡವು ವಿಶಿಷ್ಟ ಧಾರಣ ಶಕ್ತಿಯನ್ನು ಪಡೆದಿದೆ ಎಂದು ಹೇಳಿದರು.ಇಂದು ರಾಷ್ಟ್ರದ ಸಂವಿಧಾನ ದಿನ. ಪ್ರಜಾಪ್ರಭುತ್ವದ ಆಶಯವನ್ನು ನೀಡಿದ ಡಾ. ಅಂಬೇಡ್ಕರ್ ಹಾಗೂ ರಚನಾ ಸಮಿತಿಗೆ ಧನ್ಯವಾದಗಳನ್ನು ಸಲ್ಲಿಸೋಣ ಎಂದರು.
ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳು ಆಶೀರ್ವಚನ ನೀಡಿ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಸಂಪತ್ಭರಿತ ಭಾಷೆ ನಮ್ಮದು. ಇಂಥ ಶ್ರೇಷ್ಠ ಕನ್ನಡದ ಕಂಪು ಘನತೆಯನ್ನು ವಿಶ್ವದೆಲ್ಲೆಡೆ ಪಸರಿಸಿದ ನಾಗತಿಹಳ್ಳಿ ಚಂದ್ರಶೇಖರ ನಮ್ಮೊಂದಿಗೆ ಇದ್ದಾರೆ ಎಂದರು.ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ಆಡಳಿತಾಧಿಕಾರಿ ಡಾ. ಎನ್.ಎಸ್.ರಾಮೇಗೌಡ ಮತ್ತು ಹಿರಿಯ ಪತ್ರಕರ್ತ ಎಂ.ಸಿದ್ದರಾಜು ಅವರನ್ನು ಡಾ.ನಿರ್ಮಲಾನಂದನಾಥಶ್ರೀಗಳು ಸನ್ಮಾನಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಾಡಿನ ಖ್ಯಾತ ಸಾಹಿತಿ ಪ್ರೊ.ಎಸ್.ಎಲ್. ಭೈರಪ್ಪ ಹಾಗೂ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಸಾಹಸಗಾಥೆಯ ಕಿರುಚಿತ್ರಗಳಿಗೆ ಸಭಾಂಗಣದಲ್ಲಿ ಚಪ್ಪಾಳೆಯ ಹರ್ಷ ಘೋಷ ಮೊಳಗಿತು. ಇದೇ ವೇಳೆ ವಿವಿ ಉಪಕುಲಪತಿ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ರಚಿಸಿದ 5 ಪುಸ್ತಕಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.ಆದಿಚುಂಚನಗಿರಿ ಮಠದ ಧರ್ಮದರ್ಶಿ ಡಿ.ದೇವರಾಜು ಮಾತನಾಡಿದರು. ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಮೆರವಣಿಗೆ ಹಾಗೂ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ವೇಳೆ ಆದಿಚುಂಚನಗಿರಿ ವಿವಿ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ, ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ವಿವಿ ಡೀನ್ ಗಳಾದ ಡಾ. ಎಂ.ಜಿ.ಶಿವರಾಮ್, ಡಾ.ಬಿ.ರಮೇಶ್, ಡಾ.ಎ.ಟಿ. ಶಿವರಾಮು, ಶ್ರೀ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ಶೈಲನಾಥಸ್ವಾಮೀಜಿ, ಪ್ರಾಂಶುಪಾಲರು, ಅಧಿಕಾರಿ ವರ್ಗದವರು ಇದ್ದರು.