ಕನ್ನಡ ಭಾಷೆ ಮೆರೆಯುವ ಭಾಷೆ ಆಗಬೇಕು: ಕೃಷ್ಣೇಗೌಡ

| Published : Nov 02 2025, 02:45 AM IST

ಸಾರಾಂಶ

ಅನ್ಯಭಾಷೆ, ಅನ್ಯಭಾಷಿಕರೊಂದಿಗೆ ಅವರ ಭಾಷೆಗಳನ್ನು ಕನ್ನಡಿಗರು ಕಲಿತು ಮಾತನಾಡುವ ಪರಿಭ್ರಮಣೆ ಬಿಡಬೇಕಿದೆ. ಮಾತೃಭಾಷೆ ಶಿಕ್ಷಣದಿಂದ ಮೇಧಾವಿಗಳಾಗಿ ಹೊರಹೊಮ್ಮಬಹುದಾಗಿದೆ.

ಕಿಕ್ಕೇರಿ: ಕನ್ನಡ ಭಾಷೆ ಮನದಾಳದಿಂದ ಮೆರೆಯುವ ಭಾಷೆಯಾದರೆ ಮಾತ್ರ ಉಳಿಯಲು ಸಾಧ್ಯ ಎಂದು ಕೆಪಿಎಸ್ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಕೆಪಿಎಸ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡ ಭಾಷೆಗೆ ಸುಂದರ ಲಿಪಿ ಇದ್ದು, ಸುಲಿದ ಬಾಳೆ ಹಣ್ಣಿನಂತೆ ಸುಂದರವಾಗಿ ಮಾತನಾಡುವ ಭಾಷೆ ನಮ್ಮದು ಎಂದರು.

ಕನ್ನಡಿಗರು ಶಾಂತಿಪ್ರಿಯರು. ಅನ್ನ ಕೊಡುವ ಮಾತೃಭಾಷೆಯನ್ನು ಮರೆಯಬಾರದು. ಕನ್ನಡಿಗರಲ್ಲಿನ ಕೀಳರಿಮೆಯಿಂದ ಅನ್ಯಭಾಷಿಕರು ಗ್ರಾಮೀಣ ಪ್ರದೇಶಕ್ಕೂ ಬರುವಂತಾಗಿದೆ. ನಮ್ಮಲ್ಲಿನ ಸಂಪತ್ತು ಇವರ ಬದುಕಿಗೆ ಆಸರೆಯಾದರೆ, ನಮಗೆ ಭಾಷೆ, ನುಡಿ, ಸುಂದರ ಬದುಕು ಬೇಡವಾಗಿದೆ. ಅನ್ನಕೊಡುವ ಭಾಷೆಯನ್ನು ಮರೆಯಬಾರದು ಎಂದರು.

ಬದುಕಿಗೆ ಅನ್ಯಭಾಷೆ ಮಿತವಾಗಿರಲಿ. ಮಾತೃಭಾಷೆ ಶಿಕ್ಷಣಕ್ಕೆ ಒತ್ತು ನೀಡಲು ಸರ್ಕಾರ ಒತ್ತಾಯಿಸಬೇಕಿದೆ. ಖಾಸಗಿ ಶಾಲೆಯಲ್ಲಿನ ಇಂಗ್ಲಿಷ್ ಭಾಷಾ ವ್ಯಾಮೋಹ ಮಕ್ಕಳಲ್ಲಿನ ಕನ್ನಡ ಭಾಷೆಗೆ ಮಾರಕವಾಗಿದೆ ಎಂದು ಬೇಸರಿಸಿದರು.

ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ಅನ್ಯಭಾಷೆ, ಅನ್ಯಭಾಷಿಕರೊಂದಿಗೆ ಅವರ ಭಾಷೆಗಳನ್ನು ಕನ್ನಡಿಗರು ಕಲಿತು ಮಾತನಾಡುವ ಪರಿಭ್ರಮಣೆ ಬಿಡಬೇಕಿದೆ. ಮಾತೃಭಾಷೆ ಶಿಕ್ಷಣದಿಂದ ಮೇಧಾವಿಗಳಾಗಿ ಹೊರಹೊಮ್ಮಬಹುದಾಗಿದೆ ಎಂದರು.

ಇದೇ ವೇಳೆ ರಾಷ್ಟ್ರಧ್ವಜ, ಕನ್ನಡಧ್ವಜ ಆರೋಹಣ ಮಾಡಲಾಯಿತು. ಕನ್ನಡಾಂಭೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಶಿಕ್ಷಕರಾದ ಬಿ.ಎನ್. ಪರಶಿವಮೂರ್ತಿ, ಸುರೇಶ್, ಗಿರೀಶ್, ದೀಪಕ್, ಕೃಷ್ಣಪ್ಪ, ವೆಂಕಟರಮಣ ಹೆಗ್ಗಡೆ, ಸಾಹಿದ್‌ರಿಜ್ವಿ, ರಾಗಿಣಿ, ನಂದಿನಿ, ವಿಶಾಲಾಕ್ಷಿ, ಲೀಲಾವತಿ ಇದ್ದರು.