ಹಾವೇರಿ ನಗರದ ದಾನೇಶ್ವರಿ ನಗರದಲ್ಲಿರುವ ಪದವಿ ಪೂರ್ವ ನೌಕರರ ಭವನದಲ್ಲಿ ನಡೆದ ಕನ್ನಡ ಸಂವರ್ಧನೆ : ವರ್ತಮಾನದ ಸವಾಲುಗಳು ಎಂಬ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಹಿರಿಯ ಕವಿ ಸತೀಶ ಕುಲಕರ್ಣಿ ಮಾತನಾಡಿದರು.

ಹಾವೇರಿ: ಕನ್ನಡಿಗರು ಇರುವ ತನಕ ಕನ್ನಡ ಭಾಷೆ ಎಂದಿಗೂ ಸಾಯುವುದಿಲ್ಲ. ಭಾಷೆ ಜನತೆಯ ಸೊತ್ತು. ಅಂತಹ ಭಾಷೆಗೆ ಆಗಾಗ ಏರುಪೇರುಗಳು ಬರುಬಹುದೇ ಹೊರತು ಅದೆಂದಿಗೂ ನಾಶವಾಗುವುದಿಲ್ಲ ಎಂದು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು.

ನಗರದ ದಾನೇಶ್ವರಿ ನಗರದಲ್ಲಿರುವ ಪದವಿ ಪೂರ್ವ ನೌಕರರ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರಿಗಾಗಿ ಏರ್ಪಡಿಸಿದ್ದ ಕನ್ನಡ ಸಂವರ್ಧನೆ: ವರ್ತಮಾನದ ಸವಾಲುಗಳು ಎಂಬ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಅಂಬಿಕಾತನಯದತ್ತ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ಸತೀಶ ಕುಲಕರ್ಣಿ ಮಾತನಾಡಿ, ಭಾಷೆ ಉಳಿಯಬೇಕಾದರೆ ಸಾಂಸ್ಕೃತಿಕ ಆಂದೋಲನಗಳು ಬೇಕು. ಹಾಡು ನಾಟಕದಂತಹ ಸಾಹಿತ್ಯದ ಕಲಿಕೆಯನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಿದರೆ ಮಾತೃ ಭಾಷೆಯ ಪ್ರೀತಿ ಉಳಿಯುತ್ತೆ, ಬೆಳೆಯುತ್ತದೆ. ಎಂದರು.ಸಾಹಿತಿ ಮಾರುತಿ ಶಿಡ್ಲಾಪೂರ ಮಾತನಾಡಿ, ಕನ್ನಡ ಭಾಷೆಗೆ ಅದರದೇಯಾದ ಸೆಳೆತ ಮಿಳಿತಗಳಿವೆ. ಪಠ್ಯದ ಜೊತೆಗೆ ಕನ್ನಡ ಸಾರಸ್ವತ ಲೋಕವನ್ನು, ಭಾಷೆಯ ಸತ್ವವನ್ನು ಹೊಸ ಪೀಳಿಗೆಗೆ ತಿಳಿಪಡಿಸುವ ಅಗತ್ಯವಿದೆ ಎಂದರು.ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜುಗಳ ಕನ್ನಡ ವೇದಿಕೆಯ ಅಧ್ಯಕ್ಷ ಶಿವನಗೌಡ ಪಾಟೀಲ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ನಿಸ್ಸೀಮಗೌಡರ, ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಡಿ. ಸತೀಶ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಬಿ.ಎಂ. ಬೇವಿನಮರದ, ಲೇಕಕಿ ಡಾ ಪುಷ್ಪಾ ಶಲವಡಿಮಠ, ಹೊನ್ನಪ್ಪ ಹೊನ್ನಪ್ಪನವರ ಇದ್ದರು. ಜಾಗೃತಿ ಸಮಿತಿಯ ಡಾ. ಚಾಮರಾಜ ಕಮ್ಮಾರ ಸ್ವಾಗತಿಸಿದರು. ಸದಸ್ಯ ಜಿ.ಎಂ. ಓಂಕಾರಣ್ಣನವರ ನಡೆಸಿಕೊಟ್ಟರು. ಕುಮಾರ ಮಡಿವಾಳರ ವಂದಿಸಿದರು.ಗಮನ ಸೆಳೆದ ಗೋಷ್ಠಿಗಳು: ಸಮಕಾಲೀನ ಕನ್ನಡ: ಭಾಷಿಕ ಮತ್ತು ಸಾಹಿತ್ಯಿಕ ಸವಾಲುಗಳು ಎಂಬ ಮೊದಲ ಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ ನೀಹ ಅವರು ತಮ್ಮ ವಿಚಾರಗಳನ್ನು ಮಂಡಿಸುತ್ತ ಎಲ್ಲವನ್ನು ಒಳಗೊಳ್ಳುವುದೇ ಕನ್ನಡದ ಹೆಮ್ಮೆ. ಕನ್ನಡದ ಅನೇಕ ಪದಗಳು ಕಾಲಾಂತರದಲ್ಲಿ ಬದಲಾಗಿ ಹೊಸ ಅರ್ಥವನ್ನು ಪಡೆಯುತ್ತಿವೆ. ಇಂತಹ ಶಕ್ತಿ ಕನ್ನಡಕ್ಕೆ ಮಾತ್ರ ಇದೆ. ಇಂಗ್ಲಿಷ ಮತ್ತು ಹಿಂದಿ ಭಾಷೆಗಳೇ ನಮಗೆ ಸವಾಲಾಗಿವೆ ಎಂದು ಹೇಳಿ ಬೆಂಗಳೂರು ಕೇಂದ್ರಿತ ಭಾಷಾ ಚೌಕಟ್ಟು ಬೇಕಾಗಿಲ್ಲ ಎಂದರು. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಪುಷ್ಪಾವತಿ ಶಲವಡಿಮಠ ವಹಿಸಿ ನೆಲ ಮೂಲದ ಪದಗಳು ಕಾಣೆಯಾದರೆ, ಭಾಷೆ ಸತ್ತು ಹೋದಂತೆ. ಅರ್ಥ ಸಂಕುಚಿತ ಪದಗಳನ್ನು ಬಿಟ್ಟು ಹೊಸ ಭಾಷೆಯನ್ನು ವಚನಕಾರರಂತೆ ಕಟ್ಟಬೇಕಾಗಿದೆ. ಅಂದಾಗ ಕನ್ನಡ ಬೆಳೆಯಲು ಉಳಿಯಲು ಸಾಧ್ಯ ಎಂದರು. ಕನ್ನಡ ಬಲವರ್ಧನೆ : ಸಮಾಜಮುಖಿ ಚಿಂತನೆಗಳು ಎಂಬ ಎರಡನೇ ಗೋಷ್ಠಿಯಲ್ಲಿ ಧಾರವಾಡದ ಸಾಹಿತಿ ಡಾ.ಶ್ರೀಧರ ಭದ್ರನ್ ತಮ್ಮ ವಿಚಾರಗಳನ್ನು ಮಂಡಿಸಿ ತನ್ನದೇ ನೆಲದಲ್ಲಿ ಕನ್ನಡ ಪರಕೀಯ ಆಗುವ ಹಂತದಲ್ಲಿವೆ. ಕನ್ನಡಕ್ಕೆ ಕನ್ನಡಿಗರೇ ಕಾವಲುಗಾರರಾಗದಿದ್ದರೆ ಅದಕ್ಕೆ ಉಳಿವು ಇಲ್ಲ. ಆಡಳಿತ, ಶಿಕ್ಷಣ ಹಾಗೂ ಮಾಧ್ಯಮಗಳಲ್ಲಿ ಕನ್ನಡ ಬಳಕೆಯ ಅಗತ್ಯವಿದೆ. ಕನ್ನಡದ ಬಗ್ಗೆ ಎಷ್ಟೇ ಮಾತನಾಡಿದರೂ ಕನ್ನಡಕ್ಕೊಂದು ಸುದ್ದಿಮೂಲ ಇಲ್ಲದಿರುವುದು ವಿಷಾದಕರ ಎಂದರು. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಚಾಮರಾಜ ಎಸ್ ಕಮ್ಮಾರವರು ವಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಲ್ಲ ನಿಟ್ಟಿನಿಂದ ಕನ್ನಡ ಸಂವರ್ಧನೆಗೆ ಪ್ರಯತ್ನಿಸುತ್ತಿದೆ. ಜಿಲ್ಲೆಯಲ್ಲಿ ಪದವಿಪೂರ್ವ ಕನ್ನಡ ಪ್ರಾಧ್ಯಾಪಕರಿಗಾಗಿಯೇ ವಿಚಾರ ಸಂಕಿರಣ ನಡೆಸುತ್ತಿದ್ದು ಮುಂಬರುವ ದಿನಗಳಲ್ಲಿ ಇದು ಉಪಯುಕ್ತವಾಗಲಿದೆ ಎಂದರು. ವೇದಿಕೆಯಲ್ಲಿ ಶಿವನಗೌಡ ಪಾಟೀಲ, ಮಾರುತಿ ಶಿಡ್ಲಾಪೂರ, ಬಿ.ಬಿ. ಇಟ್ಟಿಗುಡಿ, ಎಸ್.ಎಸ್. ನಿಸೀಮಗೌಡರ, ಎಂ.ಬಿ. ಸತೀಶ, ಡಾ. ಬಿ.ಎಂ. ಬೇವಿನಮರಡ ಮುಂತಾದವರು ಇದ್ದರು. ಜಿ.ಎಂ. ಓಂಕಾರಣ್ಣನವರ ಸ್ವಾಗತಿಸಿದರು. ಹೊನ್ನಪ್ಪ ಹೊನ್ನಪ್ಪನವರು ವಂದಿಸಿದರು.