ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕನ್ನಡ ಕಾರ್ಯಕ್ರಮಗಳು ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷವಿಡೀ ಕನ್ನಡ ಪರ ಕಾರ್ಯಕ್ರಮಗಳು ಜರುಗಬೇಕು. ಕನ್ನಡ ಅಭಿವೃದ್ಧಿಪಡಿಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಸಂಗಪ್ಪ ಅಲೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸೈಂಟ್ ಆನ್ಸ್ ಪದವಿ ಕಾಲೇಜು ಕನ್ನಡ ಭಾಷಾ ವಿಭಾಗ ಸಾಹಿತ್ಯ ಸಂಘ ಕನ್ನಡ ವಿದ್ಯಾರ್ಥಿ ಬಳಗ ಮತ್ತು ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜು ಸಭಾಂಗಣದಲ್ಲಿ ನುಡಿನೃತ್ಯ ಸಂಭ್ರಮ -24 ಮತ್ತು ಪುರಾತನ ವಸ್ತುಗಳ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯು ಧೀಮಂತ ಭಾಷೆಯಾಗಿದೆ. ಕನ್ನಡ ಭಾಷೆಗೆ ಹಲವಾರು ಖ್ಯಾತನಾಮ ಕವಿಗಳು ತಮ್ಮದೇ ಶೈಲಿಯಲ್ಲಿ ಭಾಷೆಯನ್ನು ಧೀಮಂತಗೊಳಿಸಿದ್ದಾರೆ. ಅದೇ ರೀತಿ ಕನ್ನಡ ಸಾಹಿತ್ಯಕ್ಕೆ ವಿಶ್ವ ಮನ್ನಣೆ ಗಳಿಸಿಕೊಟ್ಟಿರುತ್ತಾರೆ. ಪ್ರಸ್ತುತ ರಾಜ್ಯದ ಬೃಹತ್ ನಗರಗಳಲ್ಲಿ ಕನ್ನಡ ಭಾಷೆಯನ್ನಾಡಲು ಹಿಂಜರಿಕೆ ವ್ಯಕ್ತವಾಗುತ್ತಿದೆ ಎಂದರು.ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ. ಸುರೇಶ್ ಎಂ.ಮಾತನಾಡಿ, ಕನ್ನಡ ಶ್ರೀಮಂತ ಭಾಷೆಯಾಗಿದೆ. ಜನಪದ ಸೊಗಡು ಹೊಂದಿದೆ. ವಿದ್ಯಾರ್ಥಿಗಳು ಭಾಷೇ ಬೆಳವಣಿಗೆಗೆ ಪೂರಕವಾಗಿ ಕನ್ನಡ ಬಳಸಬೇಕು ಎಂದು ಕರೆ ನೀಡಿದರು.
ಸಂತ ಅನ್ನಮ್ಮ ವಿಧ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೋಮಿನಿಕ್ ಮಾತನಾಡಿ, ಕನ್ನಡ ಭಾಷೆ ನಮ್ಮ ಜೀವಾಳವಾಗಿದೆ ಎಂದು ಹೇಳಿದರು.ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ ರಾಜೇಶ್ ಪದ್ಮನಾಭ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಯ ಪ್ರಭಾವ ಹೆಚ್ಚಾಗಿದೆ. ಆದರೂ ಕನ್ನಡ ರಾಜ್ಯದಲ್ಲಿರುವ ನಾವು ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿ ಗೌರವಿಸೋಣ ಎಂದು ಕರೆ ನೀಡಿದರು.
ಸಂತ ಅನ್ನಮ್ಮ ಪದವಿ ಕಾಲೇಜ್ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಅರ್ಜುನ್ ಎಚ್.ಆರ್ ಪ್ರಾಸ್ತಾವಿಕ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು ಮಾತನಾಡಿ, ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ ಇದ್ದರೂ, ಭಾಷೆಯನ್ನು ಧೀಮಂತಗೋಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.
ಪದವಿ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ನುಡಿ ನೃತ್ಯ ಕಾರ್ಯಕ್ರಮ ನಡೆದು ಜಿಲ್ಲೆಯ ೧೨ ಪದವಿ ಕಾಲೇಜು ವಿದ್ಯಾರ್ಥಿಗಳ ತಂಡಗಳು ಪಾಲ್ಗೊಂಡವು. ಸ್ಪರ್ಧೆಯಲ್ಲಿ ಗೊಣಿಕೊಪ್ಪ ಕಾವೇರಿ ಪದವಿ ಕಾಲೇಜು ಪ್ರಥಮ, ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.ಕಾಲೇಜು ಆವರಣದಲ್ಲಿ ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕರ್ನಾಟಕ ರಾಜ್ಯ ಜನಪದ ಅಕಾಡೆಮಿ ಪ್ರಶಸ್ತಿ ವಿಜೇತ ಕುಡಿಯರ ದೇವಕ್ಕಿ ಉದ್ಘಾಟಿಸಿ ಉರುಟ್ಟಿಕೊಟ್ಟು ಪ್ರದರ್ಶನ ನೀಡಿದರು.
ಟೀಂ ಎಂಟೋಪಿಸ್ ನೃತ್ಯ ಸಂಯೋಜಕ ವಿಷ್ಣು, ಮೂರ್ನಾಡು ನೃತ್ಯ ಸಂಯೋಜಕ ಚರಣ್ ರಾಜ್ ನೃತ್ಯ ಸ್ಪರ್ಧೆ ತೀರ್ಪುಗಾರರಾಗಿದ್ದರು.ಪದವಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಹೇಮಾ ಬಿ.ಡಿ. ಮತ್ತು ಕನ್ನಡ ವಿಭಾಗದ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ಇದ್ದರು.
ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಬೀನಾ ರೋಸಿ ಸ್ವಾಗತಿಸಿದರು. ಪ್ರತಿಮಾ ಹರೀಶ್ ರೈ ನಿರೂಪಿಸಿದರು. ಉಪನ್ಯಾಸಕಿ ಶಶಿಕಲಾ ವಂದಿಸಿದರು.ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ಭಾಷ ವಿಭಾಗ ಸಾಹಿತ್ಯ ಸಂಘ, ಕನ್ನಡ ವಿದ್ಯಾರ್ಥಿ ಬಳಗದ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು ಮತ್ತಿರರಿದ್ದರು.