ಸಾರಾಂಶ
- ಸಾಣೆಹಳ್ಳಿಯಲ್ಲಿ ಉದ್ಘಾಟನೆಗೊಂಡ ಚಿಕ್ಕಮಗಳೂರು- ಚಿತ್ರದುರ್ಗ ಅಂತರ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಹೊಸದುರ್ಗನಗರ ಪ್ರದೇಶಗಳಲ್ಲಿರುವ ಕಾನ್ವೆಂಟ್ ಸಂಸ್ಕೃತಿ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು ಅದು ಹೀಗೆ ಮುಂದುವರೆದರೆ ಕನ್ನಡತನ ಅಳಿಸಿಹೊಗಿ, ಸಂಸ್ಕೃತಿ ಮಾಯವಾಗಲಿದೆ ಎಂದು ಸಾಣೇಹಳ್ಳಿಯ ಡಾ ಪಂಡಿತಾರಾಧ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಸಾಣೆಹಳ್ಳಿಯ ತರಾಸು ಮಹಾಮಂಟಪದ ಅಲ್ಲಮಪ್ರಭು ವೇದಿಕೆಯಲ್ಲಿ ಉದ್ಘಾಟನೆಗೊಂಡ ಚಿಕ್ಕಮಗಳೂರು- ಚಿತ್ರದುರ್ಗ ಅಂತರ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದರು. ಇಂತಹ ಸಾಹಿತ್ಯ ಸಮ್ಮೇಳನಗಳನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಮೂಲಕ ಗ್ರಾಮೀಣ ಜನರಲ್ಲಿ ಕಲೆ, ಸಾಹಿತ್ಯ ಅರಿವು ಮೂಡಿಸಿ ಮಾಯವಾಗುತ್ತಿರುವ ಕನ್ನಡ ಭಾಷೆ ಉಳಿಸುವ ಕೆಲಸ ಎಲ್ಲರೂ ಮಾಡ ಬೇಕಿದೆ. ಸಾಹಿತ್ಯ ಸಮ್ಮೇಳನದ ಮೂಲಕ ಸಾಹಿತ್ಯ ಚರ್ಚೆ ಜೊತೆಗೆ ಪ್ರಚಲಿತ ಸಮಸ್ಯೆಗಳ ಬೆಳಕು ಚೆಲ್ಲುವಂತೆ ಆಗಬೇಕು. ರಾಜಕಾರಿಣಿ, ಕೃಷಿಕ, ವ್ಯಾಪಾರಿ, ಕೈಗಾರಿ ಕೋದ್ಯಮಿಗಳಿಗಿಂತ ಹೆಚ್ಚಾಗಿ ಸಾಹಿತಿಗಳಿಗೆ ಸಾಮಾಜಿಕ ಕಳಕಳಿ ಮತ್ತು ಬದ್ಧತೆ ಇರಬೇಕಾದ್ದು ಅನಿವಾರ್ಯ. ಬದ್ಧತೆಯಿಲ್ಲದೆ ಹೊತ್ತು ಬಂದಂತೆ ಕೊಡೆ ಹಿಡಿಯುವ ಪ್ರವೃತ್ತಿ ಸಾಹಿತಿಗಳಿಗೂ ಬಂದರೆ ಆದರ್ಶ ಅರ್ಥಹೀನವಾಗುತ್ತವೆ ಎಂದರು.ಆಪಾದನೆಗಳು ಯಾರಿಗೂ ತಪ್ಪಿದ್ದಲ್ಲ ಆಪಾದನೆಗಳು ಸಕಾರಾತ್ಮಕವಾಗಿರಬೇಕೇ ಹೊರತು ನಕಾರಾತ್ಮಕವಾಗಿರಬಾರದು. ಸ್ವಾಮಿ, ರಾಜಕಾರಿಣಿ, ಸಾಹಿತಿಗಳು ಮಿತಿಗಳನ್ನು ದಾಟಿದಾಗಲೇ ಶ್ರೇಷ್ಠತೆ ಬರುವುದು, ಸಾಹಿತಿಗೆ ಗೌರವ ಬರುವುದು. ರಾಜಕಾರಿಣಿ ಜನ ಮನ್ನಣೆಗಳಿಸುವುದು. ಆದರೆ ಇಂದು ಸಾಹಿತಿಗಳು, ರಾಜಕಾರಣಿಗಳು ಸ್ವಾಮಿಗಳು ತಮ್ಮದೇ ಆದ ಗೋಡೆ ಕಟ್ಟಿಕೊಳ್ಳುತ್ತಿದ್ದಾರೆ ಎಂದರು.
ಕೃಷಿಕ ಈ ದೇಶದ ಬೆನ್ನಲುಬು ಕೃಷಿಕ ಸತ್ಯಾಗ್ರಹ ಮಾಡಿದರೆ ನಡೆಯುವುದಿಲ್ಲ ನಾವು ಬದುಕಿರುವುದು ಅನ್ನ ತಿಂದೆ ಹೊರತು ಮಣ್ಣು ತಿಂದಲ್ಲ. ಸರ್ಕಾರ ರೈತರಿಗೆ ಸವಲತ್ತುಗಳನ್ನು ಒದಗಿಸುವಲ್ಲಿ ವಿಫಲವಾಗುತ್ತಿವೆ. ಪ್ರಕೃತಿ ಚಲ್ಲಾಟ ಒಂದು ಕಡೆಯಾದರೆ ರೈತರಿಗೆ ಬೇಕಾದ ವಿದ್ಯುತ್, ನೀರಾವರಿ, ಬೆಂಬಲ ಬೆಲೆ ಸವಲತ್ತು ಸಿಗುತ್ತಿಲ್ಲ. ಇಷ್ಟೆಲ್ಲಾ ನೋವಿನ ನಡುವೆ ನಮ್ಮ ರೈತ ಎದೆ ಎತ್ತಿ ಬದುಕು ತ್ತಿದ್ದಾನೆ ಅಂತಹ ರೈತರಿಗೆ ಬೇಕಾದ ಸವಲತ್ತುಗಳನ್ನು ಸರ್ಕಾರ ನೀಡಬೇಕೆಂದು ಈ ಸಮಾವೇಶದ ಮೂಲಕ ಸರ್ಕಾರ ಒತ್ತಾಯಿಸುವುದಾಗಿ ತಿಳಿಸಿದರು.ನಮ್ಮ ನಾಡಿನ ಮೌಲ್ಯಯುತವಾದ ಜಾನಪದ ಕಲೆಗಳೂ ಅವಸಾನದ ಅಂಚಿನಲ್ಲಿವೆ.ಸರ್ಕಾರ ಉದಾಸೀನ ಮಾಡದೆ ಶಾಸ್ತ್ರೀಯ ಸಂಗೀತಗಳಿಗೆ ನೀಡಿ ದಂತೆ ಜಾನಪದ ಕಾಲಾವಿದರಿಗೂ ಹೆಚ್ಚಿನ ನೆರವು ನೀಡುವ ಕೆಲಸ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕು ಎಂದರು.
ಸಮ್ಮೇಳನ ಉದ್ಘಾಟಿಸಿದ ಕಸಾಪ ಮಾಜಿ ಅಧ್ಯಕ್ಷ ಗೊ.ರು ಚನ್ನಬಸಪ್ಪ ಮಾತನಾಡಿ ಇಂತಹ ಸಮ್ಮೇಳನಗಳು ಗ್ರಾಮೀಣ ಪ್ರದೇಶಕ್ಕೆ ವಿಸ್ತಾರಗೊಳ್ಳುವುದು ಅಗತ್ಯವಿದೆ. ಟೀಕೆ ಟಿಪ್ಪಣಿಗಳಿಗೆ ಗುರಿಯಾಗುವವರು ಸ್ವಾಮಿಜಿಗಳು ರಾಜಕಾರಣಿಗಳೇ ಹೆಚ್ಚು ಅದರಂತೆ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳು ಹದಗೆಟ್ಟಿರುವುದು ಕಟುಸತ್ಯ ಆದರೂ ವೈಚಾರಿಕತೆ ಧರ್ಮ ಗುರುಗಳು ಹಾಗೂ ಬದ್ಧತೆ ರಾಜಕೀಯ ನಾಯಕರು ನಮ್ಮ ಮಧ್ಯೆ ಇದ್ದಾರೆ. ಇಂತವರಿಂದ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ ಎಂದರು.ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ ಸುಧಾಕರ್ ಮಾತನಾಡಿ ಕನ್ನಡ ಉಳಿಸಿ, ಬೆಳೆಸುವ ಕೆಲಸವನ್ನು ಸರ್ಕಾರ ಪ್ರಮಾಣಿಕವಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಸುವಂತೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದರು.
ಸಮ್ಮೇಳನದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ನಾಡೋಜ ಡಾ. ಮಹೇಶ್ ಜೋಶಿ ಪುಷ್ಪನಮನ ಸಲ್ಲಿಸಿದರು. ಶಾಸಕ ಬಿಜಿ ಗೋವಿಂದಪ್ಪ ಸಮ್ಮೇಳನಾಧ್ಯಕ್ಷರ ಭಾಷಣದ ಪ್ರತಿ, ಮಾಜಿ ಸಂಸದ ಚಂದ್ರಪ್ಪ ಪುಸ್ತಕಗಳನ್ನು ಲೋಕಾರ್ಪಣೆ ಗೊಳಿಸಿದರು. ತರೀಕೆರೆ ಶಾಸಕ ಜಿಎಚ್ ಶ್ರೀನಿವಾಸ ಪುಸ್ತಕ ಮಳಿಗೆ ಉದ್ಘಾಟನೆ ಮಾಡಿದರು. ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಶ್ರೀನಿವಾಸ್ ಪ್ರಾಸ್ತಾವಿಕ ನುಡಿಗಳ ನಾಡಿದರು.ವೇದಿಕೆಯಲ್ಲಿ ಶಾಸಕ ರಘುಮೂರ್ತಿ ಸೇರಿದಂತೆ ಸಾಹಿತಿಗಳು ಹಾಗು ವಿವಿಧ ಬಾಗಗಳಿಂದ ಆಗಮಿಸಿದ್ದ ಕಸಾಪದ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನಾ ಪುಸ್ತಕಗಳನ್ನು ಅಲಂಕೃತ ರಥದಲ್ಲಿ ಇರಿಸಿ ಮೆರವಣಿಗೆ ನಡೆಸಲಾಯಿತು. ಅಲ್ಲದೆ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಗಣ್ಯರ ಪಾದಯಾತ್ರೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದಕಲಾ ಮೇಳ ದೊಂದಿಗೆ ನಡೆಸಲಾಯಿತು.--ಬಾಕ್ಸ್---ಸಮ್ಮೇಳನ ಎನ್ನುವುದು ಕೇವಲ ಸಂಕೇತ.ಅಲ್ಲಿ ನಡೆಯುವ ಚಟುವಟಿಕೆಗಳು ಕ್ರಿಯಾಶೀಲವಾಗಿರಬೇಕು. ಆಮಂತ್ರಣ ಪತ್ರಿಕೆ ನೋಡುವುದಕ್ಕೂ ಓದುವುದಕ್ಕೂ ಆಕರ್ಷಣೀಯವಾಗಿರಬೇಕು. ಮತದಾರರ ಚೀಟಿಯಂತಾಗಬಾರದು
- ಗೊ ರು ಚನ್ನಬಸಪ್ಪ,ಕಸಾಪ ಮಾಜಿ ಅಧ್ಯಕ್ಷರು ಬೆಂಗಳೂರು.ಪೋಟೋ, 2ಎಚ್‌ಎಸ್‌ಡಿ1: ಸಾಣೇಹಳ್ಳಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನು ಗೊ ರು ಚನ್ನಬಸಪ್ಪ ಉದ್ಘಾಟಿಸಿದರು.
ಪೋಟೋ, 2ಎಚ್‌ಎಸ್‌ಡಿ2: ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಪಾದಯಾತ್ರೆಯ ಮೂಲಕ ವೇದಿಕೆಗೆ ಕರೆತರಲಾಯಿತು.