ಸಾರಾಂಶ
ಪಟ್ಟಣದಲ್ಲಿ ಕಸಾಪ ತಾಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಕನ್ನಡ ತಾಯಿಯ ಸೇವೆಗಾಗಿ ಕನ್ನಡದ ಮನಸ್ಸುಗಳು ಕೈ ಜೋಡಿಸಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕರೆ ನೀಡಿದರು.
ಪಟ್ಟಣದ ಕನ್ನಡ ಭವನದಲ್ಲಿ ಕಸಾಪ ತಾಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕನ್ನಡದ ಕಾಯಕಗಳಿಗೆ ಒತ್ತು ನೀಡುವ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಪ್ರೋತ್ಸಾಹಿಸುವ ಕನ್ನಡದ ಮನಸ್ಸುಗಳು ಒಗ್ಗೂಡಿದಾಗ ಸಾಹಿತ್ಯ ಪರಿಷತ್ ಮತ್ತಷ್ಟು ವೃದ್ಧಿಗೊಳ್ಳಲು ಸಾಧ್ಯ ವಾಗಲಿದೆ. ಈ ನಿಟ್ಟಿನಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ತಾಯಿ ಭುವನೇಶ್ವರಿ ದೇವಿ ಪುತ್ಥಳಿ ನಿರ್ಮಾಣಕ್ಕಾಗಿ ಪುರಸಭೆ ಯಿಂದ ಸೂಕ್ತ ಜಾಗದ ವ್ಯವಸ್ಥೆ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ ಎಂದರು.ಮುಂದಿನ ದಿನಗಳಲ್ಲಿಯೂ ಕನ್ನಡದ ಕೆಲಸಕ್ಕೆ ಪುರಸಭೆ ಹಾಗೂ ನಮ್ಮ ಬೆಂಬಲ ನಿರಂತರವಾಗಿ ಇರುತ್ತದೆ. ನೂತನ ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವ ಮೂಲಕ ತಾಲೂಕು ಘಟಕವನ್ನು ಹೆಚ್ಚು ಸಕ್ರಿಯ ಗೊಳಿಸಬೇಕು ಎಂದು ಶುಭ ಹಾರೈಸಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದ ಅಭಿರುಚಿ ಜೊತೆಗೆ ಯುವ ಮನಸ್ಸುಗಳನ್ನು ಬೆಳೆಸಲು ಪರಿಷತ್ ಮುಂದಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಮಹಿಳಾ ಘಟಕಗಳು ರಚನೆಗೊಳಿಸಿ ಮಹಿಳೆಯರಿಗಾಗಿಯೇ ಜಿಲ್ಲೆಯಿಂದ ವೇದಿಕೆ ಕಲ್ಪಿಸಲಾಗಿದೆ. ಅಧಿಕಾರ ಯಾವುದು ಶಾಶ್ವತವಲ್ಲ. ಇರುವ ಅವಧಿಯಲ್ಲಿ ನಾವೆಷ್ಟು ಕನ್ನಡಕ್ಕಾಗಿ ಕಾರ್ಯನಿರ್ವಹಿಸಿದ್ದೇವೆ ಎಂಬುದು ಮುಖ್ಯವಾಗಲಿದೆ. ಜಿಲ್ಲಾ ಹಂತದಿಂದ ಗ್ರಾಮೀಣ ಮಟ್ಟದವರೆಗೆ ಪರಿಷತ್ ನ ಘಟಕಗಳು ರಚನೆಮಾಡಲಾಗಿದೆ. ಪಟ್ಟಣದಲ್ಲಿರುವ ಕನ್ನಡ ಭವನದ ನಿರ್ವಹಣೆಗಾಗಿಯೇ ಸಮಿತಿ ರಚಿಸಿ ಕೊಂಡು ಪ್ರತಿಯೊಂದನ್ನು ಪಾರದರ್ಶಕತೆಯಿಂದ ಕಾಪಾಡಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ತಾಲೂಕು ಕಸಾಪ ನೂತನ ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಅವರಿಗೆ ಕನ್ನಡದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಬಿ.ಶಿವಕುಮಾರ್, ಜಿಲ್ಲಾ ಕೋಶಾಧ್ಯಕ್ಷ ಬಿ.ಪ್ರಕಾಶ್, ಎಸ್.ಎಸ್. ವೆಂಕಟೇಶ್, ಎಂ.ರಾಜಪ್ಪ, ಸವಿತಾ ರಮೇಶ್, ಶೂದ್ರ ಶ್ರೀನಿವಾಸ್, ಜಿಗಣೇಹಳ್ಳಿ ನೀಲಕಂಠಪ್ಪ, ಎನ್. ಎಚ್.ನಂಜುಂಡಸ್ವಾಮಿ ಸೇರಿದಂತೆ ಹೋಬಳಿ ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಇದ್ದರು.10ಕೆಕೆಡಿಯು2.ಕಡೂರು ಕನ್ನಡ ಭವನದಲ್ಲಿ ಕಸಾಪ ತಾಲೂಕು ನೂತನ ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಅಧಿಕಾರ ಸ್ವೀಕರಿಸಿದರು. ಭಂಡಾರಿ ಶ್ರೀನಿವಾಸ್, ಸೂರಿ ಶ್ರೀನಿವಾಸ್, ಬಿ.ಶಿವಕುಮಾರ್, ಸವಿತಾರಮೇಶ್, ಪ್ರಕಾಶ್, ಸಿಂಗಟಗೆರೆ ಸಿದ್ದಪ್ಪ ಮತ್ತಿತರಿದ್ದರು.