ಕಿಕ್ಕೇರಿ:

ಸರ್ಕಾರಿ ಶಾಲೆ ಉಳಿದರೆ ಕನ್ನಡ ನಾಡು ನುಡಿ ಎಲ್ಲವೂ ಗಟ್ಟಿಯಾಗಿ ಉಳಿಯಲಿದೆ ಎಂಬುದನ್ನು ಕನ್ನಡಿಗರು ಅರಿಯಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಸಮೀಪದ ಮಾಕವಳ್ಳಿಯಲ್ಲಿ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಶಿಫಾರಸ್ಸಿನಲ್ಲಿ ಆರ್ಸೆಲರ್ ಮಿತ್ತಲ್ ಪ್ರೈ.ಲಿಮಿಟೆಡ್‌ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ಮಾಕವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಮಾತೃಭಾಷೆ ಶಿಕ್ಷಣದಿಂದ ಬಲುಬೇಗ ಓದಿದನ್ನು ಗ್ರಹಿಸಬಹುದಾಗಿದೆ. ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ, ಪರಿಸರ ಇರುವುದನ್ನು ಅರ್ಥ ಮಾಡಿಕೊಳ್ಳಬೇಕು. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದರು.

ಗ್ರಾಮದ ಶಾಲೆಯಲ್ಲಿ 38 ಲಕ್ಷ ರು.ಅನುದಾನದಲ್ಲಿ ಕೊಠಡಿ ನಿರ್ಮಾಣವಾಗಲಿದೆ. ಇದು ನಮ್ಮ ತಾಲೂಕಿನ ಮೇಲೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇರುವ ವಿಶೇಷ ಪ್ರೀತಿಯನ್ನು ತೋರಿಸುತ್ತದೆ. ಇದನ್ನು ಉಳಿಸಿಕೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಾಮಗಾರಿಯಲ್ಲಿ ಲೋಪವಿಲ್ಲದೆ ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರು ಮುಂದಾಗಿ ತ್ವರಿತವಾಗಿಕಾಮಗಾರಿ ಮುಗಿಸಿಕೊಡಬೇಕು ಎಂದು ಸೂಚಿಸಿದರು.


ಖಾಸಗಿ ಶಾಲೆ ವ್ಯಾಮೋಹ ಬಿಡಲು ಶಿಕ್ಷಕರು ಪೋಷಕರ ಮನೆಗಳಿಗೆ ತೆರಳಿ ಸರ್ಕಾರದಿಂದ ಸಿಗುವ ಸವಲತ್ತು ತಿಳಿಸಬೇಕು. ಪೋಷಕರ ಮನವೊಲಿಸಿ ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ದಾಖಲು ಮಾಡಲು ಕ್ರಮ ವಹಿಸಬೇಕು. ತಿಳಿಸಿ.ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆ ಉಳಿಸಬೇಕು. ರೈತಾಪಿ, ಬಡ ವರ್ಗದವರು ಇರುವ ಸ್ಥಳ ಹಳ್ಳಿಗಳು. ಇಲ್ಲಿ ಪ್ರತಿಭಾನ್ವಿತ ಮಕ್ಕಳು ಇದ್ದು, ಇತಹ ಪ್ರದೇಶದಲ್ಲಿ ಶಿಕ್ಷಕರು ತಮ್ಮಕೌಶಲತೆ ತೋರಿಸಬೇಕು ಎಂದರು.

ಬಿಇಒ ವೈ.ಕೆ.ತಿಮ್ಮೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶಿಕ್ಷಕರ ಪಾತ್ರ ದೊಡ್ಡದಿದೆ. ಮಕ್ಕಳಿಗೆ ಯಾವುದೇ ಸಮಸ್ಯೆಗಳು ಕಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಮುಖಂಡರಾದ ಮಹದೇವೇಗೌಡ, ಎಂ.ಸಿ.ರಾಮೇಗೌಡ, ಲಲಿತಮ್ಮ, ಸುಜಾತಾ, ಮಂಜೇಗೌಡ, ಮಂಜುನಾಥ್, ಸುಗಂದರಾಜು, ನಾಗೇಶ್, ಬಲರಾಂ, ಪಟೇಲ್‌ತಮ್ಮಯ್ಯಣ್ಣ, ಯೋಗೇಶ್, ಪಿಡಿಓ ಶೈಲಜಾ ಮತ್ತಿತರರುಇದ್ದರು.