ಕನ್ನಡ ನಾಮಫಲಕ: ಜಿಲ್ಲಾಡಳಿತಕ್ಕೆ 3 ತಿಂಗಳ ಗಡುವು

| Published : Jul 17 2024, 12:48 AM IST

ಸಾರಾಂಶ

ಜಿಲ್ಲಾದ್ಯಂತ ಮಳಿಗೆ, ಮುಂಗಟ್ಟುಗಳು, ಶಾಲೆ, ಕಾಲೇಜುಗಳು, ಸರಕಾರಿ ಕಚೇರಿಗಳಲ್ಲಿನ ಫಲಕಗಳಲ್ಲಿ ಶೇ.60ರಷ್ಟು ಭಾಗದಲ್ಲಿ ಕನ್ನಡ ರಾರಾಜಿಸಲೇಬೇಕು, ಇದಲ್ಲದೆ ಊರಿನ ಹೆಸರು ಅಲ್ಲಿರಬೇಕು. ಇದಕ್ಕೆ ಅಗತ್ಯ ಕ್ರಮ ಅಧಿಕಾರಿಗಳು ಜರುಗಿಸಬೇಕು ಎಂದು ಡಾ. ಬಿಳಿಮಲೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಾಮ ಫಲಕಗಳಲ್ಲಿ ಕನ್ನಡ ಭಾಷೆ ಬರೆಸುವ ಆಂದೋಲನ ಕಲಬುರಗಿ ಜಿಲ್ಲೆಯಲ್ಲಿ ನಿರೀಕ್ಷಿತ ಯಶ ಕಂಡಿಲ್ಲ ಎಂದು ಅಸಮಾಧಾನ ಹೊರಹಾಕಿರುವ ಕನ್ನಡ‌ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ‌ ಬಿಳಿಮಲೆ ಅವರು, ಸರ್ಕಾರದ ನಿಯಮದಂತೆ ಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆಗೆ ಸ್ಥಾನ ನೀಡಲೇಬೇಕು ಎಂಬ ನಿಯಮವಿದೆ. ಇದರಂತೆಯೇ ಫಲಕಗಳಲ್ಲಿ ಕನ್ನಡ ರಾರಾಜಿಸಲೇಬೇಕು, ಇದಕ್ಕಾಗಿ ಜಿಲ್ಲಾಡಳಿತಕ್ಕೆ ತಾವು ಖಡಕ್‌ ಸೂಚನೆ ನೀಡಿದ್ದಾಗಿ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ‌ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಮಳಿಗೆ, ಮುಂಗಟ್ಟುಗಳು, ಶಾಲೆ, ಕಾಲೇಜುಗಳು, ಸರಕಾರಿ ಕಚೇರಿಗಳಲ್ಲಿನ ಫಲಕಗಳಲ್ಲಿ ಶೇ.60ರಷ್ಟು ಭಾಗದಲ್ಲಿ ಕನ್ನಡ ರಾರಾಜಿಸಲೇಬೇಕು, ಇದಲ್ಲದೆ ಊರಿನ ಹೆಸರು ಅಲ್ಲಿರಬೇಕು. ಇದಕ್ಕೆ ಅಗತ್ಯ ಕ್ರಮ ಅಧಿಕಾರಿಗಳು ಜರುಗಿಸಬೇಕು ಎಂದು ಡಾ. ಬಿಳಿಮಲೆ ಹೇಳಿದ್ದಾರೆ.

ಕಲಬುರಗಿ‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಕಾಣುತ್ತಿಲ್ಲ. ಪಾಲಿಕೆಯವರು ಕ್ರಮ ವಹಿಸಬೇಕು, ಪರವಾನಿಗೆ ನವೀಕರಣಕ್ಕೆ ಬರುವಾಗ ಕನ್ನಡ ನಾಮಫಲಕ ಹಾಕಿಸಲು ತಿಳಿಸಬೇಕು ಎಂದರು.

ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಮಾತನಾಡಿ, ಮುಂದಿನ‌ ದಿನದಲ್ಲಿ ಅಭಿಯಾನದ ಮೂಲಕ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಉದ್ದೇಶಪೂರ್ವಕವಾಗಿ ಕನ್ನಡ ಬಳಕೆಗೆ ಹಿಂದೇಟು ಹಾಕಿದಲ್ಲಿ ಅಂತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಪ್ರಾಧಿಕಾರ ವರದಿ ಸಲ್ಲಿಸಲಿದೆ ಎಂದರು.

ಆಡಳಿತಗಾರರ ಮೇಲೆ ಜವಾಬ್ದಾರಿ: ಮಾತೃ ಭಾಷೆ ಕನ್ನಡ ಉಳಿಸಿ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಇಂದು ಆಡಳಿತ ನಡೆಸುತ್ತಿರುವ ಅಧಿಕಾರಿ-ಸಿಬ್ಬಂದಿ ಮೇಲಿದ್ದು, ಸರ್ಕಾರಿ ಆದೇಶವೆಂದು ಕನ್ನಡ ಬಳಸದೆ‌ ಅದು ನಮ್ಮ ಭಾಷೆ ಎಂದರು ಅಧ್ಯಕ್ಷ ಡಾ.ಪುರುರುಷೋತ್ತಮ‌ ಬಿಳಿಮಲೆ ಹೇಳಿದರು.

ಸರ್ಕಾರಿ ಸೌಲಭ್ಯ ಪಡೆಯಲು ಜನರು ಸರ್ಕಾರಿ ಕಚೇರಿಗೆ ಬರುತ್ತಾರೆ. ಅವರೊಂದಿಗೆ ಕನ್ನಡದಲ್ಲಿಯೆ ಮಾತನಾಡಿ ವ್ಯವಹರಿಸಬೇಕು. ಕಚೇರಿಯಲ್ಲಿ ಶೇ.100ರಷ್ಟು ಕನ್ನಡ ಅನುಷ್ಠಾನಕ್ಕೆ ತರಬೇಕು. ಕಚೇರಿ ನಾಮಫಲಕ ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು. ಪ್ರತಿ ಪತ್ರ ವ್ಯವಹಾರ ಕನ್ನಡದಲ್ಲಿರಬೇಕು. ಆಡಳಿತದಲ್ಲಿ ಕನ್ನಡ ಬಳಕೆಗೆ ಏನೇ ಸಮಸ್ಯೆಗಳಿದ್ದರು ಹೇಳಿ, ಅದನ್ನು ಸರ್ಕಾರದ‌ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸೋಣ ಎಂದರು.

ಮದರಸಾದಲ್ಲಿ ಕನ್ನಡ ಬೋಧನೆಗೆ ಯೋಜನೆ ಸಿದ್ಧ: ಮದರಸಾದಲ್ಲಿಯೂ ಪ್ರತಿ ವಾರ 2 ಗಂಟೆ ಕನ್ನಡ ಬೋಧನೆ ಮಾಡಲು‌ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಪಠ್ಯ ಪ್ರಾಧಿಕಾರ ಸಿದ್ಧಪಡಿಸಿದೆ. ಅಲ್ಪಸಂಖ್ಯಾತ ಶಿಕ್ಷಣ ತಜ್ಞರನ್ನು ಈ ವಿಷಯವಾಗಿ ಚರ್ಚಿಸಿರುವೆ. ಸರ್ಕಾರದ ಅನುಮತಿ ಪಡೆದು ಶೀಘ್ರ ಕನ್ನಡ ಬೋಧನೆ ಆರಂಭಿಸಲಾಗುವುದು. ಇದಲ್ಲದೆ ಕೈಗಾರಿಕೆ ಕೇಂದ್ರಗಳಲ್ಲಿ 20 ಜನರು ಕನ್ನಡ ಕಲಿಯಲು ಆಸಕ್ತಿ ತೋರಿದಲ್ಲಿ, ಪ್ರಾಧಿಕಾರವೇ ವಾರದಲ್ಲಿ‌ 3 ದಿನಗಳಂತೆ ಮೂರು ತಿಂಗಳ ಕಾಲ 36 ಗಂಟೆ ಪಾಠ ಮಾಡಲು ಶಿಕ್ಷಕರನ್ನು ಸಹ ಕಳುಹಿಸಲಾಗುವುದು. ಸಿಎಂ ಸಿದ್ದರಾಮಯ್ಯನವರೊಂದಿಗೆ ಮಾತನಾಡಿ ಮುಂದಡಿ ಇಡಲಾಗುತ್ತದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಮರಣೋತ್ತರ ವರದಿಯಲ್ಲಿ ಕನ್ನಡ ಬಳಕೆ ಏಕಿಲ್ಲ?: ಕಳೆದ ಬಾರಿ ಜಿಲ್ಲೆಯಲ್ಲಿ ಡಾ. ಟಿ.ಎಸ್. ನಾಗಭರಣ ಅವರ ಅಧ್ಯಕ್ಷತೆಯಲ್ಲಿ 2021ರ ಜ.19ರಂದು ನಡೆದ ಸಭೆಯ ನಡಾವಳಿಯ ಅನುಪಾಲನಾ ವರದಿ ಪರಿಶೀಲಿಸಿದ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಮಾತನಾಡಿ, ವೈದ್ಯರು ಮರಣೋತ್ತರವಾಗಿ ನೀಡುವ ಪ್ರಮಾಣ ಪತ್ರ ಆಂಗ್ಲದಲ್ಲಿಯೇ ಇರುತ್ತೆ. ಕನ್ನಡದಲ್ಲಿ ಏಕೆ ಬರೆಯಲ್ಲ ಎಂದು ಜಿಮ್ಸ್ ಆಸ್ಪತ್ರೆಯ ಅಧಿಕಾರಿಗಳನ್ನು ಪ್ರಶ್ನಿಸಿದಲ್ಲದೆ ಹೆತ್ತ ತಂದೆ-ತಾಯಿ ಹೆಂಗೆ ನಿಧನರಾದರು ಎಂದು ತಿಳಿಯುವ ಹಕ್ಕು‌ ಮಕ್ಕಳಿಗಿಲ್ವಾ ಎಂದಲ್ಲದೆ ಕನ್ನಡದಲ್ಲೆ ಪ್ರಮಾಣ ಪತ್ರ ನೀಡಿ‌ ಎಂದರು. ಈ ಸಂಬಂಧ ಪ್ರಾಧಿಕಾರವು ಬಿ.ಶಿವಪ್ಪ ಅವರ ವೈದ್ಯಕೀಯ ಶಬ್ದಕೋಶ 5,000 ಪ್ರತಿ ಮುದ್ರಿಸಿ ಹಂಚಿದೆ. ಅದು ತೆಗೆಯಿರಿ ಎಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಪ್ರತಿ ಮಾಹೆ 5ನೇ ತಾರೀಖಿನೊಳಗೆ ಎಲ್ಲಾ ಇಲಾಖೆಯವರು ಕನ್ನಡ ಬಳಕೆ ಮಾಸಿಕ ವರದಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಇಂದು ಮತ್ತು ಹಿಂದಿನ ಸಭೆಯ ನಡಾವಳಿಗೆ ಅನುಪಾಲನಾ ವರದಿಯನ್ನು ಕಾಲಮಿತಿಯಲ್ಲಿಯೇ ಪ್ರಾಧಿಕಾರಕ್ಕೆ ಸಲ್ಲಿಸಬೇಕೆಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದಲ್ಲದೆ ಇನ್ನು ಮುಂದೆ ಪ್ರತಿ ಮಾಹೆ ಕನ್ನಡ ಪ್ರಗತಿ ಪರಿಶೀಲನೆ ಮಾಡಲಾಗುವುದು. ಇನ್ನು ಜಿಲ್ಲೆಯ ಕೈಗಾರಿಕೆಯಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆಯೇ ಎಂಬುದರ ಬಗ್ಗೆ ಸರ್ವೆ ಮಾಡಿ ಪ್ರಾಧಿಕಾರಕ್ಕೆ ವರದಿ ನೀಡಬೇಕೆಂದರು.

ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಸಹಾಯಕ ಅಯುಕ್ತೆ ರೂಪಿಂದರ್ ಸಿಂಗ್ ಕೌರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ್, ಕಲಬುರಗಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ರೆಹಮಾನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಸ್ವಾಗತಿಸಿದರು.