ಸಾರ್ವಜನಿಕ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ: ಪ್ರಕಾಶ್

| Published : Dec 02 2024, 01:19 AM IST

ಸಾರ್ವಜನಿಕ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ: ಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂಬ ಹೆಗ್ಗಳಿಕೆ ಮಂಡ್ಯಕ್ಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಅಂಗಡಿ ವ್ಯಾಪಾರ ಸ್ಥಳಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಹಾಕಬೇಕು. ನಾಮಫಲಕಗಳು ಶೇ.೬೦ರಷ್ಟು ಕನ್ನಡ ಭಾಷೆಯನ್ನು ಒಳಗೊಂಡಿರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರ ಆದೇಶದಂತೆ ಸಾರ್ವಜನಿಕ ಅಂಗಡಿಗಳಲ್ಲಿ ಕನ್ನಡ ನಾಮಪಲಕವನ್ನು ಕಡ್ಡಾಯವಾಗಿ ಹಾಕಬೇಕೆಂದು ನಗರಸಭೆ ಅಧ್ಯಕ್ಷ ಪ್ರಕಾಶ್ ಹೇಳಿದರು.

ನಗರದ ೨೫ನೇ ವಾರ್ಡ್‌ನ ಲೇಬರ್ ಕಾಲೋನಿಯಲ್ಲಿ ಕಸ್ತೂರಿ ಕನ್ನಡ ವೇದಿಕೆಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂಬ ಹೆಗ್ಗಳಿಕೆ ಮಂಡ್ಯಕ್ಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಅಂಗಡಿ ವ್ಯಾಪಾರ ಸ್ಥಳಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಹಾಕಬೇಕು. ನಾಮಫಲಕಗಳು ಶೇ.೬೦ರಷ್ಟು ಕನ್ನಡ ಭಾಷೆಯನ್ನು ಒಳಗೊಂಡಿರಬೇಕು ಎಂದು ಮನವಿ ಮಾಡಿದರು.

ಕನ್ನಡ ತಾಯಿಭಾಷೆಯಾಗಿದ್ದು, ಎಂದಿಗೂ ಮಾತೃಭಾಷೆಯನ್ನು ಮರೆಯಬಾರದು. ಪ್ರತಿಯೊಬ್ಬರೂ ಕನ್ನಡವನ್ನು ಹೃದಯದ ಭಾಷೆಯನ್ನಾಗಿಸಿಕೊಳ್ಳಬೇಕು. ಕನ್ನಡ ಬಾರದವರಿಗೆ ಕನ್ನಡವನ್ನು ಕಲಿಸುವುದು, ಮಕ್ಕಳಿಗೆ ಭಾಷೆಯ ಮಹತ್ವವನ್ನು ತಿಳಿಸಿಕೊಟ್ಟು ಪ್ರೀತಿ-ಅಭಿಮಾನ ಮೂಡುವಂತೆ ಮಾಡಬೇಕು ಎಂದರು.

ನನ್ನ ಅಧ್ಯಕ್ಷ ಅವಧಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಎಲ್ಲರೂ ಈ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ನಗರದ ಬಸ್ ನಿಲ್ದಾಣದಿಂದ ಸಮ್ಮೇಳನದ ಜಾಗಕ್ಕೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು, ಸಮ್ಮೇಳನದಲ್ಲಿ ಭಾಗವಹಿಸುವ ಜನರಿಗೆ ಭೋಜನದ ವ್ಯವಸ್ಥೆಯನ್ನೂ ಕೂಡ ಆಯೋಜಿಸಿದೆ ಬಂದಂತಹ ಎಲ್ಲ ಜನರಿಗೂ ಮೂಲಭೂತ ಸೌಕರ್ಯ ಕೊರತೆ ಆಗದಂತೆ ಸಮಿತಿ ವತಿಯಿಂದ ನಿರ್ವಹಣೆ ಮಾಡುತ್ತಿರುವುದಾಗಿ ತಿಳಿಸಿದರು.

೬೯ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ನಾಗೇಶ್ ಪತ್ರಕರ್ತ ಗುರುಬಸವಯ್ಯ ನಿವೃತ್ತ ಮುಖ್ಯ ಶಿಕ್ಷಕ ಬಸವರಾಜು, ಮುಖಂಡರಾದ ಶಿವಲಿಂಗಯ್ಯ, ರಾಮಚಂದ್ರು, ರುದ್ರಪ್ಪ, ಗೊರವಾಲೆ ಚಂದ್ರಶೇಖರ್, ಸೊಸೈಟಿ ಚಂದ್ರು, ಈರಯ್ಯ ಇತರರಿದ್ದರು.