ಚಿಕ್ಕಮಗಳೂರುಕನ್ನಡದ ರಥವನ್ನು ಮುನ್ನಡೆಸಲು ಹೊಸ ಕೈಗಳು ಹಾಗೂ ಕನ್ನಡ ಸಾಹಿತ್ಯಕ್ಕೆ ಹೊಸ ರಕ್ತದ ಅವಶ್ಯಕತೆಯಿದೆ ಎಂದು ಸಾಹಿತಿ ಎಂ.ಆರ್. ದತ್ತಾತ್ರಿ ಹೇಳಿದರು.

ನಗರದ ಬಸವತತ್ವ ಪೀಠದಲ್ಲಿ 6ನೇ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕನ್ನಡದ ರಥವನ್ನು ಮುನ್ನಡೆಸಲು ಹೊಸ ಕೈಗಳು ಹಾಗೂ ಕನ್ನಡ ಸಾಹಿತ್ಯಕ್ಕೆ ಹೊಸ ರಕ್ತದ ಅವಶ್ಯಕತೆಯಿದೆ ಎಂದು ಸಾಹಿತಿ ಎಂ.ಆರ್. ದತ್ತಾತ್ರಿ ಹೇಳಿದರು.ನಗರದ ಬಸವತತ್ವ ಪೀಠದಲ್ಲಿ ಭಾನುವಾರ ಆಯೋಜಿಸಿದ್ದ 6ನೇ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಯಾವುದೇ ಮಾರ್ಗದಲ್ಲಾದರೂ ಹೊಸ ತಲೆಮಾರನ್ನು ಕನ್ನಡದತ್ತ ಕರೆತರುವ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದರು.ಸಾಹಿತ್ಯ ಸಮ್ಮೇಳನಗಳಲ್ಲಿ 20ರಿಂದ 25 ವರ್ಷದೊಳಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸು ವಂತಾಗಬೇಕು. ಆಗ ಮಾತ್ರ ಇಂತಹ ಸಮ್ಮೇಳನಗಳ ಆಚರಣೆಗೆ ನಿಜವಾದ ಅರ್ಥ ಹಾಗೂ ಸಾರ್ಥಕತೆ ದೊರೆಯಲಿದೆ ಎಂದು ಹೇಳಿದರು.

ಹೊಸ ತಲೆಮಾರನ್ನು ಮಾತೃಭಾಷೆಯಿಂದ ದೂರ ಮಾಡಲಾಗುತ್ತಿದೆ. ಇದರ ಪರಿಣಾಮ ಯುವಕರು ಮಾತೃ ಭಾಷೆ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಹಿತ್ಯ ಬರೆಯುವುದಿರಲಿ, ಸಾಹಿತ್ಯ ಓದುವುದರಿಂದಲೂ ಯುವಕರು ದೂರವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಶ್ರೇಷ್ಠ ಸಾಹಿತ್ಯ ಕೃತಿಗಳು ಬರುತ್ತಿರುವುದು ಸ್ಥಳೀಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಮರಾಠಿ ಭಾಷೆಗಳಲ್ಲಿ ಮಾತ್ರ. ಇಂಗ್ಲಿಷ್‌ನಲ್ಲಿ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲ. ಇಂಗ್ಲಿಷ್ ನಮ್ಮ ಸಾಮಾಜಿಕ ಭಾಷೆಯಲ್ಲ; ಅದು ಮುಖ್ಯವಾಗಿ ವ್ಯವಹಾರಿಕ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡದ ಉಳಿವಿಗೆ ಪಕ್ಷಾತೀತ ಹೋರಾಟ ಅಗತ್ಯ:

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ ಕನ್ನಡ ಈ ನೆಲದ ಭಾಷೆಯಾಗಿದೆ. ಅದರ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮೂರಿನ ಹೋಟೆಲ್‌ಗಳಲ್ಲಿಯೂ ಕನ್ನಡದಲ್ಲಿ ಆರ್ಡರ್ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗುತ್ತಿದೆ. ಪಕ್ಷಭೇದ ಮರೆತು ನಾಡು-ನುಡಿ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಮಾತೃಭಾಷೆ ಬಳಸದೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಎಷ್ಟೇ ಶ್ರೀಮಂತವಾಗಿದ್ದರೂ, ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ ಎಂದರು.

ಕನ್ನಡ ಭಾಷೆ ಮಾತ್ರ ಅಪಾಯದಲ್ಲಿದೆ ಎಂದು ಭಾವಿಸಬಾರದು. ದೇಶದ ಅನೇಕ ಸ್ಥಳೀಯ ಭಾಷೆಗಳೂ ಇದೇ ರೀತಿಯ ಅಪಾಯವನ್ನು ಎದುರಿಸುತ್ತಿವೆ. ಮಾತೃಭಾಷೆಯ ಬಳಕೆಯನ್ನು ಹೆಚ್ಚಿಸುವ ಮೂಲಕ ಭಾಷೆಗಳ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ತಾಲೂಕು ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಸಾಹಿತಿ ಬೆಳವಾಡಿ ಮಂಜುನಾಥ್‌ ಸೇರಿದಂತೆ ಮೊದಲಾದವರಿದ್ದರು....ಬಾಕ್ಸ್...

ಪ್ರಜ್ಞಾಪೂರ್ವಕವಾಗಿ ಕನ್ನಡ ಬಳಸುವ ಬದ್ಧತೆ ತೋರಬೇಕು: ಬಸವ ಮರುಳ ಸಿದ್ಧ ಶ್ರೀಪ್ರಜ್ಞಾಪೂರ್ವಕವಾಗಿ ಭಾಷೆ ಬಳಸದೆ ಹೋದರೆ ಯಾವುದೇ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳ ಸಿದ್ದ ಸ್ವಾಮೀಜಿ ಎಚ್ಚರಿಸಿದರು.ಸಮ್ಮೇಳನದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮೊದಲು ಅಡುಗೆ ಮನೆಯಿಂದಲೇ ಕನ್ನಡ ಭಾಷೆ ಉಳಿಸಿಕೊಳ್ಳುವ ಕೆಲಸ ಆರಂಭವಾಗಬೇಕು. ಆಗ ಮಾತ್ರ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಉಳಿಯ ಲಿದೆ. ನಂತರ ಉನ್ನತ ಶಿಕ್ಷಣದಲ್ಲೂ ಕನ್ನಡ ಉಳಿಯಲಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಕನ್ನಡ ಬಳಕೆಗೆ ಅವಕಾಶ ದೊರೆಯಲಿದೆ. ಕನ್ನಡದಿಂದಲೇ ಅನ್ನ ಹುಟ್ಟುವಂತಾಗಬೇಕು ಎಂದರು.ಮನೆಗಳಲ್ಲಿ ಕನ್ನಡದ ಪದಗಳಿದ್ದರೂ ಅವುಗಳನ್ನು ಬಿಟ್ಟು ಇಂಗ್ಲಿಷ್ ಪದಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅರಿವಿಗೆ ಬಾರದಂತೆ ನಿಧಾನವಾಗಿ ವಿಷ ನೀಡುವ ಮೂಲಕ ಭಾಷೆಯನ್ನು ಕೊಲೆ ಮಾಡಲಾಗುತ್ತಿದೆ. ಕನ್ನಡಿಗರಲ್ಲಿ ಭಾಷೆಯ ಬಗ್ಗೆ ಮೂಡಿರುವ ನಿಧಾನಗತಿಯ ನಿರಭಿಮಾನವೇ ಇದಕ್ಕೆ ಪ್ರಮುಖ ಕಾರಣ ವಾಗಿದೆ ಎಂದು ಹೇಳಿದರು.

ಕನ್ನಡಿಗರು ಈ ನಿರಭಿಮಾನ ತೊರೆದು ಸ್ವಾಭಿಮಾನದಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕನ್ನಡ ಭಾಷೆ ಯನ್ನು ಬಳಸುವ ಬದ್ಧತೆ ತೋರಬೇಕು. ಕನ್ನಡ ಉಳಿಸಿ ಬೆಳೆಸುವಲ್ಲಿ ಗ್ರಾಮೀಣ ಜನರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ತಿಳಿಸಿದರು......ಕೋಟ್....

ಇಂಗ್ಲೀಷ್ ಗಿಂತ ಹಿಂದಿ ಹೇರಿಕೆ ಕನ್ನಡಕ್ಕೆ ಅತ್ಯಂತ ಅಪಾಯಕಾರಿ. ಕನ್ನಡ ಪ್ರಾಥಮಿಕ ಶಾಲಾ ಹಂತದಲ್ಲಿ ಮಹತ್ವ ಕಳೆದುಕೊಳ್ಳುತ್ತಿದೆ‌. ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಿಸಲು ಕಾನೂನಿನ ತೊಡಕಿದೆ. ಸಂಧಾನಕ್ಕೆ ತಿದ್ದುಪಡಿ ತಂದು ಈ ಸಮಸ್ಯೆ ಬಗೆ ಹರಿಸಲು ಸಾಧ್ಯವಿದೆ. ಆದರೆ, ಅದಕ್ಕೆ ಆಳುವವರ ಇಚ್ಛಾಶಕ್ತಿ ಬೇಕಿದೆ.- ಬಿ.ತಿಪ್ಪೇರುದ್ರಪ್ಪ, ಸಮ್ಮೇಳನಾಧ್ಯಕ್ಷ, ಚಿಕ್ಕಮಗಳೂರು 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ.