ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಭಾರತೀಯ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಕನ್ನಡ ಪತ್ರಿಕೋದ್ಯಮ ಅತ್ಯಂತ ಕ್ರಿಯಾಶೀಲವಾಗಿದ್ದು, ಕೆಲವರು ಮಾಡುವ ಲೋಪದೋಷಗಳಿಂದಾಗಿ ಉದ್ಯಮಕ್ಕೆ ಬಂದಿರುವ ಕಳಂಕವನ್ನು ತೊಡೆದು ಹಾಕುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡಬೇಕಿದೆ, ಅಂತಹ ಕಳಂಕಿತ ಪತ್ರಕರ್ತರನ್ನ ದೂರು ಇಡುವ ಜತೆಗೆ ಅವರನ್ನು ಮಾಧ್ಯಮ ಪ್ರತಿನಿಧಿ ಎಂದು ಗುರುತಿಸದೇ ಇದ್ದಲ್ಲಿ, ಪ್ರಾಮಾಣಿಕ ಪತ್ರಕರ್ತರು ನಮ್ಮೊಂದಿಗೆ ಕೈಜೋಡಿಸಲು ಮುಂದೆ ಬರುತ್ತಾರೆ ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟರು.ಪಟ್ಟಣದ ಸೋಷಿಯಲ್ ಕ್ಲಬ್ ಆವರಣದಲ್ಲಿ ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿರ್ಮಿಸಿದ್ದ ಹಿರಿಯ ಪತ್ರಕರ್ತರಾದ ದಿ.ಎನ್.ಎಸ್.ರಾಮ್ ಪ್ರಸಾದ್ ವೇದಿಕೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಿಕಾ ದಿನಾಚರಣೆಯ ಮಹತ್ವವನ್ನು ಅರಿಯಬೇಕಾದ್ದು ನಮ್ಮ ಕರ್ತವ್ಯ. ಕಳೆದ ಒಂದು ವರ್ಷದಲ್ಲಿ ನಾವು ಮಾಡಿದ ತಪ್ಪು, ಒಪ್ಪುಗಳನ್ನು ನಾವು ಅವಲೋಕನ ಮಾಡಿಕೊಳ್ಳಬೇಕು ಮತ್ತು ತಪ್ಪುಗಳನ್ನು ತಿದ್ದಿಕೊಳ್ಳುವ ರೀತಿಯೂ ಅಗತ್ಯವಾಗಿದೆ. ಎಲ್ಲಾ ಪತ್ರಕರ್ತರು ಎಷ್ಟೋ ತಪ್ಪುಗಳನ್ನು ಪತ್ರಿಕೋದ್ಯಮದಲ್ಲಿ ಮಾಡಿರುತ್ತೇವೆ. ಆದ್ದರಿಂದ ಅಂತಹ ತಪ್ಪುಗಳು ಎಲ್ಲಿಯಾಗಿದೆ ಎಂಬುದನ್ನು ಗುರುತಿಸಿ, ಸರಿಪಡಿಸಿಕೊಳ್ಳುವ ದಿನ ಪತ್ರಿಕಾ ದಿನಾಚರಣೆ ಆಗಬೇಕು ಎಂದು ಹೇಳಿದರು.
ಪತ್ರಿಕೋದ್ಯಮ ಎತ್ತ ಸಾಗಿದೆ ಮತ್ತು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ತಿಳಿದು, ಸರಿಪಡಿಸಿಕೊಂಡು ಸಾಗಬೇಕಿದೆ. ಆಸೆ, ಆಮಿಷಕ್ಕೆ ಬಲಿಯಾಗಿ, ಓಲೈಕೆ ರಾಜಕಾರಣ, ಓಲೈಕೆ ಪತ್ರಿಕೋದ್ಯಮ ಹಾಗೂ ಓಲೈಕೆಯ ಸಂಸ್ಥೆಗಳನ್ನು ದೂರವಿಡಿ, ಅವರ ಕಾರ್ಯಕ್ಕೆ ಛೀಮಾರಿ ಹಾಕಿ ಹಾಗೂ ಉತ್ತಮವಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಗುರುತಿಸಿ, ಕ್ರಿಯಾಶೀಲರಾಗಿ, ಪ್ರಾಮಾಣಿಕವಾಗಿ, ಆತ್ಮಾಭಿಮಾನಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುವ ಪತ್ರಕರ್ತರನ್ನು ಉತ್ತೇಜಿಸಿದಾಗ ಕಳಂಕ ರಹಿತವಾಗಿ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಲು ಸಾಧ್ಯವೆಂದು ತಿಳಿಸಿ, ಹಲವಾರು ವಿಷಯಗಳ ಕುರಿತಂತೆ ಸುದೀರ್ಘವಾಗಿ ಮಾತನಾಡಿ, ಹಲವಾರು ಸಲಹೆಗಳನ್ನು ನೀಡಿದರು.ಹೊಳೆನರಸೀಪುರ ತಾಲೂಕು ಪತ್ರಕರ್ತರ ಸಂಘದ ಶಿಸ್ತು, ಸಮಯಪ್ರಜ್ಞೆ, ಒಗ್ಗಟ್ಟು, ಕಳಂಕ ರಹಿತವಾದ ಪತ್ರಕರ್ತರ ಸೇವೆಯನ್ನು ಅಭಿನಂಧಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನ್ ಗೌಡ, ಜಿಲ್ಲಾ ಕಾ.ಪ.ಸಂ.ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ಹಾಸನವಾಣಿ ಸಂಪಾದಕ ಲೀಲಾವತಿ, ಹಾಸನ ಮಾಧ್ಯಮ ಸಂಪಾದಕ ಶೇಷಾದ್ರಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ. ಕಾ.ಪ.ಸಂ. ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್ ಇತರರು ಮಾತನಾಡಿದರು.ಐಎಫ್‌ಡಬ್ಲ್ಯೂಜೆ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಹಾಗೂ ಗಣ್ಯರು ಸಮಾಜ ಸೇವಕರಾದ ಎನ್.ಆರ್.ಅನಂತಕುಮಾರ್ ಅವರ ಸೇವೆಯನ್ನು ಗುರುತಿಸಿ, ಅಭಿನಂಧಿಸಿ, ಗೌರವಿಸಿದರು.
ರಾಷ್ಟಿಯ ಮಂಡಳಿ ಸದಸ್ಯರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು, ಹಾಸನ ಜಿಲ್ಲಾ ಕ.ಪ.ಸಂ. ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಹಿರಿಯ ಸಂಪಾದಕರು, ನಿಕಟ ಪೂರ್ವ ಅಧ್ಯಕ್ಷರು, ವಿಶೇಷ ಅತಿಥಿಗಳು, ಹಾಸನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.ತಾಪಂ ಇಒ, ಟಿಎಚ್‌ಒ, ಪುರಸಭೆ ಮುಖ್ಯಾಥಿಕಾರಿ, ವೈದ್ಯರು, ಹಿರಿಯ ಅಧಿಕಾರಿಗಳು, ತಾಲೂಕು ಪತ್ರಕರ್ತರ ಸಂಘದ ಸದಸ್ಯರು ಹಾಗೂ ಕುಟುಂಬ ಸದಸ್ಯರು ಇದ್ದರು.ಫೋಟೋ: ಹೊಳೆನರಸೀಪುರದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎನ್.ಆರ್.ಅನಂತ ಕುಮಾರ್ ಅವರನ್ನು ಗೌರವಿಸಲಾಯಿತು.