ರಾಜ್ಯಾದ್ಯಂತ ಕನ್ನಡ ನಾಮಫಲಕಕ್ಕೆ ಸರ್ಕಾರದಿಂದ ಫೆ.28 ಗಡುವು: ಸಿಎಂ

| Published : Dec 29 2023, 01:32 AM IST

ರಾಜ್ಯಾದ್ಯಂತ ಕನ್ನಡ ನಾಮಫಲಕಕ್ಕೆ ಸರ್ಕಾರದಿಂದ ಫೆ.28 ಗಡುವು: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿ ಎಲ್ಲ ಅಂಗಡಿ ಮುಗ್ಗಟ್ಟುಗಳಲ್ಲಿ ಫೆ.28ರ ಒಳಗೆ ಕಡ್ಡಾಯವಾಗಿ ಕನ್ನಡ ಹಾಕಬೇಕು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಾದ್ಯಂತ ಅಂಗಡಿ-ಮುಂಗಟ್ಟು, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಹಾಗೂ ಜಾಹೀರಾತು, ಸೂಚನಾ ಫಲಕಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಅಲ್ಲದೆ, ಸುಗ್ರೀವಾಜ್ಞೆ ಮೂಲಕ ಜಾರಿಯಾಗಲಿರುವ ತಿದ್ದುಪಡಿ ಕಾನೂನು ಅನ್ವಯ 2024ರ ಫೆಬ್ರವರಿ 28ರ ಒಳಗಾಗಿ ರಾಜ್ಯದಲ್ಲಿನ ಎಲ್ಲಾ ‘ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ ಮತ್ತು ಹೋಟೆಲ್‌’ ಮುಂತಾದವುಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು. ಉಳಿದ ಶೇ.40ರಷ್ಟು ಮಾತ್ರ ಇತರೆ ಭಾಷೆ ಇರಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಕನ್ನಡ ನಾಮಫಲಕಗಳ ಕುರಿತು ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಜತೆ ಗೃಹ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2018ರ ಮಾರ್ಚ್ ತಿಂಗಳಲ್ಲಿ ನಮ್ಮ ಸರ್ಕಾರವು ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಹಾಗೂ ಶೇ.40 ರಷ್ಟು ಇತರೆ ಭಾಷೆ ಇರಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಬಳಿಕ 2023ರ ಮಾರ್ಚ್‌ ತಿಂಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ 2022ರ ಸೆಕ್ಷನ್‌ 17 (6) ರ ಪ್ರಕಾರ ನಾಮಫಲಕದ ಅರ್ಧಭಾಗವು (ಶೇ.50) ಕನ್ನಡದಲ್ಲಿ ಇರತಕ್ಕದ್ದು ಎಂದು ತಿಳಿಸಿದೆ. ಇದೀಗ ನಮ್ಮ ಸರ್ಕಾರವು 2018ರ ಸುತ್ತೋಲೆಯಂತೆಯೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ 2022ರ ಸೆಕ್ಷನ್‌-17 (6)ಕ್ಕೆ ತಿದ್ದುಪಡಿ ತಂದಿದ್ದು, 2024ರ ಫೆಬ್ರವರಿ 28 ರೊಳಗೆ ಅನುಷ್ಠಾನಗೊಳಿಸಲು ವಾಣಿಜ್ಯ ಮಳಿಗೆಗಳಿಗೆ ಗಡುವು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.ಜಾಹೀರಾತು, ಸೂಚನಾ ಫಲಕದಲ್ಲೂ ಕನ್ನಡಕ್ಕೆ ಆದ್ಯತೆ:

ಇನ್ನು ಈ ಕಾಯ್ದೆಯ ನಿಯಮ 17(8) ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲ್ಲಿನ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರಬೇಕು. ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ಸೂಚಿಸಿದಂತೆ ಇರಬೇಕು ಎಂಬ ನಿಯಮ ಇದೆ. ಈ ಅಧಿನಿಯಮಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ಸಿಕ್ಕಿದ್ದು ರಾಜ್ಯಪಾಲರೂ ಅಂಗೀಕಾರ ಸೂಚಿಸಿದ್ದಾರೆ. ಆದರೆ, ಈ ಬಗ್ಗೆ ನಿಯಮಗಳನ್ನು ರೂಪಿಸುವ ಕೆಲಸ ಆಗಿಲ್ಲ. ಇದೀಗ ಸುಗ್ರೀವಾಜ್ಞೆ ಹೊರಡಿಸಿ ತಕ್ಷಣ ನಿಯಮಗಳನ್ನು ರೂಪಿಸಿ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ರಾಜ್ಯಾದ್ಯಂತ ಅನ್ವಯ:ಈ ನಾಮಫಲಕ, ಜಾಹೀರಾತು ಹಾಗೂ ಸೂಚನಾಫಲಕದ ನಿಯಮ ರಾಜ್ಯಾದ್ಯಂತ ಅನ್ವಯ ಆಗಲಿದೆ. ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿಗಾ ವಹಿಸಲಿವೆ. ಫೆ.28ರ ಬಳಿಕವೂ ಕನ್ನಡ ಬಳಕೆ ನಿಯಮಾನುಸಾರ ಆಗದಿದ್ದರೆ ಅಂತಹವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಸುಗ್ರೀವಾಜ್ಞೆ ಯಾಕೆ?ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತು ರಾಜ್ಯಪಾಲರ ಅಂಗೀಕಾರ ಸಿಕ್ಕಿದ್ದರೂ ನಿಯಮಾವಳಿ ರೂಪಿಸಿ ಜಾರಿಯಾಗಿಲ್ಲ. ಇದೀಗ ಸೆಕ್ಷನ್‌ 17 (6)ಕ್ಕೆ ತಿದ್ದುಪಡಿ ಮಾಡಬೇಕಾದರೆ ಉಭಯ ಸದನಗಳಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಬೇಕು. ಮೂಲಗಳ ಪ್ರಕಾರ, ಮುಂದಿನ ಜಂಟಿ ಅಧಿವೇಶನವು 2024ರ ಫೆಬ್ರುವರಿ ಎರಡನೇ ವಾರದಲ್ಲಿ ನಡೆಯಲಿದೆ. ಹೋರಾಟ ಕಾವು ಪಡೆದಿರುವುದರಿಂದ ಅಲ್ಲಿಯವರೆಗೂ ನಾಮಫಲಕಗಳಲ್ಲಿ ಕನ್ನಡ ಬಳಕೆ ನಿಯಮ ಅನುಷ್ಠಾನಕ್ಕೆ ಕಾಯಲು ಸಾಧ್ಯವಿಲ್ಲ. ಹೀಗಾಗಿ ಸುಗ್ರೀವಾಜ್ಞೆ ತರಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡವೇ ಆಡಳಿತ ಭಾಷೆ. ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿದ್ದವನು. ನಾನು ಸಹಿ ಸಹಿತ ಕಡತಗಳ ಮೇಲೆ ಯಾವುದೇ ಸೂಚನೆಯನ್ನೂ ಕನ್ನಡದಲ್ಲೇ ಬರೆಯುತ್ತೇನೆ. ನಮ್ಮ ಸರ್ಕಾರ ಕನ್ನಡಕ್ಕಾಗಿ ಬದ್ಧವಾಗಿದೆ.- ಸಿದ್ದರಾಮಯ್ಯ, ಮುಖ್ಯಮಂತ್ರಿಕಾನೂನು ಕೈಗೆತ್ತಿಕೊಂಡರೆ ಸಹಿಸಲ್ಲ: ಸಿಎಂ

ಇನ್ನು ಶಾಂತಿಯುತವಾದ ಪ್ರತಿಭಟನೆ ಮಾಡಲು ಸರ್ಕಾರದ ವಿರೋಧ ಇಲ್ಲ. ನಮಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದೆ. ಆದರೆ ಕಾನೂನಿಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅದನ್ನು ಸರ್ಕಾರ ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

2022ರ ಮಾ.3ರಂದು ಹೈಕೋರ್ಟ್‌ ಪ್ರತಿಭಟನೆ, ಧರಣಿಗಳನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾತ್ರ ಮಾಡಬೇಕು. ಇದನ್ನು ಸರ್ಕಾರ ಖಾತರಿಪಡಿಸಬೇಕು ಎಂದು ಸ್ಪಷ್ಟ ಆದೇಶ ನೀಡಿದೆ. ಹೀಗಿದ್ದರೂ ರಾಜ್ಯದ ಹಿತದೃಷ್ಟಿಯಿಂದ ಶಾಂತಿಯುತ ಪ್ರತಿಭಟನೆ ಮಾಡಿದರೆ ನಾವು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಂಘಟನೆಯಿರಲಿ, ವ್ಯಕ್ತಿಗಳಿರಲಿ, ಖಾಸಗಿ ಸಂಸ್ಥೆಗಳಿರಲಿ ಯಾರಾದರೂ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತೇನೆ.

ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿದ ಫಲಕ ಹೋರಾಟ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡ ನಾಮಫಲಕ ವಿಚಾರದಲ್ಲಿ ಈವರೆಗಿನ ವೈಮನಸ್ಸನ್ನು ಬದಿಗಿಟ್ಟಿರುವ ಕನ್ನಡಪರ ಸಂಘಟನೆಗಳು, ಬಂಧನಕ್ಕೊಳಗಾಗಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಕಾರ್ಯಕರ್ತರನ್ನು 24 ಗಂಟೆಗಳೊಳಗೆ ಬಿಡುಗಡೆ ಮಾಡುವಂತೆ ಒಕ್ಕೊರಲಿನಿಂದ ಆಗ್ರಹಿಸಿವೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿವೆ.ಪ್ರತ್ಯೇಕ ಹೋರಾಟ ನಡೆಸುತ್ತಾ ಬಂದಿರುವ ಕರವೇ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟ ಕನ್ನಡ ನಾಮಫಲಕ ವಿಚಾರವಾಗಿ ಒಂದಾಗಿವೆ. ಟಿ.ಎ. ನಾರಾಯಣಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರ ಬಂಧಿಸಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಹೋರಾಟಗಾರರಾದ ವಾಟಾಳ್‌ ನಾಗರಾಜ್‌, ಪ್ರವೀಣ್‌ ಶೆಟ್ಟಿ, ಸಾ.ರಾ. ಗೋವಿಂದು ಸೇರಿದಂತೆ ಮತ್ತಿತರರು, ನಾರಾಯಣಗೌಡ ಸೇರಿದಂತೆ ಇನ್ನಿತರ ಕನ್ನಡಪರ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.ಈ ಕುರಿತು ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರಮುಖರು, ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಮಾತನಾಡಿ, ಕನ್ನಡ ನಾಮಫಲಕ ಹಾಗೂ ಕನ್ನಡ ಉಳಿವಿಗಾಗಿ ನಾವು ಹೋರಾಟ ಮಾಡುತ್ತೇವೆ. ಅದರಿಂದ ಹಿಂದೆ ಸರಿಯುವುದಿಲ್ಲ. ಈ ವಿಚಾರದಲ್ಲಿ ಎಲ್ಲ ಕನ್ನಡಪರ ಸಂಘಟನೆಗಳು ತೀರ್ಮಾನ ಮಾಡಿದ್ದೇವೆ. ಅಲ್ಲದೆ, ಬುಧವಾರದ ಹೋರಾಟ ವೇಳೆ ಬಂಧನಕ್ಕೊಳಗಾಗಿರುವ ಹೋರಾಟಗಾರರನ್ನು 24 ಗಂಟೆಗಳೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ನಾಮಫಲಕ ಕನ್ನಡದಲ್ಲಿ ಇದ್ದರೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಬೇಕಿತ್ತು. ಆದರೆ, ಅದರ ಬಗ್ಗೆ ಆಡಳಿತ ನಡೆಸುವವರು ಗಮನವನ್ನೇ ಹರಿಸಿಲ್ಲ. ಈಗ ಅದನ್ನು ವಿರೋಧಿಸಿದ ಕನ್ನಡಪರ ಹೋರಾಟಗಾರರನ್ನು ಬಂಧಿಸಲಾಗಿದೆ. ಎಲ್ಲ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಹೊರರಾಜ್ಯದವರು ನಮ್ಮಲ್ಲಿ ವ್ಯಾಪಾರ ಬೇಕು ಎಂದರೆ ಕನ್ನಡ ಕಲಿಯಬೇಕು ಎಂಬುದನ್ನು ಕಡ್ಡಾಯಗೊಳಿಸಬೇಕು. ಕನ್ನಡ ಕಲಿತವರಿಗೆ ಮಾತ್ರ ಅವಕಾಶ ನೀಡಬೇಕು. ಕನ್ನಡ ಉಳಿಸಿಕೊಳ್ಳಲು ರಾಜ್ಯದಲ್ಲಿ ಮಾಡಿದಂತಹ ಹೋರಾಟ ಬೇರೆ ಯಾವ ರಾಜ್ಯದಲ್ಲೂ ಮಾಡಿಲ್ಲ. ಇದು ನಮ್ಮ ದೌರ್ಭಾಗ್ಯ ಎಂದರು.ಪ್ರವೀಣ್‌ ಶೆಟ್ಟಿ ಬಣದಿಂದ ಖಂಡನಾ ಸಭೆ:ಕರವೇ ಕಾರ್ಯಕರ್ತರ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರವೇ (ಪ್ರವೀಣ್‌ ಶೆಟ್ಟಿ ಬಣ) ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ, ಕನ್ನಡ ನಾಮಫಲಕ ಕಡ್ಡಾಯ ಮಾಡುವುದು ಸರ್ಕಾರದ ಕರ್ತವ್ಯ. ಎಲ್ಲ ಭಾಗದಲ್ಲೂ ಶೇ. 60ರಷ್ಟು ಕನ್ನಡ ನಾಮಫಲಕವಿರಬೇಕು. ಆದರೆ, ಹಲವೆಡೆ ಕಾನೂನು ಜಾರಿಯಾಗಿಲ್ಲ. ಅದಕ್ಕಾಗಿ ಕಾರ್ಯಕರ್ತರು ಹೋರಾಟ ಮಾಡಿದ್ದು, ಅವರನ್ನು ಬಂಧಿಸಲಾಗಿದೆ. ಕೂಡಲೇ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅದರ ಜತೆಗೆ ಕನ್ನಡಪರ ಹೋರಾಟಗಾರರ ಬಂಧನ ವಿಚಾರವಾಗಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಅರಮನೆ ಮೈದಾನದಲ್ಲಿ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳಿಂದ ಖಂಡನಾ ಸಭೆ ನಡೆಸಲಿದ್ದಾರೆ.ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಎಚ್ಚರಿಕೆಕರವೇ ಅಧ್ಯಕ್ಷ ನಾರಾಯಣಗೌಡ ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಗುರುವಾರ ಸಿಎಂ ಮತ್ತು ಡಿಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದರು. ಅದಕ್ಕಾಗಿ ಸಿಎಂ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ ಸೇರಿದಂತೆ ಡಿಸಿಎಂ ಮನೆಗೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.ಜಲಸಂರಕ್ಷಣಾ ಸಮಿತಿ ಪ್ರತಿಭಟನೆಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಹಾಗೂ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಲಿದೆ. ಕರವೇ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.ಮಧ್ಯರಾತ್ರಿ ಹೈಡ್ರಾಮಾ ಬಳಿಕ ನಾರಾಯಣಗೌಡ+ 52 ಅರೆಸ್ಟ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯ ಆಂಗ್ಲ ಫಲಕಗಳ ವಿರುದ್ಧ ಸಮರ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ 53 ಕಾರ್ಯಕರ್ತರನ್ನು ಬುಧವಾರ ರಾತ್ರಿಯಿಡೀ ನಾಟಕೀಯ ಬೆಳವಣಿಗೆ ಬಳಿಕ ಶಾಂತಿಭಂಗ ತಂದ ಆರೋಪದಡಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಆಂಗ್ಲ ನಾಮಫಲಕ ಹಾಕಿದ್ದ ಕೆಲ ಅಂಗಡಿ ಹಾಗೂ ಮಾಲ್‌ಗಳಲ್ಲಿ ನಾಮಫಲಕ ಕಿತ್ತು ಹಾಕಿದ್ದಲ್ಲದೆ ಕಲ್ಲು ತೂರಾಟ ಸಹ ನಡೆಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ವಶಕ್ಕೆ ಪಡೆದಿದ್ದ ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರನ್ನು ಯಲಹಂಕ ಪೊಲೀಸ್ ತರಬೇತಿ ಕೇಂದ್ರ ಮೈದಾನದಲ್ಲಿ ಪೊಲೀಸರು ನಿರ್ಬಂಧನೆಯಲ್ಲಿ ಇಟ್ಟಿದ್ದರು. ಆಗ ಕನ್ನಡ ಸೇವೆ ಮಾಡಿದ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ನಾರಾಯಣಗೌಡ ಅವರು, ತಮ್ಮ ಮನವಿ ಸ್ವೀಕರಿಸಲು ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮಿಸುವಂತೆ ಒತ್ತಾಯಿಸಿ ತಡ ರಾತ್ರಿವರೆಗೆ ಧರಣಿ ಕುಳಿತರು.

ಪ್ರತಿಭಟನಾನಿರತರ ಸಮಾಧಾನಪಡಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಯತ್ನಿಸಿದರೂ ಫಲ ನೀಡಲಿಲ್ಲ. ಅಂತಿಮವಾಗಿ ಶಾಂತಿ ಭಂಗ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿ ಗುರುವಾರ ನಸುಕಿನಲ್ಲಿ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧನಕ್ಕೊಳಪಡಿಸಿದರು. ಆನಂತರ ನ್ಯಾಯಾಧೀಶರ ಮನೆಯಲ್ಲಿ ಅವರ ಮುಂದೆ ಪೊಲೀಸರು ಹಾಜರುಪಡಿಸಿದರು.ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವು ಆದೇಶಿಸಿದ ಹಿನ್ನೆಲೆಯಲ್ಲಿ ನಾರಾಯಣಗೌಡ ಸೇರಿದಂತೆ ಕರವೇ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

10 ಎಫ್‌ಐಆರ್‌ ದಾಖಲು:

ಅಂಗಡಿಗಳು, ಮಾಲ್‌ಗಳು ಹಾಗೂ ಹೋಟೆಲ್‌ಗಳು ಸೇರಿದಂತೆ ವಾಣಿಜ್ಯೋದ್ಯಮ ವಲಯದ ಕಟ್ಟಡಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯಿಸಿ ಬುಧವಾರ ಕರವೇ ಪ್ರತಿಭಟನೆ ನಡೆಸಿತು. ಈ ವೇಳೆ ಆಂಗ್ಲ ನಾಮಫಲಕ ಹಾಕಿದ್ದ ಕಾರಣಕ್ಕೆ ಕೆಲ ಅಂಗಡಿಗಳು ಹಾಗೂ ಮಾಲ್‌ಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಕೆಲವು ಆಂಗ್ಲ ನಾಮಫಲಕಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ದೇವನಹಳ್ಳಿ ಸಮೀಪದ ಸಾದಹಳ್ಳಿ ಗೇಟ್‌ನಿಂದ ಜಾಥಾ ಆಯೋಜಿಸಿ ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದ ರಸ್ತೆಯಲ್ಲಿ ಸಂಚಾರಕ್ಕೂ ಅಡ್ಡಿಪಡಿಸಿದ್ದ ಆರೋಪ ಕರವೇ ಮೇಲೆ ಕೇಳಿ ಬಂದಿತು. ಈ ಪ್ರತಿಭಟನೆ ವೇಳೆ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ಆರೋಪದ ಮೇರೆಗೆ ಚಿಕ್ಕಜಾಲ, ಬಾಣಸವಾಡಿ, ಆಡುಗೋಡಿ, ಕಬ್ಬನ್ ಪಾರ್ಕ್‌, ಕಾಟನ್‌ಪೇಟೆ ಹಾಗೂ ಹೈಗ್ರೌಂಡ್ಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 10 ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದರು. ಈ ಪ್ರಕರಣಗಳ ಸಂಬಂಧ ಕರವೇ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.ಕನ್ನಡೇತರ ನಾಮಫಲಕ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಲ್ಲದೆ ಕೆಐಎ ರಸ್ತೆಯಲ್ಲಿ ಜಾಥಾ ಆಯೋಜಿಸಿ ಸಂಚಾರಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇರೆಗೆ ನಾರಾಯಣಗೌಡ ವಿರುದ್ಧ ಚಿಕ್ಕಜಾಲ ಠಾಣೆಯಲ್ಲಿ ಎರಡು ಎಫ್ಐಆರ್‌ಗಳನ್ನು ಪೊಲೀಸರು ದಾಖಲಿಸಿದರು. ಈ ಪ್ರಕರಣಗಳಲ್ಲಿ ನಾರಾಯಣಗೌಡ ಸೇರಿದಂತೆ ಪ್ರಮುಖ 29 ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಎಲ್ಲರಿಗೂ ಕಾನೂನು ಪ್ರಕಾರ ಶಾಂತಿಯುತ ಪ್ರತಿಭಟನೆಗೆ ಅ‍ವಕಾಶವಿದೆ. ಆದರೆ ಪ್ರತಿಭಟನೆ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದರೆ ಸಹಿಸುವುದಿಲ್ಲ. ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದ ಕಾರಣಕ್ಕೆ ಕರವೇ ಸಂಘಟನೆ ಮೇಲೆ ಪ್ರಕರಣ ದಾಖಲಿಸಿ ನಾರಾಯಣಗೌಡ ಸೇರಿದಂತೆ 53 ಮಂದಿಯನ್ನು ಬಂಧಿಸಲಾಗಿದೆ.

-ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ