ಸಾರಾಂಶ
ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಸಾಂಸ್ಕೃತಿಕ ಸಂಘ ಕನ್ನಡ ರಾಜೋತ್ಸವ ಕಾರ್ಯಕ್ರಮ ಆಯೋಜಿಸಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕನ್ನಡವು ಸಂಸ್ಕೃತಿಯನ್ನು ಪಸರಿಸುವ ಹಾಗೂ ಎಲ್ಲರನ್ನು ಒಗ್ಗೂಡಿಸುವ ದಾಸೋಹ ಭಾಷೆಯಾಗಿದೆ ಎಂದು ಖ್ಯಾತ ಕವಿಯತ್ರಿ ಹಾಗೂ ಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ದೀಪಾ ಹೀರೇಗುತ್ತಿ ತಿಳಿಸಿದರು.ಅವರು ಇಲ್ಲಿನ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡವು ಅತ್ಯಂತ ಪ್ರಾಚೀನ ಭಾಷೆ, ಅದನ್ನು ಬಳಸುವುದು ಮತ್ತು ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಮಾನವಿಕ ಅಧ್ಯಯನದ ಮುಖ್ಯಸ್ಥ ಪ್ರೊ.ರೋಹಿತ್ ಎಸ್. ಅಮೀನ್, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಪ್ರೊ. ಸುರೇಖಾ ಕೆ. ಹಾಗೂ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷೆ ವಿನುತಾ ಕಿರಣ್ ಹರೀಶ್ ಮಾತನಾಡಿದರು.
ಸಾಂಸ್ಕೃತಿಕ ಸಂಘದ ಸಂಯೋಜಕಿ ಡಾ. ಪ್ರೀತಿ ಹರೀಶ್ ರಾಜ್ ಹಾಗೂ ರಾಷ್ಟ್ರೀಯ ಸೇವಾಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಸಿ.ಬಿ. ನವೀನ್ ಚಂದ್ರ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿ ಕಾರ್ಯದರ್ಶಿಗಳಾದ ನಂದನ್ ರೈಮಂಡ್ ಮಚಾದೊ, ಅಶೋಕ, ಶರತ್ ಮತ್ತು ರಶ್ಮಿತಾ ಆರ್. ಶೆಟ್ಟಿ ಉಪಸ್ಥಿತರಿದ್ದರು. ಶ್ರೀನಿಧಿ ಪ್ರಾರ್ಥನೆ ಮಾಡಿದರು. ಚಂದ್ರಿಕಾ ಸ್ವಾಗತಿಸಿದರು. ದಿಶಾ ಭಟ್ ವಂದಿಸಿದರು. ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು.