ಈ ಶಾಲೆಯ ಕನ್ನಡ ಶಿಕ್ಷಕರ ಬಳಗ ಪ್ರತಿ ವರ್ಷದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಳೆದ ಸಾಲಿನ ಜವರೇಗೌಡ, ಸುಹಾನ್, ವರ್ಷಿಣಿ, ಚಂದನಾ, ಚೈತ್ರ, ಕೋಮಲ, ಪುನೀತ್, ತಾಹೇರಬಾನು ಹಾಗೂ ಬಿ.ಬಿ. ಕುತೇಜ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ತುಮಕೂರು: ನಾಗವಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನವೆಂಬರ್ 1 ರಂದು ಕನ್ನಡ ನಾಡು- ನುಡಿ, ಕಲೆ, ಸಂಸ್ಕೃತಿ, ಇತಿಹಾಸದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಜತೆಗೆ ಅಭಿಮಾನ ಮೂಡಿಸುವ ಸಂಭ್ರಮದ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಾಂಶುಪಾಲ ಸಿದ್ದರಾಜು ಮತ್ತು ಉಪಪ್ರಾಂಶುಪಾಲ ನಾಗರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹತ್ತನೇಯ ತರಗತಿ ವಿದ್ಯಾರ್ಥಿ ಪವನ್ ಕನ್ನಡ ನಾಡು ಹಾಗೂ ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿ ಗಮನ ಸೆಳೆದನು. ಈ ಶಾಲೆಯ ಕನ್ನಡ ಶಿಕ್ಷಕರ ಬಳಗ ಪ್ರತಿ ವರ್ಷದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಳೆದ ಸಾಲಿನ ಜವರೇಗೌಡ, ಸುಹಾನ್, ವರ್ಷಿಣಿ, ಚಂದನಾ, ಚೈತ್ರ, ಕೋಮಲ, ಪುನೀತ್, ತಾಹೇರಬಾನು ಹಾಗೂ ಬಿ.ಬಿ. ಕುತೇಜ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಚ್ಚೇವು ಕನ್ನಡದ ದೀಪ, ಕೇಳಿಸದೆ ಕಲ್ಲು ಕಲ್ಲಿನಲಿ, ಜೋಗದ ಸಿರಿ ಬೆಳಕಿನಲಿ ಮುಂತಾದ ಕನ್ನಡ ಗೀತೆಗಳಿಗೆ ಲಕ್ಷ್ಮಿ, ಲಿಖಿತಾ ಮುಂತಾದವರು ಹೆಜ್ಜೆ ಹಾಕಿ ಸಂಭ್ರಮಿಸಿ ಎಲ್ಲರನ್ನೂ ರಂಜಿಸಿದರಲ್ಲದೆ, ಕನ್ನಡ ಹಬ್ಬವನ್ನು ಸಾರ್ಥಕಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಸಮಿತಿ ಪದಾಧಿಕಾರಿಗಳು, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.

ಕನ್ನಡ ಶಿಕ್ಷಕರಾದ ಸಿದ್ದರಾಜು ಸ್ವಾಗತಿಸಿದರು. ಶಿಕ್ಷಕಿ ಗಿರಿಜಾ ವಂದಿಸಿದರು. ಶಿಕ್ಷಕರಾದ ಗಂಗರಾಜು ಹಾಗೂ ಕನ್ನಡ ಶಿಕ್ಷಕಿ ಗಾಯತ್ರಿ ಎಂ.ಎಸ್. ಕಾರ್ಯಕ್ರಮವನ್ನು ನಿರ್ವಹಿಸಿದರು.