ಸಾರಾಂಶ
- ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರೌಢ ಶಾಲೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ, ರಸ ಪ್ರಶ್ನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಏಕೈಕ ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲಿನ ಉಪ ಪ್ರಾಂಶುಪಾಲ ರುದ್ರಪ್ಪ ತಿಳಿಸಿದರು.
ಬುಧವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರೌಢ ಶಾಲೆಯಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮ, ರಸ ಪ್ರಶ್ನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆಯ ಬೆಳವಣಿಗೆಗೆ ಸದಾ ಶ್ರಮಿಸುತ್ತಿದೆ. ಮಕ್ಕಳ ಜ್ಞಾನ ಹೆಚ್ಚಿಸಲು ರಸ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿ ರುವುದರಿಂದ ಮಕ್ಕಳಲ್ಲಿ ಜ್ಞಾನ, ಸೃಜನಶೀಲತೆ, ಕನ್ನಡ ಭಾಷಾ ಜ್ಞಾನ ಬೆಳೆಯಲಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ತಾಲೂಕು ಕಸಾಪದಿಂದ ಪ್ರತಿ ತಿಂಗಳೂ ವಿಶೇಷ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ಶ್ರಾವಣ ಸಂಭ್ರಮ ಆಯೋಜನೆ ಮಾಡಿದ್ದು ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಯಾಗಲು ರಾಜ್ಯದ ಇತಿಹಾಸ ಒಳಗೊಂಡ ರಸ ಪ್ರಶ್ನೆ ಕಾರ್ಯಕ್ರಮ ನಡೆಸಿ ಗೆದ್ದ ತಂಡಗಳಿಗೆ ಬಹುಮಾನ ನೀಡುತ್ತಿದ್ದೇವೆ. ಪ್ರತಿ ಶಾಲೆಯಲ್ಲೂ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮಾಡುತ್ತಿದ್ದೇವೆ ಎಂದರು.
ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು ಮಾತನಾಡಿ, ಶ್ರಾವಣ ಮಾಸದಲ್ಲಿ ಕಸಾಪದಿಂದ ಶಾಲಾ ಕಾಲೇಜುಗಳಲ್ಲಿ ಕನ್ನಡದ ಕಂಪನ್ನು ಬೀರುವ ಶ್ರಾವಣ ಸಂಭ್ರಮ ನಡೆಸುತ್ತಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಿ.ಎ.ಯುಕ್ತ ಹಾಗೂ ಪ್ರಥಮ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ, ಕಸಾಪ ಪೂರ್ವಾಧ್ಯಕ್ಷ ಪಿ.ಕೆ.ಬಸವರಾಜಪ್ಪ, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ, ಹೋಬಳಿ ಘಟಕದ ಸಂಚಾಲಕಿ ಭಾನುಮತಿ, ಸಹ ಶಿಕ್ಷಕರಾದ ಕೆ.ಎಸ್.ವಾಗ್ದೇವಿ, ರಾಮಪ್ಪ ,ಟಿ.ಜಿ.ಸಂದೀಪ್ ಕುಮಾರ್ ಇದ್ದರು.