ಕನ್ನಡ ಭಾಷೆಯನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ, ಕನ್ನಡಿಗರಾದ ನಾವು ಕನ್ನಡದ ನೆಲದಲ್ಲಿ ವಾಸ ಮಾಡುತ್ತಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಸಿ ಕೊಡುವ ಕೆಲಸ ಮಾಡಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಫಲವಾಗಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಉಪನ್ಯಾಸಕ ಆರ್.ಬಿ.ಪದ್ಮನಾಭ ಹೇಳಿದರು.ಪಟ್ಟಣದ ಮಹಿಳಾ ಸರ್ಕಾರಿ ವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಕಸಾಪ ಸಂಸ್ಥಾಪನೆಯಾಗಿ 112 ವರ್ಷಗಳು ಕಳೆದಿವೆ, ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಕಸಾಪಗೆ 113ನೇ ದಿನಾಚರಣೆ ಇದಾಗಿದೆ ಎಂದರು.
ಪರಿಷತ್ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಬದ್ಧತೆಯಿಂದ, ಪ್ರಾಮಾಣಿಕವಾಗಿ ಮಾಡಿ ಕನ್ನಡಿಗರಲ್ಲಿನ ಕನ್ನಡ ಪ್ರೇಮವನ್ನು ಜಾಗೃತಿ ಮೂಡಿಸುವ ಜೊತೆಗೆ, ಕನ್ನಡ ಸಾಹಿತ್ಯ ಲೋಕದಲ್ಲಿ ಕೆಲಸ ಮಾಡಿದ ಸಾಹಿತಿಗಳನ್ನು ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.ಕಸಾಪ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಸಾವಿರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯು ಕನ್ನಡಿಗರಲ್ಲಿನ ನಿರಭಿಮಾನದಿಂದ ಕಡಗಣನೆಗೆ ಒಳಗಾಗುತ್ತಿದ್ದರೂ ಕನ್ನಡ ಭಾಷೆಯು ವಿಶ್ವದಲ್ಲಿಯೇ ಅತಿ ಹೆಚ್ಚಿನ ಜನರು ಬಳಸುತ್ತಿರುವ ಜೀವಂತ ಭಾಷೆಯಾಗಿದೆ ಎಂದರು.
ಕನ್ನಡ ಭಾಷೆಯನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ, ಕನ್ನಡಿಗರಾದ ನಾವು ಕನ್ನಡದ ನೆಲದಲ್ಲಿ ವಾಸ ಮಾಡುತ್ತಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಸಿ ಕೊಡುವ ಕೆಲಸ ಮಾಡಬೇಕು. ಕನ್ನಡ ಸಾರಸ್ವತ ಲೋಕದಲ್ಲಿ ಕೆಲಸ ಮಾಡಿದ ಸಾಹಿತಿಗಳು, ಕವಿಗಳು ಹಾಗೂ ವಿದ್ವಾಂಸರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸವನ್ನು ಕಳೆದ 40 ವರ್ಷಗಳಿಂದ ಶಾಲೆಗೊಂದು ಕಾರ್ಯಕ್ರಮದ ಮೂಲಕ ಮಾಡುತ್ತಿರುವ ನಮ್ಮ ತಾಲೂಕು ಘಟಕವು ರಾಜ್ಯದಲ್ಲಿಯೇ ಮಾದರಿ ಸಾಹಿತ್ಯ ಪರಿಷತ್ ಘಟಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಅನುರಾಧ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ರಮೇಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪದ್ಮೇಶ್, ಎಕ್ಯೂಎಸಿ ವಿಭಾಗದ ಸಂಚಾಲಕ ಮಧು, ಪ್ರಗತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಕಾಳೇಗೌಡ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪ್ರತಿಮಾ, ಕಸಾಪ ಪ್ರಧಾನ ಕಾರ್ಯದರ್ಶಿ ಕಟ್ಟೆ ಮಹೇಶ್ ಸೇರಿ ನೂರಾರು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.
ಇದೇ ವೇಳೆ ಪ್ರಗತಿಪರ ಕೃಷಿಕ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವೈ. ಜಯಕುಮಾರ್ ಹಾಗೂ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.