ಸಾರಾಂಶ
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡವೂರಿನ ಮಹಾತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದ ಕವಿ ಅರುಣಾಬ್ಜ ವೇದಿಕೆಯಲ್ಲಿ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.
ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನಕನ್ನಡಪ್ರಭ ವಾರ್ತೆ ಉಡುಪಿ
ನಗರಗಳಲ್ಲಿ ಮಾತ್ರವಲ್ಲದೇ, ಹಳ್ಳಿಗಳಲ್ಲೂ ಕನ್ನಡವು ಅನ್ಯಭಾಷೆಯ ಹೊಡೆತದಿಂದ ಸೊರಗುತ್ತಿದೆ. ಈ ಪ್ರಭಾವವನ್ನು ತಡೆಯದಿದ್ದರೆ ಕನ್ನಡ ಭಾಷೆಯೇ ಸಾವಿನ ಅಂಚಿಗೆ ಬಂದೀತು ಎಂದು ವಿದ್ವಾಂಸ ಪ್ರೊ.ಎಂ.ಎಲ್ ಸಾಮಗ ಆತಂಕ ವ್ಯಕ್ತಪಡಿಸಿದರು.ಅವರು ಶನಿವಾರ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡವೂರಿನ ಮಹಾತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದ ಕವಿ ಅರುಣಾಬ್ಜ ವೇದಿಕೆಯಲ್ಲಿ ನಡೆದ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ತಂತ್ರಜ್ಞಾನ ವಿಸ್ಮಯಕಾರಿಯಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಜಾಗತಿಕ ವಿದ್ಯಮಾನದ ಪ್ರಭಾವದಿಂದ ಕನ್ನಡ ಭಾಷೆಯ ಸ್ಥಿತಿಗತಿ ಆತಂಕವನ್ನು ಹೆಚ್ಚಿಸುತ್ತಿದೆ ಎಂದರು.ಹಲವಾರು ವರ್ಷಗಳಲ್ಲಿ ಯಕ್ಷಗಾನ ಸಾಹಿತ್ಯ ರಚನೆ ಮಾಡುವ ಕವಿಗಳು ಸಾಹಿತ್ಯಿಕ ಮೌಲ್ಯದ ಎಷ್ಟೋ ಕೃತಿಗಳನ್ನು ರಚಿಸಿದ್ದಾರೆ. ಹೆಚ್ಚಿನ ಸಾಹಿತ್ಯ ಸಮ್ಮೇಳನಗಳಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಸರಿಯಾದ ಮನ್ನಣೆ ಕೊಟ್ಟಿಲ್ಲ. ಯಕ್ಷಗಾನ ಪ್ರಸಂಗ ಸಾಹಿತ್ಯವನ್ನೂ ಕನ್ನಡ ಸಾಹಿತ್ಯ ವಾಹಿನಿಯ ಒಂದು ತೊರೆ ಎಂದು ಪರಿಗಣಿಸಬೇಕು ಎಂದವರು ಸಲಹೆ ನೀಡಿದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಮರ್ಶಕ ಎಸ್.ಆರ್. ವಿಜಯಶಂಕರ್ ಮಾತನಾಡಿ, ಇಂದಿನ ಕನ್ನಡದ ಅನೇಕ ಮುಖ್ಯ ಬರಹಗಾರರು ವಕೀಲರಾಗಿ, ವೈದ್ಯರಾಗಿ, ಎಂಜಿನಿಯರ್ ಆಗಿ ಅಧ್ಯಯನ ಮಾಡಿದವರು. ವಿಶ್ವವಿದ್ಯಾಲಯದಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಉಪಸ್ಥಿತರಿದ್ದರು.
ಕಸಾಪ ಉಡುಪಿ ತಾಲ್ಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶಾಂತರಾಜ ಐತಾಳ್, ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಹರಿಶ್ಚಂದ್ರ, ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ನಗರಸಭೆ ಸದಸ್ಯ ವಿಜಯ್ ಕೊಡವೂರು, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲಿಯಾನ್ ಉಪಸ್ಥಿತರಿದ್ದರು.ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು ಸ್ವಾಗತಿಸಿದರು. ಕಸಾಪ ತಾಲೂಕು ಘಟಕ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಮಹಿಳಾ ಪ್ರತಿನಿಧಿ ಪೂರ್ಣಿಮಾ ಕೊಡವೂರು ನಿರೂಪಿಸಿದರು.ಸಾಹಿತಿ ನಾರಾಯಣ ಮಡಿ ರಾಷ್ಟ್ರಧ್ವಜ, ಲೇಖಕಿ ಮಾಧವಿ ಭಂಡಾರಿ ಪರಿಷತ್ ಧ್ವಜ ಅರಳಿಸಿದರು. ಸಮ್ಮೇಳನಕ್ಕೂ ಮೊದಲು ಭವ್ಯ ಮೆರವಣಿಗೆ ನಡೆಯಿತು. ಸಮ್ಮೇಳನದಂಗವಾಗಿ ಆರೋಗ್ಯ ತಪಾಸಣೆ ಶಿಬಿರ ಕೂಡ ಹಮ್ಮಿಕೊಳ್ಳಲಾಗಿತ್ತು.