ನಾಡು-ನುಡಿಯ ಬಗ್ಗೆ ಕನ್ನಡ ಸಂಘದಿಂದ ನಿರಂತರ ಕಾರ್ಯಕ್ರಮ: ಪ್ರಧಾನ್ ಗುರುದತ್

| Published : Nov 24 2025, 02:00 AM IST

ನಾಡು-ನುಡಿಯ ಬಗ್ಗೆ ಕನ್ನಡ ಸಂಘದಿಂದ ನಿರಂತರ ಕಾರ್ಯಕ್ರಮ: ಪ್ರಧಾನ್ ಗುರುದತ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 53 ವರ್ಷಗಳ ದೀರ್ಘ ಕಾಲ ಒಂದು ಸಂಘ ನಿರಂತರವಾಗಿ ಕಾರ್ಯಕ್ರಮ ನಡೆಸಿಕೊಂಡು ಸಕ್ರಿಯವಾಗಿರುವುದು ಸಾಮಾನ್ಯವಲ್ಲ. ಇದಕ್ಕೆ ಇಲ್ಲಿನ ಕನ್ನಡ ಪ್ರೇಮಿಗಳು ನೀಡುತ್ತಿರುವ ಪ್ರೋತ್ಸಾಹ ಕಾರಣವಾಗಿದೆ. ಜನ ಸಾಮಾನ್ಯರ ಬೆಂಬಲ ಇಲ್ಲದಿದ್ದರೆ ಯಾವುದೇ ಸಂಘ ಇಷ್ಟು ದೀರ್ಘ ಕಾಲ ಉಳಿಯಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಳೆದ 53 ವರ್ಷಗಳಿಂದ ನಾಡು-ನುಡಿಯ ಬಗ್ಗೆ ನಿರಂತರವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಕನ್ನಡ ಸಂಘದ ಸಮಾಜಮುಖಿ ಕಾರ್ಯ ಶ್ಲಾಘನೀಯವಾದದ್ದು ಎಂದು ಮೈಸೂರಿನ ಖ್ಯಾತ ಅನುವಾದಕ ಪ್ರಧಾನ್ ಗುರುದತ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಡಾ.ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ನಾಗಮಂಗಲ ಕನ್ನಡ ಸಂಘ ವಿಶ್ವಸ್ಥ ಸಮಿತಿ ಆಯೋಜಿಸಿರುವ 17ನೇ ವರ್ಷದ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವದಲ್ಲಿ ನುಡಿ ಗೌರವ ಸ್ವೀಕರಿಸಿ ಮಾತನಾಡಿದರು.

ರಾಜ್ಯ ಹಾಗೂ ರಾಷ್ಟ್ರದ ಅನೇಕ ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿದ್ದೇನೆ. ಹಲವು ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿವೆ. ಆದರೆ, ನಾಗಮಂಗಲ ಕನ್ನಡ ಸಂಘ ನೀಡಿರುವ ಗೌರವ ಅತ್ಯಂತ ಸಂತೋಷ ತಂದುಕೊಟ್ಟಿದೆ ಎಂದು ಬಣ್ಣಿಸಿದರು.

ಕಳೆದ 53 ವರ್ಷಗಳ ದೀರ್ಘ ಕಾಲ ಒಂದು ಸಂಘ ನಿರಂತರವಾಗಿ ಕಾರ್ಯಕ್ರಮ ನಡೆಸಿಕೊಂಡು ಸಕ್ರಿಯವಾಗಿರುವುದು ಸಾಮಾನ್ಯವಲ್ಲ. ಇದಕ್ಕೆ ಇಲ್ಲಿನ ಕನ್ನಡ ಪ್ರೇಮಿಗಳು ನೀಡುತ್ತಿರುವ ಪ್ರೋತ್ಸಾಹ ಕಾರಣವಾಗಿದೆ. ಜನ ಸಾಮಾನ್ಯರ ಬೆಂಬಲ ಇಲ್ಲದಿದ್ದರೆ ಯಾವುದೇ ಸಂಘ ಇಷ್ಟು ದೀರ್ಘ ಕಾಲ ಉಳಿಯಲು ಸಾಧ್ಯವಿಲ್ಲ ಎಂದರು.

ಕನ್ನಡ ಚಿತ್ರ ರಂಗವನ್ನು ಶ್ರೀಮಂತಗೊಳಿಸಿ ಚೇತನಗೊಳಿಸಿದ ಹಿರಿಯ ಕಲಾವಿದೆ ಎಂ.ಎನ್.ಲಕ್ಷ್ಮಿದೇವಿ ಅವರ ಸಮ್ಮುಖದಲ್ಲಿ ನುಡಿ ಗೌರವ ಸ್ವೀಕರಿಸುತ್ತಿರುವುದು ಹೆಮ್ಮೆ ತಂದಿದೆ ಎಂದರು.

ರಂಗ ಗೌರವ ಸ್ವೀಕರಿಸಿದ ಹಿರಿಯ ರಂಗಕರ್ಮಿ ಹಾಗೂ ಚಿತ್ರನಟಿ ಎಂ.ಎನ್.ಲಕ್ಷ್ಮಿದೇವಿ ಮಾತನಾಡಿ, ಇಷ್ಟೊಂದು ಕನ್ನಡಾಭಿಮಾನಿಗಳು ಮತ್ತು ರಂಗಾಸಕ್ತರನ್ನು ನೋಡಿ ಕಣ್ತುಂಬಿಕೊಳ್ಳುವ ಸೌಭಾಗ್ಯವನ್ನು ಇಲ್ಲಿನ ಕನ್ನಡ ಸಂಘ ನನಗೆ ಒದಗಿಸಿಕೊಟ್ಟಿದೆ. ಇಲ್ಲಿನ ಡಾ.ಎಸ್.ಎಲ್. ಭೈರಪ್ಪ ನೆನಪಿನ ವೇದಿಕೆಯಲ್ಲಿ ಏಳು ದಿನಗಳ ಕಾಲ ನಡೆಯುವ ನಾಗರಂಗ ನಾಟಕೋತ್ಸವ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಸಂಘದ ಸದಸ್ಯ ಹಾಗೂ ನಿವೃತ್ತ ಪ್ರಾಂಶುಪಾಲ ರಘುನಾಥ್ ಸಿಂಗ್ ಪ್ರಾಸ್ತಾವಿಕ ನುಡಿಯಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಪುಟ್ಟಮ್ಮ ಮಾಯಣ್ಣಗೌಡ ನಾಟಕೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಪಟ್ಟಣದ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹಚ್ಚೇವು ಕನ್ನಡದ ದೀಪ ಹಾಡಿಗೆ ಸ್ವಾಗತ ನೃತ್ಯ ಪ್ರದರ್ಶಿಸಿದರು.

ಮೆರುಗು ನೀಡುತ್ತಿರುವ ಮಳಿಗೆಗಳು:

ನಾಟಕೋತ್ಸವ ನಡೆಯುತ್ತಿರುವ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ ಮತ್ತು ಆವರಣವನ್ನು ವಿಶೇಷ ರೀತಿಯಲ್ಲಿ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಅಲ್ಲದೇ ಸಿದ್ಧ ಉಡುಪುಗಳು, ಅಲಂಕಾರಿಕಾ ವಸ್ತುಗಳು, ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ, ತಿಂಡಿ ತಿನಿಸು, ಪುಸ್ತಕ ಮಳಿಗೆ, ಆಹಾರ ಮಳಿಗೆ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಬಗೆಯ ಅಂಗಡಿ ಮಳಿಗೆಗಳು ಕಾಲೇಜು ಮುಂಭಾಗದಲ್ಲಿ ತೆರೆದುಕೊಂಡು ನಾಟಕೋತ್ಸವಕ್ಕೆ ಮೆರುಗು ನೀಡುತ್ತಿವೆ.

ರಂಗಾಸಕ್ತರು ವಿವಿಧ ಬಗೆಯ ತಿಂಡಿ ತಿನಿಸುಗಳ ರುಚಿಯನ್ನು ಸವಿದರು. ಒಟ್ಟಾರೆ ನಾಗಮಂಗಲ ಪಟ್ಟಣದಲ್ಲಿ ಒಂದು ವಾರಕಾಲ ನಾಟಕಗಳ ಜಾತ್ರೆಯ ಸಂಭ್ರಮ ಮನೆಮಾಡಿದೆ.