ಸಾರಾಂಶ
ಕರ್ನಾಟಕ ರಾಜ್ಯದಲ್ಲಿಯೇ ಬೆಳಗಾವಿ ನಗರಕ್ಕೆ ವಿಶೇಷ ಮಹತ್ವವಿದೆ. ಬೆಳಗಾವಿಯಲ್ಲಿ ಕನ್ನಡ ಸಂಸ್ಕೃತಿ ಉಳಿಯಲು-ಬೆಳೆಯಲು ಮಠಗಳ ಪಾತ್ರ ಅನನ್ಯವಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ ರಾಜ್ಯದಲ್ಲಿಯೇ ಬೆಳಗಾವಿ ನಗರಕ್ಕೆ ವಿಶೇಷ ಮಹತ್ವವಿದೆ. ಬೆಳಗಾವಿಯಲ್ಲಿ ಕನ್ನಡ ಸಂಸ್ಕೃತಿ ಉಳಿಯಲು-ಬೆಳೆಯಲು ಮಠಗಳ ಪಾತ್ರ ಅನನ್ಯವಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.ಬೆಳಗಾವಿ ಕಾರಂಜಿಮಠದ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು,
ಒಂದು ಕಾಲಕ್ಕೆ ಮರಾಠಿ ವಾತಾವರಣದಿಂದ ಕನ್ನಡತನವನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಮಠಗಳು ಕನ್ನಡ ಕಟ್ಟುವ ಕಾಯಕವನ್ನು ಸದ್ದಿಲ್ಲದೆ ಮಾಡುತ್ತ ಬಂದವು. ಸ್ವಾಮೀಜಿಯವರ ಪ್ರಯತ್ನ ಕಾರಣವಾಗಿ ಕನ್ನಡ ಮರಾಠಿ ಉಭಯ ಭಾಷಿಕರು ಸಾಮರಸ್ಯದಿಂದ ಬದುಕುವಂತಾಗಿದೆ ಎಂದರು.ಬೆಳಗಾವಿಯಲ್ಲಿ ಕನ್ನಡ ಪೂರ್ಣಪ್ರಮಾಣದಲ್ಲಿ ಬೆಳೆಯುತ್ತಿರುವುದು ಆರೋಗ್ಯಕರ ಲಕ್ಷಣ. ಬೆಳಗಾವಿ ರಾಜ್ಯದ ಎರಡನೆಯ ರಾಜಧಾನಿಯಾಗಬೇಕು, ಇಲ್ಲಿ ಪ್ರತಿವರ್ಷ ವಿಧಾನ ಸಭಾ ಅಧಿವೇಶನ ಎರಡು ಬಾರಿಯಾದರೂ ನಡೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಆಲೋಚಿಸಬೇಕಾಗಿದೆ ಎಂದರು. ಮಠಗಳಿಂದ ಶೈಕ್ಷಣಿಕ-ಧಾರ್ಮಿಕ-ಸಾಮಾಜಿಕ ಸೇವಾಕ್ಷೇತ್ರದಲ್ಲಿ ಅನನ್ಯವಾದ ಸೇವೆ ಸಂದಿದೆ. ಕಾರಂಜಿಮಠದ ಪೂಜ್ಯರು ಶಿವಾನುಭವ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.ಹೊಸೂರು ಮಡಿವಾಳೇಶ್ವರಮಠದ ಗಂಗಾಧರ ಸ್ವಾಮಿಗಳು ಮಾತನಾಡಿ, ಇಂದು ಭೌತಿಕ ಲಾಲಸೆಯ ಬೆನ್ನುಹತ್ತಿ, ಸಂಬಂಧಗಳೆಲ್ಲ ನುಚ್ಚುನೂರಾಗಿವೆ; ಬಿಚ್ಚಿ ಬೇರಾಗಿವೆ. ಕೌಟುಂಬಿಕ ಕಲಹಗಳು ಹೆಚ್ಚಾಗಿವೆ. ಇದಕ್ಕೆಲ್ಲ ಅಧ್ಯಾತ್ಮವೊಂದೇ ದಾರಿ. ಇಂತಹ ಅಧ್ಯಾತ್ಮ ಪಥವನ್ನು ತೋರುತ್ತಿರುವ ಕಾರಂಜಿಮಠದಂತಹ ಪೀಠಗಳ ಸೇವೆ ಗಣನೀಯವಾಗಿದೆ ಎಂದರು.ನಿಡಸೋಸಿ ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ಸತ್ಪಥದಲ್ಲಿ ನಡೆಯಬೇಕಾದ ಯುವಜನಾಂಗ ಹಳಿತಪ್ಪಿದ ರೈಲಿನಂತಾಗಿದೆ. ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇರುವುದರಿಂದ ನಮ್ಮ ಯುವಶಕ್ತಿ ಅಧಃಪತನವಾಗುತ್ತಿದೆ. ಇದಕ್ಕೆ ಧರ್ಮಶ್ರದ್ಧೆಯ ಅವಶ್ಯಕತೆ ಇದೆ ಎಂದು ತಿಳಿಸಿದರು.ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಕಳೆದ 26 ವರ್ಷಗಳಿಂದ ಬೆಳಗಾವಿ ನಗರದಲ್ಲಿ ಧರ್ಮ ಜಾಗೃತಿಗಾಗಿ ಶಿವಾನುಭವ ಕಾರ್ಯಕ್ರಮದ ಮೂಲಕ ಕಾರಂಜಿಮಠವು ಕಾರ್ಯನಿರ್ವಹಿಸುತ್ತ ಬಂದಿದೆ ಎಂದರು. ವೀರೇಶ ಹಿರೇಮಮಠ ಅವರು 5 ದಿನಗಳ ಕಾಲ ಭವ್ಯ ಭಾರತ-ದಿವ್ಯ ಪರಂಪರೆ ಕುರಿತು ಪ್ರವಚನ ನೀಡಿ, ಸಮಾರೋಪ ನುಡಿಗಳನ್ನಾಡಿದರು. ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ, ಉತ್ತರಾಧಿಕಾರಿಗಳಾದ ಶ್ರೀ ಶಿವಯೋಗಿದೇವರು ಉಪಸ್ಥಿತರಿದ್ದರು.ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ.ಶ್ರೀಕಾಂತ ಶಾನವಾಡ ಸ್ವಾಗತಿಸಿದರು. ಎ.ಕೆ.ಪಾಟೀಲ ನಿರೂಪಿಸಿದರು. ವಿ.ಕೆ.ಪಾಟೀಲ ವಂದಿಸಿದರು.