ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಹರಿಸುವಂತೆ ಸೂಚಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಸೇನೆಯ ಕಾರ್ಯಕರ್ತರು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ, ಕೇಂದ್ರ - ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ, ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿರು.
ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿ, ಸಮಿತಿ ಸೂಚನೆಯಂತೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಬದಲಾಗಿ 8 ಸಾವಿರ ಕ್ಯುಸೆಕ್ ನೀರು ಬಿಡಲಾಗುವುದು ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಕಾವೇರಿ ಕೊಳ್ಳದ ಜಲಾಶಯಗಳಿಂದ 20 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೆಚ್ಚಿನ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಬಿಡುವ ಮೂಲಕ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದೆ. ಸರ್ಕಾರ ಈ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ನೀರಿಲ್ಲದೆ ರೈತರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಕೆಆರ್‌ಎಸ್‌ಗೆ ನೀರು ಬಂದಿದೆ. ಇಲ್ಲಿನ ಕೆರೆ ಕಟ್ಟೆಗಳು ತುಂಬಿಲ್ಲ. ಆದರೂ ನೆರೆ ರಾಜ್ಯಕ್ಕೆ ನೀರು ಬಿಡುವ ಮೂಲಕ ಜಲಾಶಯ ಖಾಲಿ ಮಾಡಲು ಮುಂದಾಗಿದೆ. ಕೂಡಲೇ ತಮಿಳುನಾಡಿಗೆ ಹೋಗುತ್ತಿರುವ ನೀರು ನಿಲ್ಲಿಸಿ ಇಲ್ಲಿನ ರೈತರು ಎರಡು ಬೆಳೆ ಬೆಳೆಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಅಧಿವೇಶನದಲ್ಲಿ ಜಿಲ್ಲೆಯ ಶಾಸಕರು ಸದನದಲ್ಲಿ ಮೌನ ವಹಿಸದೇ ರೈತರ ಪರ ದನಿ ಎತ್ತಬೇಕು. ಸಂಕಷ್ಟ ಪರಿಸ್ಥಿತಿಯಲ್ಲಿರುವ ರೈತರ ಹಿತ ಕಾಪಾಡುವುದು ಚುನಾಯಿತ ಜನಪ್ರತಿನಿಧಿಗಳ ಹೊಣೆಗಾರಿಕೆ ಎಂಬುದನ್ನು ಮರೆಯಬಾರದು. ಇಲ್ಲದಿದ್ದರೆ ಜಿಲ್ಲೆಗೆ ಬಂದಾಗ ಶಾಸಕರನ್ನು ತಡೆಯಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ ಸಂಸದರು ಕಾವೇರಿ ವಿಚಾರದಲ್ಲಿ ಬಾಯಿ ಬಿಟ್ಟಿಲ್ಲ. ಇಲ್ಲಿನ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಲು ಸಂಸದರು ಕೇಂದ್ರ, ಸಮಿತಿ, ಪ್ರಾಧಿಕಾರಕ್ಕೆ ಪತ್ರ ಬರೆದು ಪರಿಸ್ಥಿತಿ ವಿವರಿಸಬೇಕು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ಒಮ್ಮತದ ತೀರ್ಮಾನ ಕೈಗೊಂಡು ನೀರು ಉಳಿಸಿ ರೈತರ ಹಿತ ಕಾಪಾಡಬೇಕು ಎಂದರು.ಜಿಲ್ಲೆಯ ರೈತರಿಗೆ ಬೆಳೆ ನಷ್ಟ ಪರಿಹಾರ ಪಾವತಿಸದೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಈ ತಕ್ಷಣ ಬೆಳೆ ಹಾನಿ ಪರಿಹಾರ ಪಾವತಿಸಬೇಕು. ಮಂಡ್ಯ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸೇನೆ ರಾಜ್ಯ ಸಂಚಾಲಕ ಮಹಾಂತಪ್ಪ, ಬೆಟ್ಟಳ್ಳಿ ಮಂಜುನಾಥ್, ಸೌಭಾಗ್ಯ, ಪವಿತ್ರ, ಇಂದ್ರಮ್ಮ, ನಂದಿನಿ, ದೇವು, ಶಿವು, ಚಂದ್ರು, ಕುಮಾರ ಯರಹಳ್ಳಿ, ಮಧು ಹಲವರು ಭಾಗವಹಿಸಿದ್ದರು.