ಮಹಾರಾಷ್ಟ್ರ ಲಾರಿ ಚಾಲಕರಿಗೆ ಕನ್ನಡ ಶಾಲು!

| Published : Feb 26 2025, 01:04 AM IST

ಸಾರಾಂಶ

ದೊಡ್ಡಬಳ್ಳಾಪುರ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಬಸ್‌ಗಳ ಮೇಲೆ ಎಂಇಎಸ್ ಪುಂಡರು ದಾಳಿ ನಡೆಸಿ ಮಸಿ ಬಳಿದು, ಚಾಲಕರನ್ನು ನಿಂದಿಸಿರುವ ಪ್ರಕರಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ದೊಡ್ಡಬಳ್ಳಾಪುರದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ದೊಡ್ಡಬಳ್ಳಾಪುರ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಬಸ್‌ಗಳ ಮೇಲೆ ಎಂಇಎಸ್ ಪುಂಡರು ದಾಳಿ ನಡೆಸಿ ಮಸಿ ಬಳಿದು, ಚಾಲಕರನ್ನು ನಿಂದಿಸಿರುವ ಪ್ರಕರಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ದೊಡ್ಡಬಳ್ಳಾಪುರದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಮರಾಠಿ ಪುಂಡಾಟಿಕೆಗೆ ವಿರುದ್ದವಾಗಿ ಕನ್ನಡಿಗರು ಸ್ನೇಹಪರತೆ ಮತ್ತು ಪ್ರಜ್ಞಾವಂತಿಕೆಯ ಪ್ರತಿಕ್ರಿಯೆ ನೀಡಿವ ಸಂಕೇತವಾಗಿ, ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ನೇತೃತ್ವದಲ್ಲಿ, ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಗೀತಂ ವಿವಿ ಬಳಿ ಮಹಾರಾಷ್ಟ್ರ ನೋಂದಣಿಯ ಲಾರಿಗಳನ್ನು ತಡೆದು, ಚಾಲಕರನ್ನು ಕೆಳಗಿಳಿಸಿ ಅವರಿಗೆ ಕನ್ನಡದ ಶಾಲು ಹಾಕಿ, ಗುಲಾಬಿ ಹೂ ನೀಡಿ, ಸಿಹಿ ತಿನ್ನಿಸಿದರು.

ಬಳಿಕ ಮಾತನಾಡಿದ ಅವರು, ಹಿಂಸೆ ಮತ್ತು ಪುಂಡಾಟಿಕೆ ಕನ್ನಡಿಗರ ಜಾಯಮಾನವಲ್ಲ. ಸ್ನೇಹಪರತೆ, ವಿಶ್ವಾಸ ಮತ್ತು ಗೌರವಯುತ ನಡವಳಿಕೆ ನಮ್ಮ ಸಂಸ್ಕೃತಿ. ಕರ್ನಾಟಕದ ವಾಹನಗಳಿಗೆ ಮಸಿ ಬಳಿಯುವುದು ಮರಾಠಿ ಪುಂಡರ ಸಣ್ಣತನದ ಪ್ರತೀಕ. ಉಭಯ ರಾಜ್ಯಗಳ ನಡುವೆ ಸೌಹಾರ್ದತೆ ಬಯಸುವವರು ನಾವು. ಆದರೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಯಾವುದೇ ಶಕ್ತಿಗಳ ವಿರುದ್ದ ನಮ್ಮ ಹೋರಾಟ ನಿರಂತರ ಎಂದು ಹೇಳಿದರು.

ದಿನನಿತ್ಯ ಉಭಯ ರಾಜ್ಯಗಳಲ್ಲಿ ಸಾವಿರಾರು ವಾಹನಗಳು, ಅಸಂಖ್ಯಾತ ಜನರು ಸಂಚರಿಸುತ್ತಾರೆ. ಹಾಗೆಂದು ಸಿಕ್ಕಸಿಕ್ಕವರನೆಲ್ಲಾ ಗುರಿಯಾಗಿಸುವುದು ಖಂಡನೀಯ. ಹೊಟ್ಟೆಪಾಡಿಗಾಗಿ ಕರ್ನಾಟಕಕ್ಕೆ ಬರುವ, ಮಹಾರಾಷ್ಟ್ರಕ್ಕೆ ಹೋಗುವ ಜನರಿಗೆ ತೊಂದರೆ ಕೊಡುವುದು ನೀಚತನ. ಇದನ್ನು ಎಂಇಎಸ್‌ ಸೇರಿದಂತೆ ಮರಾಠಿ ಹೆಸರಿನಲ್ಲಿ ಪುಂಡಾಟಿಕೆ ಮೆರೆಯುತ್ತಿರುವ ಜನ ಅರ್ಥ ಮಾಡಿಕೊಳ್ಳಬೇಕು. ಹೋರಾಟ ಸಾಮಾನ್ಯ ಜನರ ವಿರುದ್ದ ಅಲ್ಲ. ಪ್ರಭುತ್ವದ ದೌರ್ಬಲ್ಯದ ವಿರುದ್ದ ಎಂಬುದನ್ನು ನಮ್ಮ ಇಂದಿನ ಹೋರಾಟದ ಮೂಲಕ ಸಾರಿದ್ದೇವೆ ಎಂದು ಹೇಳಿದರು.

ಎಂಇಎಸ್ ಪುಂಡರಿಗೆ ಮಹಾರಾಷ್ಟ್ರ ವಾಹನಗಳು ಕರ್ನಾಟಕದಲ್ಲೂ ಸಂಚರಿಸುತ್ತವೆ. ಅಲ್ಲಿನ ಜನ ಸನ್ನಡತೆಯಿಂದ ನಮ್ಮನ್ನು ಕಂಡಿದ್ದಾರೆ ಎಂಬ ಸಂದೇಶವನ್ನು ಎಂಇಎಸ್‌ ಪುಂಡರಿಗೆ ತಿಳಿಸುವಂತೆ ಚಾಲಕರಿಗೆ ಹೇಳಿರುವುದಾಗಿ ತಿಳಿಸಿದರು.

ಮರಾಠಿ ಮಾತನಾಡದ ಕರ್ನಾಟಕದ ಬಸ್‌ ಕಂಡಕ್ಟರ್‌ ಮೇಲಿನ ದಾಳಿ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)‌ಯ ಪುಂಡಾಟಿಕೆ ವಿರುದ್ಧ ಕನ್ನಡ ಶಕ್ತಿಗಳು ಒಂದಾಗಿವೆ. ಬೆಳಗಾವಿಗೆ ಈಗಾಗಲೇ ಕನ್ನಡಪರ ಸಂಘಟನೆಗಳ ನಾಯಕರು ಕಾಲಿಟ್ಟಿದ್ದು, ಎಂಇಎಸ್‌ ಮರಾಠಿ ಪುಂಡರ ಗುಂಪಿನ ದೌರ್ಜನ್ಯವನ್ನು ಅಂತ್ಯಗೊಳಿಸುವ ಶಪಥ ಮಾಡಿದ್ದಾರೆ ಎಂದು ತಿಳಿಸಿದರು.

ಸರ್ಕಾರ ಕೂಡಲೇ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಗಡಿಪಾರು ಮಾಡಬೇಕು. ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನಗಳು, ಜನರ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

25ಕೆಡಿಬಿಪಿ4-

ದೊಡ್ಡಬಳ್ಳಾಪುರದಲ್ಲಿ ಕರವೇ ಮುಖಂಡ ರಾಜಘಟ್ಟ ರವಿ ನೇತೃತ್ವದಲ್ಲಿ ಮಹಾರಾಷ್ಟ್ರ ನೋಂದಣಿಯ ಲಾರಿಗಳನ್ನು ತಡೆದು ಚಾಲಕರಿಗೆ ಕನ್ನಡ ಶಾಲು, ಗುಲಾಬಿ ನೀಡಿ ಸಿಹಿ ತಿನ್ನಿಸಲಾಯಿತು.