ಕನ್ನಡ ಪ್ರಧಾನವಾಗಿಟ್ಟು ಉಳಿದೆಲ್ಲ ಭಾಷೆ ಒಳಗೊಂಡ ಆಡಳಿತ ಕ್ರಮ ರೂಪಿಸಲಿ: ಪುರುಷೋತ್ತಮ ಬಿಳಿಮಲೆ

| Published : Jul 25 2025, 12:32 AM IST

ಕನ್ನಡ ಪ್ರಧಾನವಾಗಿಟ್ಟು ಉಳಿದೆಲ್ಲ ಭಾಷೆ ಒಳಗೊಂಡ ಆಡಳಿತ ಕ್ರಮ ರೂಪಿಸಲಿ: ಪುರುಷೋತ್ತಮ ಬಿಳಿಮಲೆ
Share this Article
  • FB
  • TW
  • Linkdin
  • Email

ಸಾರಾಂಶ

ಆ ಸ್ಥಳಗಳಲ್ಲಿ ಅದರ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸುವ ಫಲಕ ಅಳವಡಿಸಬೇಕು.

ಕಾರವಾರ: ಕರ್ನಾಟಕ ಒಂದು ರಾಜ್ಯವಾಗಿ, ಕನ್ನಡ ಭಾಷೆಯನ್ನು ಪ್ರಧಾನ ಭಾಷೆಯನ್ನಾಗಿ ಇಟ್ಟುಕೊಂಡು ಉಳಿದ ಭಾಷೆಗಳನ್ನು ಒಳಗೊಂಡ ಆಡಳಿತ ಕ್ರಮವನ್ನು ರೂಪಿಸಿಕೊಳ್ಳಲೇಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 6.40 ಕೋಟಿ ಜನಸಂಖ್ಯೆಇದೆ. ಇದರಲ್ಲಿ 4.40 ಕೋಟಿ ಕನ್ನಡ ಮಾತೃಭಾಷೆ ಹೊಂದಿದವರು. ಉಳಿದ 2 ಕೋಟಿ ಜನ ಕನ್ನಡ ಮಾತೃಭಾಷೆ ಅಲ್ಲದ ಜನರಿದ್ದಾರೆ. ರಾಜ್ಯದಲ್ಲಿ ಒಟ್ಟು 230 ಭಾಷೆಗಳಿವೆ. ಕನ್ನಡವನ್ನು ಪ್ರಧಾನವಾಗಿ ಇಟ್ಟುಕೊಂಡು ಉಳಿದ ಭಾಷೆಗಳನ್ನು ಒಳಗೊಂಡ ಆಡಳಿತ ಕ್ರಮ ರೂಪಿಸಬೇಕು ಎಂದರು.

ರಾಜ್ಯದಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ 5 ಸಾವಿರ ಸ್ಮಾರಕಗಳಿವೆ. ಆ ಸ್ಥಳಗಳಲ್ಲಿ ಅದರ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸುವ ಫಲಕ ಅಳವಡಿಸಬೇಕು. ಇದಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರೊಂದಿಗೆ ಮಾತುಕತೆ ನಡೆಸಿದ್ದು ಅವರು ಸಮ್ಮತಿಸಿದ್ದಾರೆ ಎಂದರು.

ಈ ವರ್ಷದ ಕೊನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಡಿ ಉತ್ಸವ ನಡೆಸಲಾಗುವುದು. ಕನ್ನಡಪರ ಹೋರಾಟಗಾರರೊಂದಿಗೆ 2-3 ತಿಂಗಳಿಗೊಮ್ಮೆ ಸಂವಾದ ನಡೆಸಲು ಜಿಲ್ಲಾಧಿಕಾರಿ ಸಮ್ಮತಿಸಿದ್ದಾರೆ. ಕಾರವಾರದ ಕನ್ನಡಭವನ ಪುನರುಜ್ಜೀವನ ಮಾಡಿ ಜನೋಪಯೋಗಿಯಾಗಿ ಮಾಡಲಾಗುವುದು ಎಂದು ತಿಳಿಸಿದರು.

ಉತ್ತರಕನ್ನಡ ಬಹು ಭಾಷಿಕರ ಜಿಲ್ಲೆ. ಕೇಂದ್ರದ ಕೆಲವು ಯೋಜನೆಗಳಿವೆ. ಇಲ್ಲಿ ಕನ್ನಡೇತರರ ವಲಸೆ ಹೆಚ್ಚಿದೆ. ಅವರಿಗೆ ಕನ್ನಡ ಹೇಳಿಕೊಡಲು ಸರಿಯಾದ ವ್ಯವಸ್ಥೆ ಇಲ್ಲ. ಬ್ಯಾಂಕ್ ಗಳ ನೌಕರರಿಗೆ ಕನ್ನಡ ಕಲಿಯಲು ವ್ಯವಸ್ಥೆ ಆಗಬೇಕಿದೆ. ಈಗಾಗಲೇ ಜೋಯಿಡಾದಲ್ಲಿ ಪ್ರಾಧಿಕಾರದಿಂದ 2 ಕನ್ನಡ ಕಲಿಕಾ ಕೇಂದ್ರ ಆರಂಭಿಸಿದ್ದೇವೆ. ಕಾರವಾರದಲ್ಲೂ ಕಲಿಕಾ ಕೇಂದ್ರ ಆರಂಭಿಸಲು ಸಿದ್ಧರಿದ್ದೇವೆ. ಸರಳ ಕನ್ನಡದ ಪಠ್ಯದ ಮೂಲಕ 36 ಗಂಟೆಗಳಲ್ಲಿ ಕನ್ನಡ ಕಲಿಯಬಹುದು ಎಂದರು.

ಸ್ಥಳೀಯ ನ್ಯಾಯಾಲಯದಲ್ಲಿ ಕನ್ನಡ ಬಳಕೆ ಆಗಬೇಕಿದೆ. ವೈದ್ಯಾಧಿಕಾರಿಗಳು ರೋಗಿಗಳ ಹೆಸರನ್ನಾದರೂ ಕನ್ನಡದಲ್ಲಿ ಬರೆಯಬೇಕು. ಬಳಕೆಯಲ್ಲಿ ಭಾಷೆ ಬಂದರೆ ಮಾತ್ರ ಕನ್ನಡಭಾಷೆ ಉಳಿಯಲು ಸಾಧ್ಯ ಎಂದರು.

60 ವರ್ಷದ ಹಿಂದೆ ಉತ್ತರ ಕನ್ನಡದಲ್ಲಿ ಅಖಿಲ ಭಾರತದ ಸಾಹಿತ್ಯ ಸಮ್ಮೇಳನ ಆಗಿತ್ತು. ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಗಬೇಕು ಎಂದು ಮುಖ್ಯಮಂತ್ರಿ, ಕಸಾಪ ಅಧ್ಯಕ್ಷರು, ಸಚಿವರಿಗೆ ಒತ್ತಾಯಿಸುವುದಾಗಿ ಅವರು ತಿಳಿಸಿದರು.

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 1.50 ಲಕ್ಷದಷ್ಟು ವಿದ್ಯಾರ್ಥಿಗಳು ಕನ್ನಡದಲ್ಲಿ ಅನುತ್ತೀರ್ಣರಾಗಿದ್ದಾರೆ. ಆ ವಿದ್ಯಾರ್ಥಿಗಳ ಕನ್ನಡವನ್ನು ಉತ್ತಮ ಪಡಿಸುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.

ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿ ಮತ್ತು ವಿತರಣೆ ಸರಿ ಇಲ್ಲ. ಅದು ಸರಿ ಆಗಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಈ ಭಾಗದ ಪ್ರತಿನಿಧಿ ಯಾಕೂಬ್, ಫಣಿಕುಮಾರ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ದಿಲೀಪ್ ಶಶಿ ಇದ್ದರು.

ಸುದೀರ್ಘ ಇತಿಹಾಸ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾಯಿಸಬಾರದು ಎಂದು ಬಿಳಿಮಲೆ ಹೇಳಿದರು. ಧರ್ಮಸ್ಥಳವನ್ನು ಸರ್ಕಾರ ವಹಿಸಿಕೊಳ್ಳುವ ಕುರಿತು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ಕುಕ್ಕೆ ಸುಬ್ರಹ್ಮಣ್ಯದ ಉದಾಹರಣೆ ನೀಡಿ, ಅಲ್ಲಿಯ ಸಂಪನ್ಮೂಲವನ್ನು ಅಲ್ಲಿಯೇ ಬಳಸಿ ಅಭಿವೃದ್ಧಿ ಪಡಿಸುವುದಾದಲ್ಲಿ ಸರ್ಕಾರ ಪಡೆಯಬಹುದು ಎಂದರು.