ಸಾರಾಂಶ
ರಾಜ್ಯೋತ್ಸವದಲ್ಲಿ ಕನ್ನಡದ ಕಂಪು ಹರಡಿಸಿ, ನಾಡ ಪ್ರೇಮ ಮೆರೆದ ನಾಗಪ್ಪ ಉಪ್ಪಿನ್
ಕನನಡಪ್ರಭ ವಾರ್ತೆ ಕಲಬುರಗಿ
ಕನ್ನಡ ರಾಜ್ಯೋತ್ಸವ ದಿನದಂದು ತಾವು ಚಲಾಯಿಸುತ್ತಿರುವ ಬಸ್‌ಗೆ ತಮ್ಮ ಸ್ವಂತ ಹಣದಿಂದ ‘ಕನ್ನಡದ ತೇರು’ ಎಂದು ನಾಮಕರಿಸಿ, ಕನ್ನಡ ಬಾವುಟದ ಬಣ್ಣದಲ್ಲಿ ಶೃಂಗರಿಸಿದ ಕನ್ನಡದ ಕಂಪನ್ನು ಹರಡಿಸಿ, ನಾಡ ಪ್ರೇಮವನ್ನು ಮೆರೆದ ಸಾರಿಗೆ ಸಂಸ್ಥೆಯ ಚಾಲಕ ನಾಗಪ್ಪ ಉಪ್ಪಿನ್ ಅವರನ್ನು ಕಲಬುರಗಿಯ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ಸತ್ಕರಿಸಿ, ₹5 ಸಾವಿರ ಚೆಕ್ ನೀಡಿ ಗೌರವಿಸಿದರು.ನಂತರ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಫಜಲ್ಫುರ ಘಟಕದಲ್ಲಿ ಚಾಲಕರಾಗಿರುವ ನಾಗಪ್ಪ ಸಿದ್ದಪ್ಪ ಉಪ್ಪಿನ್ ಅವರ ಕನ್ನಡ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, 5 ಸಾವಿರ ನಗದು ನೀಡಿ ಪುರಸ್ಕರಿಸಿ, ಸಾರಿಗೆ ನೌಕರರ ಕನ್ನಡ ಅಭಿಮಾನ ಸರ್ವರಿಗೂ ಮಾದರಿಯಾಗಲಿ ಎಂದು ಹೇಳಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ತಮ್ಮ ಸ್ವಂತ ಹಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯ ದಿನದಂದು ಬಸ್‍ಗೆ ಅಲಂಕಾರ ಮಾಡಿ ಕನ್ನಡದ ಪ್ರೇಮವನ್ನು ಮೆರೆದ ನಾಗಪ್ಪ ಅವರು ಕನ್ನಡದ ಕಂಪು ಹರಡಲು ಕಾರಣಿಕರ್ತರಾಗಿದ್ದಾರೆ. ಈ ಕನ್ನಡ ಮನೋಭಾವನೆ ಎಲ್ಲರಲ್ಲಿ ಮೂಡಬೇಕಾಗಿದೆ ಎಂದು ಹೇಳೀದರು.ಆಸ್ಟ್ರೇಲಿಯಾ, ಕೆನಡಾ, ಮೆಲ್ಲೋನ್ ಸೇರಿದಂತೆ ವಿಶ್ವದ ಎಲ್ಲೆಡೆ ಕನ್ನಡ ಭಾಷೆಯನ್ನು ಅಧ್ಯಯನ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಕಲಿಕೆ ಎನ್ನುವುದು ಕೀಳರಿಮೆ ಎಂಬಂತಾಗಿರುವುದು ವಿಷಾದನೀಯ. ತನು ಕನ್ನಡ. ಮನ ಕನ್ನಡವಾಗುವ ಮೂಲಕ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.