ಕನ್ನಡದ ಬಗ್ಗೆ ಎಳೆಯರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳನ್ನು ಸರಳೀಕರಣಗೊಳಿಸಬೇಕಾಗಿದೆ

ಕನ್ನಡಪ್ರಭ ವಾರ್ತೆ, ತುಮಕೂರುಕನ್ನಡ ಭಾಷೆಯ ಕಡೆಗೆ ಹೊಸ ತಲೆಮಾರಿನ ಆಸಕ್ತಿ ಕಡಿಮೆಯಾಗಿದೆ. ಕನ್ನಡ ಪತನಮುಖಿಯಾಗಿದೆ. ಕನ್ನಡದ ಬಗ್ಗೆ ಎಳೆಯರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳನ್ನು ಸರಳೀಕರಣಗೊಳಿಸಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮುಂದಿನ ಯುವ ಪೀಳಿಗೆಗೆ ಕನ್ನಡಕೀರ್ತಿ ಉಳಿಸುವಿಕೆಯ ಜವಾಬ್ದಾರಿ’ ಎಂಬ ವಿಷಯದ ಕುರಿತು ಮಾತನಾಡಿದರು.ತೊಂಬತ್ತರ ದಶಕದ ಜಾಗತೀಕರಣದ ಬಳಿಕ ಕನ್ನಡ ಭಾಷೆ ದುರ್ಬಲಗೊಳ್ಳುತ್ತ ಸಾಗಿದೆ. ಕರ್ನಾಟಕದಲ್ಲಿ ಬೇರೆ ಭಾಷಿಕರೇ ಹೆಚ್ಚಾಗಿದ್ದಾರೆ. ಇಲ್ಲಿನ ಕೈಗಾರಿಕೆಗಳಲ್ಲೂ ಹೊರ ರಾಜ್ಯದವರೇ ಹೆಚ್ಚಾಗಿದ್ದಾರೆ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಕನ್ನಡ ಭಾಷೆಗೆ ವಿಸ್ತಾರ ಪರಂಪರೆಯೇನೋ ಇದೆ. ಆದರೆ ಉತ್ತರಾಧಿಕಾರಿಗಳಿಲ್ಲ ಎಂದು ವಿಷಾದಿಸಿದರು.

ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜಿ ಮಹಾರಾಜ್‌ ಮಾತನಾಡಿ, ಮಾತೃಭೂಮಿ,ಮಾತೃಭಾಷೆ, ತಾಯಿಯನ್ನು ಗೌರವಹಿತವಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಪಂಪ, ರನ್ನ,ಜನ್ನಅವರು ಬೆಳೆಸಿದ ಸಾಹಿತ್ಯ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಎಲ್ಲಾ ಕ್ಷೇತ್ರದಲ್ಲಿಯೂ ಕನ್ನಡಿಗರ ಸಂಖ್ಯೆ ಕಡಿಮೆಯಾಗಿರುವುದು ವಿಷಾದನೀಯ.ಕನ್ನಡಿಗರಾದ ನಾವು ಕನ್ನಡಕ್ಕೆ ದ್ರೋಹ ಮಾಡದೆ ಕನ್ನಡವನ್ನು ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸೋಣ ಎಂದು ಹೇಳಿದರು. ಪ್ರೇರಣಾ ಉಪನ್ಯಾಸ ಸಮಿತಿಯ ಅಧ್ಯಕ್ಷ ಪ್ರೊ.ಜಿ. ಸುದರ್ಶನರೆಡ್ಡಿ, ಸಂಚಾಲಕ ಡಾ.ನೀಲಕಂಠ ಎನ್.ಟಿ. ಉಪಸ್ಥಿತರಿದ್ದರು.