ಸಾರಾಂಶ
- ಎಚ್.ಕೆ.ಬಿ.ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬಭಾಷಾಭಿಮಾನ ಎನ್ನುವುದು ಬರಿ ತೋರಿಕೆಯಾಗಬಾರದು. ಉದ್ದೂದ್ದ ಭಾಷಣಕ್ಕೆ ಸೀಮಿತವಾಗಿ ಮತ್ತೊಬ್ಬರನ್ನು ಮೆಚ್ಚಿಸುವಂತಾಗಬಾರದು. ಸ್ವಯಂ ಪ್ರೇರಿತ ಗುಣ, ಮನಪೂರ್ವಕ ಸೇವೆ ಇದ್ದರೆ ನಾಡು ವಿಶಾಲವಾಗುತ್ತದೆ, ನುಡಿ ಹೃದಯ ಭಾಷೆಯಾಗುತ್ತದೆ. ಇಂಥ ವ್ಯಕ್ತಿತ್ವವನ್ನು ಹೊಂದಿ ಕನ್ನಡಾಭಿಮಾನಿಯಾಗಿರುವ ಸರ್ಕಾರಿ ಬಸ್ ನಿರ್ವಾಹಕ ನಟರಾಜ್ ಕುಂದೂರು ನಮ್ಮ ನಡುವಿನ ನಿಜವಾದ ಕನ್ನಡ ಸೇವಕ.ಪ್ರತಿನಿತ್ಯ ಬೆಳಿಗ್ಗೆ ೮-೩೦ಕ್ಕೆ ಸೊರಬ ಬಸ್ ನಿಲ್ದಾಣದಿಂದ ಶಿವಮೊಗ್ಗದ ಕಡೆಗೆ ಹೊರಡುವ ಕೆಎಸ್‌ಆರ್‌ಟಿಸಿ ವಾಹನ ಏರಿದರೆ ಕನ್ನಡದ ಮನೆಯೊಳಗೆ ಹೊಕ್ಕಂತಾಗುತ್ತದೆ. ಪ್ರಯಾಣಿಕರ ಆಸನದಲ್ಲಿ ಕನ್ನಡ ಅಕ್ಷರಮಾಲೆ ಕಂಗೊಳಿಸುತ್ತವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳು, ಕನ್ನಡದ ಮಹಾನ್ ಕವಿಗಳು ಹಾಗೂ ೧೯೧೫ರಿಂದ ೨೦೧೭ರ ವರೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾವಚಿತ್ರಗಳು, ೮೭೫ ನಾಡಗೀತೆಗಳು ಅಲ್ಲದೇ ಕರ್ನಾಟಕ ಜಿಲ್ಲೆಗಳ ನಕ್ಷೆ ಮತ್ತು ವಿವರಗಳು ಮುದ ನೀಡುತ್ತವೆ. ವಾಹನದ ಹೊರಭಾಗದಲ್ಲಿ ನದಿಗಳ ಹೆಸರುಗಳು ಪ್ರಯಾಣಿಕರಿಗಲ್ಲದೇ ಸಾರ್ವಜನಿಕರಿಗೂ ಪರಿಚಯಿಸುತ್ತವೆ. ಒಂದು ರೀತಿಯಲ್ಲಿ ಸರ್ಕಾರಿ ಕೆಂಪು ವಾಹನ ಕನ್ನಡ ಡಿಂಡಿಮ, ನಾಡು ನುಡಿಯ ಘಮಘಮ ಹಾಗೂ ಕನ್ನಡ ಸುಮಧುರ ಗೀತೆಗಳ ಸರಿಗಮ ಪಸರಿಸುತ್ತದೆ. ಸೊರಬದಿಂದ ಶಿವಮೊಗ್ಗದ ವರೆಗೆ ವೇಗದೂತ ವಾಹನವಾಗಿರುವುದರಿಂದ ನಿರ್ವಾಹಕ ನಟರಾಜ್ ಪ್ರಯಾಣಿಕರಿಗೆ ಕನ್ನಡದ ಬಗ್ಗೆ ರಸಪ್ರಶ್ನೆ ಕೇಳಿ ಸರಿ ಉತ್ತರ ಕೊಟ್ಟವರಿಗೆ ಕನ್ನಡ ಪುಸ್ತಕ ಬಹುಮಾನವಾಗಿ ನೀಡುತ್ತಾರೆ. ಮಾರ್ಗ ಮಧ್ಯದಲ್ಲಿ ತಾವೂ ಕೂಡಾ ಮೈಕ್ ಹಿಡಿದು ಕನ್ನಡ ಗೀತೆ ಹಾಡುವ ಮೂಲಕ ರಂಜಿಸುತ್ತಾರೆ. ಇವರಿಗೆ ಚಾಲಕ ಮಾರುತಿ ನಾಯ್ಕ್ ಸಾಥ್ ನೀಡುತ್ತಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದವರಾದ ನಟರಾಜ್ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಕ.ರಾ. ಸಾರಿಗೆ ಇಲಾಖೆಯಲ್ಲಿ ನಿರ್ವಾಹಕನಾಗಿ ಆಯ್ಕೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೇ ಕನ್ನಡಾಭಿಮಾನ ಬೆಳೆಸಿಕೊಂಡಿದ್ದ ನಟರಾಜ್ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ನಿನ್ನ ಕೊರಳು ಪಾಂಚಜನ್ಯವಾಗುತ್ತದೆ ಎಂಬ ರಾಷ್ಟ್ರಕವಿ ಕುವೆಂಪು ಕವನ ಸಾಲುಗಳಿಂದ ಪ್ರೇರೇಪಿತರಾದವರು. ಕಳೆದ ೨೦ ವರ್ಷಗಳಿಂದ ತಾವು ನಿರ್ವಹಿಸುವ ವಾಹನದಲ್ಲಿಯೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬಂದಿದ್ದಾರೆ.ಪ್ರಸ್ತುತ ಶಿಕಾರಿಪುರ ಕೆಎಸ್‌ಆರ್‌ಟಿಸಿ ಘಟಕದ ಸೊರಬ-ಶಿವಮೊಗ್ಗ ಮಾರ್ಗದ ಬಸ್‌ನಲ್ಲಿ ನಿರ್ವಾಹಕರಾಗಿದ್ದಾರೆ. ಕನ್ನಡ ರಕ್ಷಿಸಿ ಉಳಿಸಿ ಎಂದು ಎಲ್ಲರೂ ಬರಿ ಬಾಯಿ ಮಾತಿನಲ್ಲಿ ಹೇಳುತ್ತಾರೆ. ಆದರೆ ಈ ಕೆಲಸ ನಮ್ಮಿಂದಲೇ ಆರಂಭವಾಗಲಿ, ಇಲಾಖೆಯಿಂದಲೆ ನಾಂದಿಯಾಗಲಿ ಎಂಬ ಸದುದ್ದೇಶ ಹೊಂದಿ ತಾವು ಸರ್ಕಾರಿ ಸೇವೆಯಲ್ಲಿ ಇರುವವರೆಗೂ ಕನ್ನಡ ಉತ್ಸವ ಆಚರಿಸುತ್ತೇನೆ ಎನ್ನುವ ಸಂಕಲ್ಪ ಮಾಡಿರುವ ನಟರಾಜ್ ಆಚರಣೆಗೆಂದೇ ತಮ್ಮ ತಿಂಗಳ ವೇತನದಲ್ಲಿ ೨ ಸಾವಿರ ರು.ಗಳನ್ನು ಮೀಸಲಿಡುತ್ತಾರೆ.ಪ್ರಯಾಣಿಕರೇ ಧೈರ್ಯದಿಂದ ಹೇಳಿಕೊಳ್ಳಿ ನಾವು ಕನ್ನಡಿಗರು. ನೀವು ಎಲ್ಲೇ ಇರಿ ಹೇಗೇ ಇರಿ ಎಲ್ಲರೂ ನಿಮ್ಮ ಮನ ಮತ್ತು ಮನೆ ಎರಡೂ ಕನ್ನಡ ಮಯವಾಗಿರಲಿ ಎಂಬ ಸಂದೇಶವನ್ನು ಪ್ರಯಾಣಿಕರಿಗೆ ರವಾನಿಸುತ್ತಿದ್ದಾರೆ.ಇಂಥ ಕನ್ನಡ ಸೇವಕನಿಗೆ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ಅಪ್ಪಟ ಕನ್ನಡ ಅಭಿಮಾನಿ ಪ್ರಶಸ್ತಿ, ಗಡಿನಾಡು ಧ್ವನಿರಾಜ್ಯ ಕಾಸರಗೋಡು ಪ್ರಶಸ್ತಿ, ಕನ್ನಡ ಸೇವಕ, ವರ್ಷದ ಕನ್ನಡಿಗ ದಾವಣಗೆರೆ, ಸುವರ್ಣ ಕರ್ನಾಟಕ ಕಾಮಧೇನು ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಅನ್ಯ ಭಾಷೆಗಳಿಂದ ರಾಜ್ಯದ ರಾಜಧಾನಿಯಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿರುವ ಈಗಿನ ಸಂದರ್ಭದಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಪೂರಕ ವಾತಾವರಣ ಇಲ್ಲದಂತಾಗಿದೆ. ಕನ್ನಡಪರ ಹೋರಾಟಗಾರರು ನವೆಂಬರ್‌ನಲ್ಲಿ ಜಾಗರೂಕರಾಗಿ ತೆರೆಗೆ ಸರಿಯುತ್ತಾರೆ. ಇಂತಹ ಪರಿಸ್ಥಿತಿ ಇರುವಾಗ ಸಾರಿಗೆ ಇಲಾಖೆಯ ಒಬ್ಬ ಸಾಮಾನ್ಯ ನಿರ್ವಾಹಕ ತನ್ನದೇ ಸೇವಾ ಕ್ಷೇತ್ರದಲ್ಲಿ ತಾಯಿ ಭುವನೇಶ್ವರಿಯ ಒಡಲಪುತ್ರನಾಗಿ ಶಿಖರವೇರುತ್ತಾರೆ. ಹಾಗಾಗಿ ಕನ್ನಡ ಸಾಧಕ-ಸೇವಕ ನಟರಾಜ್‌ಗೆ ಕನ್ನಡ ಮನಗಳು ಹ್ಯಾಟ್ಸ್ಆಫ್ ಹೇಳಲೇಬೇಕು.
ನೆಲ-ಜಲ-ನಾಡು-ನುಡಿಯನ್ನು ಒಂದೇ ವೇದಿಕೆಯಲ್ಲಿ ಕಟ್ಟಬಲ್ಲ ಶಕ್ತಿ ಇರುವುದು ಕನ್ನಡ ಭಾಷೆಗೆ ಮಾತ್ರ. ಹಾಗಾಗಿ ಭಾಷೆಯನ್ನು ಉಳಿಸಿಕೊಂಡರೆ ಮಾತ್ರ ಕನ್ನಡಿಗರಿಗೆ ಯಶಸ್ಸು. ಅಲ್ಲದೇ ತಾವು ಮಾಡುವ ಕಾರ್ಯಕ್ಷೇತ್ರದಲ್ಲಿ ಕನ್ನಡ ಬೆಳೆಸಲು ಮುಂದಾದರೆ ಕನ್ನಡ ತಾಯಿ ಮಕ್ಕಳಾಗಿ ಜನಿಸಿದ್ದಕ್ಕೆ ಸಾರ್ಥಕತೆ ಬರುತ್ತದೆ. ತಾವು ನಿರ್ವಾಹಕ ಸೇವೆಯ ನಂತರವೂ ಕನ್ನಡಕ್ಕಾಗಿ ಬದುಕುತ್ತೇನೆ- ನಟರಾಜ್, ಕೆಎಸ್‌ಆರ್‌ಟಿಸಿ ನಿರ್ವಾಹಕ, ಶಿಕಾರಿಪುರ ಘಟಕ
ನಿರ್ವಾಹಕ ನಟರಾಜ್ ಕನ್ನಡ ಸೇವಕರಾಗಿ ನಮ್ಮ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಕನ್ನಡ ರಕ್ಷಿಸಿ, ಉಳಿಸಿ ಎನ್ನುವ ಘೋಷಣೆಯನ್ನು ಬರಿಯ ಬಾಯಿ ಮಾತಿನಲ್ಲಿ ಮಾತ್ರ ಹೇಳುತ್ತಾರೆ. ಆದರೆ ನಟರಾಜ್ ಅದಕ್ಕೆ ವ್ಯತಿರಿಕ್ತವಾಗಿ ಮಾಡಿತೋರಿಸಿದ್ದಾರೆ- ಸೌಮ್ಯ, ಕರಾರಸಾನಿ ಘಟಕ ವ್ಯವಸ್ಥಾಪಕಿ, ಶಿಕಾರಿಪುರ