ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣನ್ಯೂಸ್‌ ಸಹಭಾಗಿತ್ವದ ದಾಸರಹಳ್ಳಿ ಸಂಭ್ರಮಕ್ಕೆ ಭರಪೂರ ಸ್ಪಂದನೆ

| Published : Feb 04 2024, 01:31 AM IST

ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣನ್ಯೂಸ್‌ ಸಹಭಾಗಿತ್ವದ ದಾಸರಹಳ್ಳಿ ಸಂಭ್ರಮಕ್ಕೆ ಭರಪೂರ ಸ್ಪಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣನ್ಯೂಸ್‌ ಸಹಭಾಗಿತ್ವದ ದಾಸರಹಳ್ಳಿ ಸಂಭ್ರಮಕ್ಕೆ ಭರಪೂರ ಸ್ಪಂದನೆ. ಇಂದು (ಭಾನುವಾರ) ತೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯ ಎಂಇಐ ಲೇಔಟ್‌ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ‘ದಾಸರಹಳ್ಳಿ ಸಂಭ್ರಮ’ಕ್ಕೆ ಇಂದು (ಭಾನುವಾರ) ತೆರೆಬೀಳಲಿದೆ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡ ಪ್ರಭ ಸಹಯೋಗದಲ್ಲಿ ನಡೆಯುತ್ತಿರುವ ದಾಸರಹಳ್ಳಿ ಸಂಭ್ರಮಕ್ಕೆ ಎರಡನೇ ದಿನವಾದ ಶನಿವಾರವೂ ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದು ಬಂದಿತ್ತು. ವೀಕೆಂಡ್‌ ಸಂಭ್ರಮದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಜನರು ತಂಡೋಪ ತಂಡವಾಗಿ ಉತ್ಸವಕ್ಕೆ ಆಗಮಿಸುತ್ತಿದ್ದ ದೃಶ್ಯ ಕಂಡು ಬಂತು. ಬಹುತೇಕ ಜನರು ಮೈದಾನದಲ್ಲಿ ಆಹಾರ ಮಳಿಗೆಗಳು, ಶಾಪಿಂಗ್‌ ಮಳಿಗೆಗಳಿಗೆ ಲಗ್ಗೆ ಇಟ್ಟಿದ್ದರು. ತಮಗೆ ಇಷ್ಟವಾದ ಉಡುಪುಗಳು, ಅಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

ಇತರೆಡೆ ಸಿಗುವುದಕ್ಕಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ವಸ್ತುಗಳಿಗೆ ಸಾರ್ವಜನಿಕರು ಮಾರುಹೋಗಿದ್ದರು. ಹೆಂಗೆಳೆಯರಂತೂ ಅಲಂಕಾರಿಕ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಈ ನಡುವೆ ಮೊಬೈಲ್‌, ಸ್ಮಾರ್ಟ್‌ಫೋನ್‌, ಟ್ಯಾಬ್‌, ಕಂಪ್ಯೂಟರ್‌ಗಳಲ್ಲಿ ಮುಳುಗಿ ಹೋಗಿರುವ ಮಕ್ಕಳನ್ನು ಸೆಳೆಯಲು ಅಳವಡಿಸಲಾಗಿದ್ದ ವಿವಿಭ ಬಗೆಯ ಆಟಿಕೆಗಳು ಮಕ್ಕಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದವು.

ಸಾಂಪ್ರದಾಯಿಕ ಶೈಲಿಯ ಪುಳಿಯೊಗರೆ, ಕರದಂಟು, ಐಯ್ಯಂಗಾರ್‌ ಪುಳಿಯೊಗರೆ, ಸಿಮ್ಲಾ ಮಿರ್ಚಿ ಬಜ್ಜಿ, ಕೇರಳ ಹಲ್ವಾ, ರಾಗಿ ಪಾಪಡ್‌, ದಾವಣಗೆರೆ ಬೆಣ್ಣೆದೋಸೆ, ಚಿತ್ರಾನ್ನ, ಗಿರ್‌ಮಿಟ್‌, ದೋಸೆ, ಇಡ್ಲಿ ಇತ್ಯಾದಿ ಖಾದ್ಯಗಳ ನಡುವೆಯೇ ಪಾಶ್ಚಿಮಾತ್ಯ ಶೈಲಿಯ ಫಾಸ್ಟ್‌ಫುಡ್‌ ಮಳಿಗೆಗಳಿಗೂ ಹೆಚ್ಚಿನ ಬೇಡಿಕೆ ಕಂಡುಬಂತು.

ಶನಿವಾರ ಬೆಳಗ್ಗಿನಿಂದಲೇ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆದವು. ಮಕ್ಕಳಿಗೆ ವೇಷಭೂಷಣ, ಮಹಿಳೆಯರಿಗೆ ಅಡುಗೆ ಕಾರ್ಯಕ್ರಮ, ಬೊಂಬಾಟ್‌ ಜೋಡಿ ಸ್ಪರ್ಧೆಗಳು ನಡೆದವು. ಹತ್ತಾರು ಸಂಖ್ಯೆಲ್ಲಿ ಮಹಿಳೆಯರು, ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಸಂತಸಪಟ್ಟರು. ಆ ನಂತರ ಓಪನ್‌ ಸ್ಟೇಜ್‌ ಮತ್ತು ಗಾಯನ, ಸಾಗರ ತುರುವೆಕರೆ ಅವರಿಂದ ಮಿಮಿಕ್ರಿ, ರಾಗ ಮತ್ತು ತಂಡದವರಿಂದ ಮ್ಯೂಸಿಕಲ್‌ ನೈಟ್ಸ್‌ ಮತ್ತು ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳು ದಾಸರಹಳ್ಳಿ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದವು. ಈ ನಡುವೆಯೇ ದಾಸರಹಳ್ಳಿಯ ಸಾಧಕರಿಗೆ ಸನ್ಮಾನವೂ ಕೂಡ ನಡೆಯಿತು.

ದಾಸರಹಳ್ಳಿ ಸಂಭ್ರಮದಲ್ಲಿ ಮತ್ಸ್ಯಗಂಧ ಚಿತ್ರತಂಡ ನಟ ಪೃಥ್ವಿ ಅಂಬರ್, ಸಂಗೀತ ನಿರ್ದೇಶಕ, ನಟ ಪ್ರಶಾಂತ್ ಸಿದ್ದಿ ಭಾಗಿಯಾಗಿದ್ದರು. ಮತ್ಸಗಂಧ ಚಿತ್ರತಂಡವು ಸಂಭ್ರಮಕ್ಕೆ ಆಗಮಿಸಿದ ಚಿತ್ರಪ್ರೇಮಿಗಳೊಂದಿಗೆ ಕೆಲವೊತ್ತು ಮಾತುಕತೆ ನಡೆಸಿ ಗಮನ ಸೆಳೆಯಿತು. ಶಾಸಕ ಎಸ್‌.ಮುನಿರಾಜು ಅವರು ಚಿತ್ರತಂಡದವರನ್ನು ಸನ್ಮಾನಿಸಿದರು.

ಇಂದಿನ ಕಾರ್ಯಕ್ರಮ:

ಬೆಳಗ್ಗೆ 11ಕ್ಕೆ ಮುದ್ದುಮಗು ಮತ್ತು ವೇಷಭೂಷಣ(ಮಕ್ಕಳಿಗೆ), ಮಧ್ಯಾಹ್ನ 12ಕ್ಕೆ ಬೆಂಕಿರಹಿತ ಅಡುಗೆ (ಮಕ್ಕಳಿಗೆ), ಮಧ್ಯಾಹ್ನ 1.30ಕ್ಕೆ ಅಡುಗೆ ಮಹಾರಾಣಿ ಫಿನಾಲೆ (ಮಹಿಳೆಯರಿಗೆ), ಸಂಜೆ 4ಕ್ಕೆ ಚಿತ್ರಕಲಾ ಸ್ಫರ್ಧೆ, 6ಕ್ಕೆ ಬಹುಮಾನ ವಿತರಣೆ ಮತ್ತು ದಾಸರಹಳ್ಳಿ ಸಾಧಕರಿಗೆ ಸನ್ಮಾನ, ಸಂಜೆ 7ಕ್ಕೆ ‘ಹಾಸ್ಯ ಸಂಜೆ’ ಮಿಮಿಕ್ರಿ ಗೋಪಿ ಮತ್ತು ರಶ್ಮೀ ಶ್ರೀನಿವಾಸ ಅವರಿಂದ ಸಂಗೀತ ಸಂಜೆ. ರಾತ್ರಿ 8ಕ್ಕೆ ಇಂಡಿಯನ್‌ ಫೋಕ್‌ ಮ್ಯೂಸಿಕ್‌ ಬ್ಯಾಂಡ್‌ ‘ಜಂಭೆ ಝಲಕ್‌’ ಬಾಲು ಮತ್ತು ತಂಡದಿಂದ. 9ಕ್ಕೆ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮ.