ಕುಷ್ಟಗಿ: ಹಿಂದುಳಿದ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯಲ್ಲಿ ಕಲಿಯುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಕನ್ನಡಪ್ರಭ ಯುವ ಆವೃತ್ತಿ ಸಹಕಾರಿಯಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ಉಪಾಧ್ಯಕ್ಷೆ ಶಾರದಾ ಶೆಟ್ಟರ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮ ವಹಿಸಿ ವ್ಯಾಸಂಗ ಮಾಡಬೇಕು. ಪತ್ರಿಕೆ ಹಾಗೂ ಪುಸ್ತಕ ನಿರಂತರವಾಗಿ ಓದುವುದರಿಂದ ಜ್ಞಾನಾರ್ಜನೆ ಆಗುತ್ತದೆ. ಕನ್ನಡಪ್ರಭ ದಿನಪತ್ರಿಕೆ ಬಳಗದವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇವಲ ಒಂದು ರುಪಾಯಿ ವೆಚ್ಚದಲ್ಲಿ ಯುವ ಆವೃತ್ತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಮಾ.18ರಿಂದ ಆರಂಭವಾಗುವ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಕಲಿಸಿದ ತಂದೆ ತಾಯಿಗೆ ಹಾಗೂ ಶಿಕ್ಷಕರಿಗೆ ಉತ್ತಮ ಹೆಸರನ್ನು ತಂದುಕೊಡುವಲ್ಲಿ ಮುಂದಾಗಬೇಕು, ಧೈರ್ಯದಿಂದ ಪರೀಕ್ಷೆ ಎದುರಿಸಿ ಎಂದು ಶುಭ ಹಾರೈಸಿದರು.

ವಸತಿ ನಿಲಯದ ನೋಡಲ್ ಅಧಿಕಾರಿ ರೇಣುಕಾ ಚಳ್ಳಾರಿ ಮಾತನಾಡಿ, ಕನ್ನಡಪ್ರಭ ವಿದ್ಯಾರ್ಥಿಗಳಿಗೆ ಪೂರಕವಾದ ಪಠ್ಯವಿಚಾರ ಗಣಿತ, ವಿಜ್ಞಾನ, ಸಮಾಜ ಸೇರಿದಂತೆ ಹಲವಾರು ವಿಭಿನ್ನ ರೀತಿಯ ವಿಷಯಗಳನ್ನು ಮಕ್ಕಳಿಗೆ ತಲುಪಿಸುತ್ತಿದೆ. ಕೇವಲ ಒಂದು ರೂಪಾಯಿಗೆ ಪತ್ರಿಕೆ ನೀಡುವ ಕೆಲಸ ಮಾಡುತ್ತಿರುವದು ಶ್ಲಾಘನೀಯವಾಗಿದ್ದು ಇದಕ್ಕೆ ಸಹಕಾರ ನೀಡಿದ ಮಹನಿಯರಿಗೆ ಧನ್ಯವಾದ ತಿಳಿಸಿದರು.


ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ, ಕನ್ನಡಪ್ರಭ ಪತ್ರಿಕೆ ಕಳೆದ ಹಲವು ವರ್ಷಗಳಿಂದ ರಾಜ್ಯಾದ್ಯಂತ ಇಂತಹ ಕಾರ್ಯ ಹಮ್ಮಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಲ್ಲಿ ಕನ್ನಡಪ್ರಭ ಯುವ ಆವೃತ್ತಿಯ ಪಾತ್ರ ಪ್ರಮುಖವಾಗಿದೆ ಎಂದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ ಮಾತನಾಡಿ, ಕನ್ನಡಪ್ರಭ ಸಾಮಾಜಿಕ ಪರಿವರ್ತನೆಯಾಗುವ ನಿಟ್ಟಿನಲ್ಲಿ ನಿರಂತರ ಕಾರ್ಯ ಮಾಡುತ್ತಿದೆ. ಅದೇ ರೀತಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಯುವ ಆವೃತ್ತಿ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು,ಎಲ್ಲ ವಿದ್ಯಾರ್ಥಿಗಳು ತಮ್ಮ ಪಠ್ಯದ ಜತೆಗೆ ಯುವ ಆವೃತ್ತಿ ಓದುವ ಹವ್ಯಾಸ ಬೆಳೆಸಿಕೊಂಡು ಉತ್ತಮ ಅಂಕ ಗಳಿಸಬೇಕು ಎಂದರು.

ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಗಿರಿಜಾ ಮಾಲಿಪಾಟೀಲ, ಶೋಭಾ ಕಂದಕೂರು, ವಸತಿ ನಿಲಯದ ವಾರ್ಡನ್ ಸುಮಿತ್ರಾ ಬಿರಾದಾರ, ಕನ್ನಡಪ್ರಭ ತಾಲೂಕು ವರದಿಗಾರ ಪರಶಿವಮೂರ್ತಿ ಮಾಟಲದಿನ್ನಿ, ಶ್ರೀನಿವಾಸ ಕಂಟ್ಲಿ, ಚುಸಾಪ ಅಧ್ಯಕ್ಷ ಮಹೇಶ ಹಡಪದ, ಅಮರೇಶ ತಾರಿವಾಳ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿನಿಯರು ಇದ್ದರು.

ಕನ್ನಡಪ್ರಭ ಯುವ ಆವೃತ್ತಿ ನಮಗೆಲ್ಲ ಸಹಕಾರಿಯಾಗಿದೆ, ರಾಜ್ಯದ ಅನೇಕ ಕಡೆಗಳಲ್ಲಿ ನಡೆದ ವೈವಿಧ್ಯಮಯ ಕಾರ್ಯಕ್ರಮಗಳ ಜತೆಗೆ ಪ್ರಶಸ್ತಿ ಪಡೆದಿರುವ,ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವವರ ಕುರಿತು ಪತ್ರಿಕೆಯಲ್ಲಿ ಪ್ರಕಟಿಸಿ ಬೆಳಕಿಗೆ ತರುತ್ತಿದ್ದು, ಹಳ್ಳಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಯುವ ಆವೃತ್ತಿ ಹೆಸರಾಗಿದೆ. ಈ ಬಾರಿ ಪರೀಕ್ಷೆಗೆ ಯುವ ಆವೃತ್ತಿ ಅನುಕೂಲವಾಗಲಿದೆ ಎನ್ನುವ ವಿಶ್ವಾಸ ಹೊಂದಿದ್ದೇವೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.