ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ನ ಹಿಂಭಾಗ ‘ಕನ್ನಡಿಗ’ ಎಂದು ಬರೆಸಲಾಗಿದ್ದ ಸ್ಟಿಕ್ಕರನ್ನು ಘಟಕ ವ್ಯವಸ್ಥಾಪಕರು ತೆರವು ಮಾಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ನ ಹಿಂಭಾಗ ‘ಕನ್ನಡಿಗ’ ಎಂದು ಬರೆಸಲಾಗಿದ್ದ ಸ್ಟಿಕ್ಕರನ್ನು ಘಟಕ ವ್ಯವಸ್ಥಾಪಕರು ತೆರವು ಮಾಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಘಟಕ ವ್ಯವಸ್ಥಾಪಕರ ಕ್ರಮ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ಬಸ್‌ಗಳ ಹೊರಭಾಗ ಜಾಹೀರಾತು ಅಳವಡಿಕೆಗೆ ಆಕ್ಷೇಪ ವ್ಯಕ್ತವಾಗುತ್ತಿದೆ.

ಬಿಎಂಟಿಸಿಯ ಕೆಎ 51ಎಕೆ 7027 ನೋಂದಣಿ ಸಂಖ್ಯೆಯ ಎಲೆಕ್ಟ್ರಿಕ್‌ ಬಸ್‌ ಹಿಂಭಾಗದಲ್ಲಿ ಕನ್ನಡಿಗ ಎಂದು ಸ್ಟಿಕ್ಕರ್‌ ಅಳವಡಿಸಲಾಗಿತ್ತು. ಹಲವು ದಿನಗಳಿಂದ ಬಸ್‌ನ ಹಿಂಭಾಗ ಸ್ಟಿಕರ್‌ ಇತ್ತು. ಈ ಬಸ್‌ ಕೆಂಪೇಗೌಡ ಬಸ್‌ ನಿಲ್ದಾಣ-ಜನಪ್ರಿಯ ಲೇಔಟ್‌ ಮಾರ್ಗವಾಗಿ ಸಂಚರಿಸುತ್ತಿದ್ದು, ಮಂಗಳವಾರ ಬೆಳಗ್ಗೆ ಬಸನ್ನು ಮಾರ್ಗಕ್ಕೆ ತೆಗೆದುಕೊಂಡು ಹೋಗಲು ಚಾಲಕ ಮತ್ತು ನಿರ್ವಾಹಕ ಮುಂದಾಗಿದ್ದಾರೆ.

ಆಗ ಘಟಕ ವ್ಯವಸ್ಥಾಪಕರು ಬಸ್‌ನ ಹಿಂಭಾಗ ಅಳವಡಿಸಲಾಗಿರುವ ಕನ್ನಡಿಗ ಎಂಬ ಸ್ಟಿಕ್ಕರನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಿದ್ದಾರೆ. ಜತೆಗೆ ಸ್ಟಿಕ್ಕರ್‌ ತೆರವು ಮಾಡದಿದ್ದರೆ ಬಸ್ಸನ್ನು ಮಾರ್ಗಕ್ಕೆ ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅದರಿಂದಾಗಿ ಬಸ್‌ ಸಿಬ್ಬಂದಿ ಚಾಕುವಿನಿಂದ ಕನ್ನಡಿಗ ಸ್ಟಿಕ್ಕರನ್ನು ತೆರವು ಮಾಡಿದ್ದಾರೆ. ಈ ಇಡೀ ಪ್ರಕ್ರಿಯೆ ಸ್ಥಳದಲ್ಲಿ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಕರ್ನಾಟಕದಲ್ಲಿದ್ದು ಕನ್ನಡಿಗ ಎಂದು ಬರೆಸುವುದಕ್ಕೂ ಸ್ವಾತಂತ್ರ್ಯ ಇಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಅಲ್ಲದೆ, ಬಿಎಂಟಿಸಿ ಬಸ್‌ನ ಹೊರಭಾಗದಲ್ಲಿ ವಿವಿಧ ಬ್ರ್ಯಾಂಡ್‌ಗಳ ಜಾಹೀರಾತು ಅಳವಡಿಕೆಗೆ ಬಿಎಂಟಿಸಿ ಅಧಿಕಾರಿಗಳಿಂದ ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಆದರೆ, ಕನ್ನಡಿಗ ಎಂದು ಬರೆಸಿದ್ದನ್ನು ವಿರೋಧಿಸಿ, ಅದನ್ನು ತೆರವು ಮಾಡಿಸಲಾಗಿದೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಹಲವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.