ಕನ್ನಡಿಗರು ಉದಾರಿಗರು: ಶಾಸಕ ದಿನಕರ ಶೆಟ್ಟಿ

| Published : Nov 02 2024, 01:31 AM IST / Updated: Nov 02 2024, 01:32 AM IST

ಸಾರಾಂಶ

ಮುಂದಿನ ದಿನಗಳಲ್ಲಾದರೂ ಕನ್ನಡ ಉಳಿಸಿ, ಬೆಳೆಸುವ ಕಾರ್ಯಕ್ರಮಗಳು ಹೆಚ್ಚಲಿ ಎಂದು ಶಾಸಕ ದಿನಕರ ಶೆಟ್ಟಿ ಆಶಿಸಿದರು.

ಕುಮಟಾ: ಸಹಬಾಳ್ವೆ ಹಾಗೂ ಭಾಷಾಭಿಮಾನದ ವಿಷಯದಲ್ಲಿ ಕನ್ನಡಿಗರು ಉದಾರ ಮನಸ್ಸಿನವರು. ಹೀಗಾಗಿಯೇ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ನಾಡಿನಲ್ಲಿ ಅನ್ಯ ಭಾಷಿಕರೊಂದಿಗೆ ಕನ್ನಡಿಗರ ಅನ್ಯೋನ್ಯತೆ ಅಪರಿಮಿತವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.ಮಣಕಿ ಮೈದಾನದಲ್ಲಿ ಶುಕ್ರವಾರ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡಾಂಬೆಯನ್ನು ಪೂಜಿಸಿ ಮಾತನಾಡಿದರು.

ಮೈಸೂರು ರಾಜ್ಯದಿಂದ ಕರ್ನಾಟಕವೆಂದು ನಾಮಕರಣಗೊಂಡು ಸುವರ್ಣ ಸಂಭ್ರಮದಲ್ಲಿರುವ ನಾಡಿನಲ್ಲಿ ಕನ್ನಡ ರಾಜ್ಯೋತ್ಸವ ಸಾಂಕೇತಿಕವಾಗದೇ ಇಡೀ ದಿನ ಆಚರಿಸಬೇಕಾಗಿತ್ತು. ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಬಹುದಿತ್ತು. ನಾಡುನುಡಿ ವಿಚಾರದಲ್ಲಿ ಉತ್ಸಾಹ ಹೆಚ್ಚು ಬೇಕು. ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮವನ್ನು ರಾಜ್ಯೋತ್ಸವದಂದು ಹಮ್ಮಿಕೊಂಡಿದ್ದು, ಏಕಕಾಲಕ್ಕೆ ಲಕ್ಷಾಂತರ ಮಂದಿ ಕನ್ನಡ ಹಾಡುಗಳ ಮೂಲಕ ನುಡಿಪೂಜೆ ಸಲ್ಲಿಸಿದ್ದರು. ಮುಂದಿನ ದಿನಗಳಲ್ಲಾದರೂ ಕನ್ನಡ ಉಳಿಸಿ, ಬೆಳೆಸುವ ಕಾರ್ಯಕ್ರಮಗಳು ಹೆಚ್ಚಲಿ ಎಂದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಪುರಸಭೆ ಸದಸ್ಯರಾದ ಅನುರಾಧಾ ಬಾಳೇರಿ, ಗೀತಾ ಮುಕ್ರಿ, ತಹಸೀಲ್ದಾರ್ ರಾಜು. ವಿ.ಎಸ್., ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ, ಸಿಪಿಐ ಯೋಗೇಶ ಕೆ.ಎಂ. ಇತರರು ಇದ್ದರು. ತಾಪಂ ಇಒ ರಾಜೇಂದ್ರ ಭಟ್ಟ ಸ್ವಾಗತಿಸಿ, ವಂದಿಸಿದರು. ಮಂಜುನಾಥ ನಾಯ್ಕ ನಿರ್ವಹಿಸಿದರು. ಪಟ್ಟಣದ ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳಿಂದ ನಾಡುನುಡಿಯ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ನೆಲ್ಲಿಕೇರಿ ಮಾಸ್ತಿಕಟ್ಟೆ ವೃತ್ತದಿಂದ ಹಳೆಯ ಬಸ್ ನಿಲ್ದಾಣ, ಪೊಲೀಸ್ ಠಾಣೆ ಮಾರ್ಗವಾಗಿ ಮಣಕಿ ಮೈದಾನಕ್ಕೆ ಬಂದು ಸೇರಿತು.

ಹೊಸಳ್ಳಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಯಲ್ಲಾಪುರ: ತಾಲೂಕಿನ ಹೊಸಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ನ. ೧ರಂದು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕವೃಂದ, ಎಸ್‌ಡಿಎಂಸಿ ಅಧ್ಯಕ್ಷ ಆನಂದ ಶೆಟ್ಟಿ, ಸದಸ್ಯರು, ಊರಿನ ಹಿರಿಯರು, ವಿದ್ಯಾರ್ಥಿಗಳು ಮತ್ತು ೨೦೦೧- ೦೨ನೇ ಸಾಲಿನ ೧ನೆ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ತಾಯಿ ಕನ್ನಡಾಂಬೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಮುಖ್ಯಾಧ್ಯಾಪಕಿ ಗಾಯಿತ್ರಿ ಕರ್ನಾಟಕ ಮಾತನಾಡಿದರು.೨೦೦೧- ೦೨ನೇ ಸಾಲಿನ ೧ನೇ ತರಗತಿಯ ವಿದ್ಯಾರ್ಥಿಗಳಾದ ಬಜ್ಜು ಪಟಕಾರೆ, ಮಾಂಬು ಜೊರೆ, ರಾಮು ಜಾನಕರ, ರಾಮು ಜೆ., ಮಾಬುಲಿ ಎ., ಗಂಗಾರಾಮ ಡಿ., ಜಾನು ಡಿ., ಪಾಂಡು ಡಿ., ವಿಠ್ಠು ಕೆ., ತುಕಾರಾಮ ಇ., ಉದಯ ಎಸ್., ತುಕಾರಾಮ ಇ., ಕೇಶವ ಕೆ., ದಾದು ಇ, ರಾಮು ಬಿ., ಮಂಜುನಾಥ ಕೆ.,(ಸ್ನೇಹಿತ ಬಳಗ ಹೊಸಳ್ಳಿ) ತಾವು ವಿದ್ಯಾಭ್ಯಾಸ ಮುಗಿಸಿದ ಶಾಲೆಗೆ ಅತ್ಯವಶ್ಯಕವಾದ (ಬ್ಲೂಟೂತ್ ಸ್ಪೀಕರ್) ಅನ್ನು ಕಿರು ಕಾಣಿಕೆಯಾಗಿ ನೀಡಿದರು.