ಸಾರಾಂಶ
- ಸರ್ಕಾರಿ ಪ್ರಾಥಮ ದರ್ಜೆ ಕಾಲೇಜಿನಲ್ಲಿ 69 ನೇ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿಯೊಬ್ಬರು ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸೊರಬ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಜೆ.ಶಂಕರನಾಯ್ಕ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಆಶ್ರಯದಲ್ಲಿ ನಡೆದ 69 ನೇ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ 2 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಕವಿರಾಜ ಮಾರ್ಗಕಾರ ಕನ್ನಡಿಗರನ್ನು ಸುಂದರರು, ಚತುರರು, ವೀರರು ಹಾಗೂ ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳೆಂದು ವರ್ಣಿಸಿದ್ದಾರೆ. ಕನ್ನಡಿಗರು ಉದಾರಿಗಳಾಗಿದ್ದು ಎಲ್ಲಾ ಭಾಷಿಕರಿಗೂ ಮುಕ್ತ ಅವಕಾಶವನ್ನು ಕನ್ನಡ ನಾಡಿನಲ್ಲಿ ನೀಡಿದ್ದಾರೆ. ಆದರೆ, ಕನ್ನಡಿಗರ ಉದಾರತೆಯೇ ಕನ್ನಡಿಗರಿಗೆ ಮಾರಕವಾಗಿದೆ. ಕೇಂದ್ರ ಸರ್ಕಾರದ ಲೋಕಸೇವಾ ಆಯೋಗದ ಪರೀಕ್ಷೆ ಗಳು ಇಂಗ್ಲಿಷ್ ಮತ್ತು ಹಿಂದೆ ಭಾಷೆಯಲ್ಲಿರುವುದರಿಂದ ಕನ್ನಡಿಗರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಭಾಗದ ಅನಕ್ಷರಸ್ಥರಿಗೆ, ಶ್ರಮಿಕರಿಗೆ ಇಂಗ್ಲಿಷ್ ಭಾಷೆಗಳ ಅರಿವಿನ ಕೊರತೆಯಿಂದ ಸಂಕಷ್ಟಕ್ಕೆ ಗುರಿ ಯಾಗುತ್ತಿ ದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದ ಕಚೇರಿ ಮತ್ತು ಬ್ಯಾಂಕುಗಳಲ್ಲೂ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಬೇಕು. ಕನ್ನಡಿ ಗರು ತಮ್ಮ ನಾಡು, ನುಡಿ, ಜಲದ ಪ್ರಶ್ನೆ ಬಂದಾಗ ಒಗ್ಗೂಡಿ ಹೋರಾಟ ಮಾಡಬೇಕು. ಸರೋಜಿ ಮಹಿಷಿ ವರದಿ ಜಾರಿಯಾಗಬೇಕು ಒತ್ತಾಯಿಸಿದರು.ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜಿ.ಸವಿತ ಮಾತನಾಡಿ, ಕನ್ನಡ ಎನ್ನುವುದು ನಾಡು, ನುಡಿ, ಜನಾಂಗವಷ್ಟೇ ಅಲ್ಲ. ಅದೊಂದು ಸಂಸ್ಕೃತಿ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಸ್ಥಾನಮಾನ ಸಿಗಬೇಕು. ಆಡಳಿತ ಭಾಷೆಯಿಂದ ಹಿಡಿದು ಶಿಕ್ಷಣ ಮಾಧ್ಯಮದವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಭಾಷೆಗೆ ಅಗ್ರಸ್ಥಾನ ಲಭ್ಯವಾಗಬೇಕು. ಕರ್ನಾಟಕದ ಏಕೀಕರಣಕ್ಕಾಗಿ ಬಹಳಷ್ಟು ಸಾಹಿತಿಗಳು, ಹೋರಾಟಗಾರರು ಶ್ರಮಿಸಿದ್ದಾರೆ. ಅವರ ಶ್ರಮ ಸಾರ್ಥಕವಾಬೇಕಾದರೆ ಕನ್ನಡಿಗರೆಲ್ಲರೂ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸಬೇಕು. ಪ್ರಸ್ತುತ ಕನ್ನಡ ಭಾಷೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಮೊದಲು ಸಂಸ್ಕೃತ ಇಂದು ಅಂತಾರಾಷ್ಟ್ರೀಯ ಭಾಷೆ ಮತ್ತು ರಾಷ್ಟ್ರೀಯ ಭಾಷೆ ಹೆಸರಿನಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಹೇರಿಕೆ ಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಅಸ್ಮಿತೆ ಉಳಿಸಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಧನಂಜಯ ಮಾತನಾಡಿ, ಕನ್ನಡಿಗರು ನಾಡು, ನುಡಿಯ ಬಗೆಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಆ ಮೂಲಕ ಕರ್ನಾಟದ ಅಭಿವೃದ್ಧಿಗೆ ಶ್ರಮಿಸಬೇಕು. ಕನ್ನಡ ಆಡಳಿತ ಭಾಷೆಯಾಗಿ ಜಾರಿಯಾಗ ಬೇಕಾಗಿದೆ ಎಂದರು.ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಎಚ್.ಲಕ್ಷ್ಮಣ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಚನ್ನಗಿರಿ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಎಚ್. ಲಕ್ಷ್ಮಣನಾಯ್ಕ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಪ್ರಸಾದ್, ಸಾಂಸ್ಕೃತಿಕ ವಿಭಾಗದ ಸಂಚಾಲಕ ಜೆ.ಮಂಜುನಾಥ್ ನಾಯ್ಕ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸತೀಶ್, ಸಹಾಯಕ ಪ್ರಾಧ್ಯಾಪಕಿ ಮಂಜುಶ್ರೀ ಇದ್ದರು.