ಸಾರಾಂಶ
ರಾಣಿಬೆನ್ನೂರು: ಕನ್ನಡಿಗರಿಗೆ ಖಾಸಗಿ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸಬೇಕು ಹಾಗೂ ಕನ್ನಡದ ಅಸ್ತಿತ್ವಕ್ಕೆ ಮತ್ತು ಏಳಿಗೆಗೆ ಸರ್ಕಾರವು ಮುಂದಾಗಬೇಕು ಎಂದು ಒತ್ತಾಯಿಸಿ 10000ಕ್ಕೂ ಅಧಿಕ ಕನ್ನಡ ಅಭಿಮಾನಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಮಂಜುನಾಥ್‌ದೇವ ಹೇಳಿದರು. ನಗರದಲ್ಲಿ ಭಾನುವಾರ ರಾಜ್ಯ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಮಾರು 50 ವರ್ಷಗಳಿಂದ ಕನ್ನಡ ನಾಡಿನಲ್ಲಿಯೇ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಪ್ರತಿ ವರ್ಷ ಕರ್ನಾಟಕದಲ್ಲಿ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪಡೆದು ಕಾಲೇಜುಗಳಿಂದ ಹೊರಬರುತ್ತಿದ್ದು ಅವರುಗಳಲ್ಲಿ ಬಹುತೇಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಇದರಿಂದ ಬಹುತೇಕರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ದೊರೆಯದಿರುವುದು ನೋವಿನ ಸಂಗತಿಯಾಗಿದೆ. ಬೆಂಗಳೂರಿನ ಐಟಿ ಬಿಟಿ ಕಂಪನಿಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಪ್ರಾತಿನಿತ್ಯ ದೊರಕುತ್ತಿರುವುದು ಬಹಳಷ್ಟು ನೋವುಂಟು ಮಾಡಿದೆ. ಇಂತಹ ಪದ್ಧತಿ ಬದಲಾಗಬೇಕು ಮತ್ತು ಕನ್ನಡಿಗರಿಗೆ ಅವಕಾಶ ಸಿಗಬೇಕು. ಕನ್ನಡದವರ ನೆಲದಲ್ಲೇ ಕನ್ನಡಿಗರಿಗೆ ಅನ್ಯಾಯವಾದರೆ ವೇದಿಕೆ ಸುಮ್ಮನಿರುವುದಿಲ್ಲ. ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ಕಲಿಕೆಯ ಸಂದರ್ಭಗಳಲ್ಲೂ ಸಹ ಅನ್ಯಾಯವಾಗುತ್ತಿದೆ. ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನ ಹರಿಸದಿರುವುದು ಖೇದಕರ ಸಂಗತಿ. ಕರ್ನಾಟಕವನ್ನು ಆಳಿದ ಬಹುತೇಕ ಪಕ್ಷಗಳು, ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಸಹ ಕನ್ನಡದ ಬಗ್ಗೆ ಅಭಿಮಾನ ಹಾಗೂ ಇಚ್ಛಾಶಕ್ತಿ ಹೊಂದದೆ ನಿರ್ಲಕ್ಷ್ಯ ಮಾಡುತ್ತಾ ಬಂದಿರುವುದು ಇಂದಿನ ಕನ್ನಡದ ಅಧೋಗತಿಗೆ ಕಾರಣವಾಗಿರುವುದು ಶೋಚನೀಯ ಸ್ಥಿತಿಗೆ ತಲುಪಿದೆ ಎಂದರು. ಕನ್ನಡದ ಅಳಿವು ಉಳಿವು ಮತ್ತು ಕನ್ನಡಿಗರಿಗೆ ಖಾಸಗಿ ಕ್ಷೇತ್ರಗಳಲ್ಲಿ ಹಾಗೂ ಸರ್ಕಾರದ ಉದ್ಯೋಗಗಳಲ್ಲಿ ಹೆಚ್ಚಿನ ಆದ್ಯತೆ ದೊರೆಯಬೇಕಾದರೆ ಡಾ. ಸರೋಜಿನಿ ಮಹಿಷಿ ವರದಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದೊಂದೇ ಏಕೈಕ ಮಾರ್ಗವಾಗಿದೆ. ಒಟ್ಟಾರೆ ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಗಳ ಮೀಸಲಾತಿ ನೀಡಬೇಕು ಹಾಗೂ ಕನ್ನಡದ ಅಸ್ತಿತ್ವ ಉಳಿಯಬೇಕೆಂದು ಒತ್ತಾಯಿಸಿ ಅ. 19ರಂದು ಬೆಂಗಳೂರಿನ ಟೌನ್ ಹಾಲಿನಿಂದ ಮುಖ್ಯಮಂತ್ರಿ ಮನೆಯವರೆಗೂ ಬೃಹತ್ ಪ್ರತಿಭಟನೆ ಕೈಗೊಳ್ಳಲು ಈಗಾಗಲೇ ನಿರ್ಧರಿಸಲಾಗಿದೆ ಎಂದರು. ಕನ್ನಡ ಜಾಗೃತಿ ವೇದಿಕೆ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ದುಗ್ಗತ್ತಿ, ರಾಜ್ಯ ಕಾರ್ಯದರ್ಶಿ ಕವಿತಾ ಪೇಟೆಮಠ, ಹನುಮಂತಪ್ಪ ಕಬ್ಬಾರ, ಮಧುಮತಿ ಮಾಗನೂರ, ರತ್ನಾ ಹೊರಕೇರಿ, ನಯನಾ ಪಿ.ಎಚ್. ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))