ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮ ಮಕ್ಕಳಿಗೆ ಶಾಲಾ ಪಠ್ಯದ ಜೊತೆಯಲ್ಲೇ ಭವಿಷ್ಯದ ಬದುಕನ್ನು ಗಟ್ಟಿಯಾಗಿ ರೂಪಿಸಿಕೊಳ್ಳುವ ಕಲೆಯನ್ನು ಕಲಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ ತಿಳಿಸಿದರು.ನಗರದ ಹೆಬ್ಬಾಳಿನ ಕನ್ನಿಕಾ ಕಾವೇರಿ ಶಾಲೆಯಲ್ಲಿ ಮೈಸೂರು ಸಸ್ಯಾರಾಧನಾ ಸಮಿತಿ ಮತ್ತು ಡಾ.ಡಿ. ಮಾದೇಗೌಡ ಸೇವಾ ಪ್ರತಿಷ್ಟಾನವು ಆಯೋಜಿಸಿದ್ದ ಸಸ್ಯಾರಾಧನೆ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಅವರು ಬಹುಮಾನ ವಿತರಿಸಿ ಮಾತನಾಡಿದರು.
ಮುಂದೆ ಈ ದೇಶವನ್ನಾಳುವ ಮಕ್ಕಳಲ್ಲಿ ಛಲದಿಂದ ಬದುಕುವ ಕಲೆ ಕಲಿಸದಿದ್ದರೆ, ಅವರು ಕಲಿಯುವ ಯಾವ ಶಿಕ್ಷಣವೂ ಪ್ರಯೋಜನವಾಗುವುದಿಲ್ಲ. ಕಷ್ಟದಲ್ಲಿ ಬೆಳೆದ ಮಕ್ಕಳು ಜೀವನದ ಅರ್ಥ ಚೆನ್ನಾಗಿ ಕಲಿತಿರುತ್ತವೆ. ಸುಖದಲ್ಲಿ ಬೆಳೆದ ಮಕ್ಕಳು ಜೀವನ ಸರಿಯಾಗಿ ರೂಪಿಸಿಕೊಳ್ಳದೆ ಹಾಳು ಮಾಡಿಕೊಳ್ಳುತ್ತವೆ. ಹೀಗಾಗಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯೇತರ ವಿಷಯವಾಗಿ ಜೀವನದಲ್ಲಿ ಬರುವ ಕಷ್ಟ ಎದುರಿಸಿ ನಿಲ್ಲುವ ಬದುಕುವ ಕಲೆ ಕಲಿಸಬೇಕು ಎಂದರು.ವಿದ್ಯಾವಂತರಲ್ಲೇ ಬದುಕುವ ಬಗ್ಗೆ ಅಸಹನೆ ಅಶಿಸ್ತು ಹೆಚ್ಚಾಗುತ್ತಿದೆ. ಇದರಿಂದ ವಿದ್ಯಾವಂತರಲ್ಲೇ ಸಣ್ಣಪುಟ್ಟ ಕಷ್ಟಗಳಿಗೂ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಪ್ರವೃತ್ತಿ ಬೆಳೆಯುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಆತ್ಮಹತ್ಯೆ ಪಿಡುಗು ಹೆಚ್ಚಾಗುತ್ತಿದೆ. ಹೆತ್ತ ಮಕ್ಕಳನ್ನು ಕೊಲ್ಲುವವರಿಗೆ ಭಗವಂತ ರೌರವ ನರಕ ಕಾಣಿಸುತ್ತಾನೆ. ಆದ್ದರಿಂದ ಮಕ್ಕಳನ್ನು ನಿಮಗೆ ಸಾಕಲಾಗದಿದ್ದರೂ ಪರವಾಗಿಲ್ಲ, ಕೊಲ್ಲುವ ನೀಚ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ಸ್ವಾತಂತ್ರ್ಯದ ಹೊತ್ತಿನಲ್ಲಿ ತಿನ್ನಲಿಕ್ಕೆ ಉಡಲಿಕ್ಕೆ ಬಡತನವಿತ್ತು. ದುಡಿಯಲಿಕ್ಕೆ ಕೆಲಸವಿಲ್ಲದಂಥ ದುಸ್ಥಿತಿ ಇತ್ತು. ಆದರೆ, ಈಗ ನಾವು ರೈತರ ನಿಸ್ವಾರ್ಥ ದುಡಿಮೆಯಿಂದ ಮತ್ತು ಕಾರ್ಮಿಕರ ನಿಷ್ಟಾವಂತ ಕೆಲಸದಿಂದ ದೇಶದ ಪ್ರತಿಯೊಬ್ಬರಿಗೂ ಅನ್ನ-ಬಟ್ಟೆ ದೊರಕುವಂತಾಗಿದೆ. ಹಿಂದಿನಂತೆ ಕಡು ಕಷ್ಟಪಡುವ ಕಾಲ ಈಗಿಲ್ಲ. ನಮ್ಮ ಜೀವನ ಸುಧಾರಿಸಿ ಬದುಕು ಹಸನಾಗಿದೆ ಎಂದರು.
ನಾವೆಲ್ಲಾ ಪರಸ್ಪರ ಸೌಹಾರ್ದ ವಾತಾವರಣ ರೂಪಿಸಿಕೊಂಡು ಆರೋಗ್ಯವಂತ ಮನಸ್ಸಿನಿಂದ ಉತ್ತಮ ಸಮಾಜ ರೂಪಿಸಿಕೊಳ್ಳಬಹುದಾಗಿದೆ. ಆದ್ದರಿಂದ ಮಕ್ಕಳಿಗೆ ನಮ್ಮ ಕಷ್ಟದ ಇತಿಹಾಸ ಹೇಳುತ್ತಾ, ಅವರ ಭವಿಷ್ಯ ಹೇಗೆ ಸುಖವಾಗಿ ರೂಪಿಸಿಕೊಳ್ಳಬಹುದೆಂಬುದನ್ನು ದೃಷ್ಟಾಂತ ಸಹಿತ ವಿವರಿಸಿ ಮನದಟ್ಟು ಮಾಡಿಸಬೇಕು ಎಂದು ಹೇಳಿದರು.
ಇದೇ ವೇಳೆ ಕನ್ನಿಕಾ ಕಾವೇರಿ ಶಾಲೆಯ ನೂತನ ಗ್ರಂಥಾಲಯ ಮತ್ತು ವಿಜ್ಞಾನ ಪ್ರಯೋಗಾಲಯವನ್ನು ಡಿ. ಮಾದೇಗೌಡರು ಉದ್ಘಾಟಿಸಿದರು. ಸಸ್ಯಾರಾಧನೆ ಪ್ರಬಂಧ ಸ್ಪರ್ಧೆ ವಿಜೇತರಾದ ಐವರು ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಡಿ. ಮಾದೇಗೌಡ ಸೇವಾ ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಕುಂಬಾರಕೊಪ್ಪಲು ದಿನೇಶ್, ಕನ್ನಿಕಾ ಕಾವೇರಿ ಶಾಲೆಯ ಅಧ್ಯಕ್ಷ ಲೋಕೇಶ್ ಅಪ್ಪಣ್ಣ, ಕಾರ್ಯದರ್ಶಿ ಎಂ.ಸಿ. ಚೋಂದಮ್ಮ, ಮುಖ್ಯೋಪಾಧ್ಯಾಯಿನಿ ಕೆ.ಎ. ಮನೋರಮ, ಗ್ರಂಥಾಲಯ ಮುಖ್ಯಸ್ಥ ವಿ. ಪ್ರಶಾಂತ್, ವಿಜ್ಞಾನ ಪ್ರಯೋಗಾಲಯದ ನಿರ್ವಾಹಕಿ ಹೇಮಲತಾ ಮೊದಲಾದವರು ಇದ್ದರು.