ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕವಿದ್ದು, ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಉಪಚುನಾವಣೆ ಮುಗಿದ ತಕ್ಷಣವೇ ನಿಮ್ಮನ್ನು ನಿಮ್ಮವರೇ ಕುರ್ಚಿಯಿಂದ ಕೆಳಗಿಳಿಸುತ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮುಖ್ಯಮಂತ್ರಿಗಳಿಗೆ ಸೂಚ್ಯವಾಗಿ ಎಚ್ಚರಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮ, ಮೂಡಾ ಹಗರಣ ಹೀಗೆ ಸಾಲು ಸಾಲು ಹಗರಣಗಳ ಬೆನ್ನಲ್ಲೇ ವಕ್ಫ್ ಮಂಡಳಿ ಮುಖಾಂತರ ರೈತರು, ಜನ ಸಾಮಾನ್ಯರು, ಮಠ ಮಾನ್ಯಗಳು, ದೇವಸ್ಥಾನಗಳ ಆಸ್ತಿ ಕಬಳಿಸಲು ಹೊರಟ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕವಿದೆ ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭ್ರಷ್ಟ, ತುಘಲಕ್ ಸರ್ಕಾರದ ವಿರುದ್ಧ ಬಿಜೆಪಿ ಇಂದು ರಾಜ್ಯವ್ಯಾಪಿ ಹೋರಾಟ ನಡೆಸಿದೆ. ನಮ್ಮ ಹೋರಾಟ ಅಲ್ಪಸಂಖ್ಯಾತರ ವಿರುದ್ಧ ಅಲ್ಲ. ರೈತರ, ಮಠ ಮಾನ್ಯಗಳು, ಮಂದಿರ, ಸರ್ಕಾರಿ ಜಮೀನು ಕಳಿಸಿದವರ ವಿರುದ್ಧ ಎಂದು ಹೇಳಿದರು.ವಕ್ಫ್ ಸಚಿವ ಜಮೀರ್ ಅಹಮ್ಮದ್ ಓರ್ವ ಮತಾಂಧ. ವಸತಿ ಸಚಿವ ಎನ್ನುವುದನ್ನೇ ಮರೆತು, ಕಾನೂನು ಬಾಹಿರವಾಗಿ ಆಸ್ತಿ ಕಬಳಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಿಎಂ ಸಿದ್ದರಾಮಯ್ಯ ಮೇಲೆ ಮೂಡಾ ಹಗರಣದಲ್ಲಿ ಕಾನೂನು ತೂಗುಗತ್ತಿ ನೇತಾಡುತ್ತಿದೆ. ಈಗ ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ರೈತರ ಕಣ್ಣೀರೊರೆಸುವ ನಾಟಕ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರೈತರು, ಮಠ, ಮಂದಿರ, ಜನ ಸಾಮಾನ್ಯರ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಕಬಳಿಸಲು ನಾವು ಅವಕಾಶ ನೀಡುವುದಿಲ್ಲ. ರೈತರ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ಬಂದಿದೆಯೆಂದರೆ ಏನರ್ಥ? ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೆಯೋ ಅಥವಾ ಮತಾಂಧ ಜಮೀರ್ ಅಹಮ್ಮದ್‌ನ ಸರ್ಕಾರ ಇದೆಯೋ? ಜಮೀರ್ ಇದೇ ರೀತಿ ಹುಚ್ಚಾಟ ಮುದುವರಿಸಿದರೆ ಪಾಕಿಸ್ಥಾನಕ್ಕೆ ಓಡಿಸುತ್ತೇವಷ್ಟೇ. ಹುಷಾರ್ ಎಂದು ಅವರು ಎಚ್ಚರಿಸಿದರು.ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್‌ನಲ್ಲಿ ಲೋಕಸಭಾ ಅಧಿವೇಶನದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ನರೇಂದ್ರ ಮೋದಿ ಕೈ ಬಲಪಡಿಸಲು ರಾಜ್ಯದ ಸಮಸ್ತ ಜನತೆಯೂ ಮೋದಿಗೆ ಪತ್ರ ಬರೆಯುವ ಮೂಲಕ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಿಎಂ ಸಿದ್ದರಾಮಯ್ಯನವರಿಗೆ ನಿಜವಾಗಿಯೂ ರಾಜ್ಯದ ರೈತರ ಪರ ಕಾಳಜಿ ಇದ್ದರೆ ತಕ್ಷಣವೇ ಪಹಣಿಯ ಕಲಂ 11ರಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದಾಗಿರುವುದನ್ನು ರದ್ಧುಪಡಿಸಬೇಕು. ಸಚಿವ ಜಮೀರ್ ಅಹಮ್ಮದ್‌ಗೆ ಸಚಿವ ಸಂಪುಟದಿಂದ ತಕ್ಷಣವೇ ಕೈಬಿಡಬೇಕು. ಜಮೀರ್‌ಗೆ ವಜಾ ಮಾಡುವುದಿಲ್ಲವೆಂದರೆ ನಿಮ್ಮ ಸರ್ಕಾರವನ್ನೇ ಜನರು ವಜಾ ಮಾಡುತ್ತಾರೆ ಎಂದು ಅವರು ಸೂಚ್ಯವಾಗಿ ಹೇಳಿದರು.ಈ ವೇಳೆ ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಪಿ.ಸಿ.ಶ್ರೀನಿವಾಸ ಭಟ್, ಪ್ರವೀಣ ಜಾಧವ್, ರಾಜು ವೀರಣ್ಣ ಇತರರು ಇದ್ದರು.